ಧಾರವಾಡ:

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಂದು ತಿಂಗಳು ಮಾತ್ರ ಬಾಕಿ ಉಳಿದಿದ್ದು ಉತ್ತಮ ಫಲಿತಾಂಶಕ್ಕೆ ಮಕ್ಕಳಾದಿಯಾಗಿ ಶಿಕ್ಷಕರು, ಶಿಕ್ಷಣಾಧಿಕಾರಿ ಹಾಗೂ ಪಾಲಕರು ಸಹ ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಹೇಳಿದರು.

ಶಾಲಾ ಶಿಕ್ಷಣ ಇಲಾಖೆಯಲ್ಲಿ ಸೋಮವಾರ ನಡೆದ ಜ್ಞಾನ ಸಿಂಚನ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇಡೀ ವರ್ಷ ಓದಿದರೂ ಒಂದೊಂದು ವಿಷಯದಲ್ಲಿ ಮಕ್ಕಳಿಗೆ ಕೆಲವು ಗೊಂದಲ ಇರುತ್ತವೆ. ಆದ್ದರಿಂದ ಫಲಿತಾಂಶ ಸುಧಾರಣೆಗೆ ಮಕ್ಕಳ ಸಮಸ್ಯೆ ಹಾಗೂ ಗೊಂದಲಗಳಿಗೆ ವಿಷಯವಾರು ಶಿಕ್ಷಕರು ಸ್ಪಂದಿಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸುತ್ತಿದ್ದಂತೆ ಕೆಲವು ಮಕ್ಕಳು ಅಧೈರ್ಯರಾಗುತ್ತಾರೆ. ಅಂತಹ ಮಕ್ಕಳಿಗೆ ಕೌನ್ಸೆಲಿಂಗ್‌ ಮೂಲಕ ಧೈರ್ಯ ತುಂಬಬೇಕು. ಒಟ್ಟಾರೆ ಒಂದು ತಿಂಗಳ ಅವಧಿಯಲ್ಲಿ ಸಂಪನ್ಮೂಲ ಶಿಕ್ಷಕರು, ಮೇಲ್ವಿಚಾರಕರು ಹಾಗೂ ಶಿಕ್ಷಣಾಧಿಕಾರಿ ಪ್ರತಿ ನಿತ್ಯ ಶಾಲೆಗೆ ಸಂದರ್ಶನ ನೀಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿ ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕಾರ್ಯ ಮಾಡಬೇಕೆಂದು ಸೂಚಿಸಿದರು.

ಇದಕ್ಕೂ ಮುಂಚೆ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮಕ್ಕಳಿಂದ ಬಂದ ಕರೆ ಸ್ವೀಕರಿಸಿ ಅವರ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಹಾಗೂ ಸಂಪನ್ಮೂಲ ಶಿಕ್ಷಕರಿಂದ ಪರಿಹಾರ ಸಹ ನೀಡಿದರು.

ಹಳೇಗನ್ನಡ ಓದು-ಬರಹ ಕಷ್ಟವಾಗುತ್ತಿದೆ ಎಂದು ಓರ್ವ ವಿದ್ಯಾರ್ಥಿನಿ ತನ್ನ ಸಮಸ್ಯೆ ಹೇಳಿಕೊಂಡರೆ, ಮತ್ತೊಂದು ವಿದ್ಯಾರ್ಥಿ ಓದಿರುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಲಾಗುತ್ತಿಲ್ಲ ಎಂಬ ಅಸಹಾಯಕತೆ ತೋರಿತು. ಆಗ, ಮಕ್ಕಳಿಗೆ ಸಮಾಧಾನದಿಂದ ಉತ್ತರಿಸಿದ ಜಿಲ್ಲಾಧಿಕಾರಿ, ಹೆಚ್ಚು ಬೆಳಗಿನ ಹೊತ್ತು ಓದುವುದನ್ನು ರೂಢಿಮಾಡಿಕೊಳ್ಳಬೇಕು. ಯಾವ ವಿಷಯ ಸ್ಮರಣೆಯಲ್ಲಿ ಉಳಿಯೋದಿಲ್ಲವೋ ಅದನ್ನು ಪದೇ ಪದೇ ಬರೆದು, ಓದಿ ರೂಢಿ ಮಾಡಿಕೊಳ್ಳಬೇಕು. ಜತೆಗೆ ತಿಳಿಯದ ವಿಷಯ, ಪಾಠವನ್ನು ಶಿಕ್ಷಕರ ಮಾರ್ಗದರ್ಶನ ಮೂಲಕ ತಿಳಿಯಬೇಕು. ಉತ್ತಮ ಫಲಿತಾಂಶ ತೆಗೆಯಲು ನಿರಂತರ ಓದು ಹಾಗೂ ಉತ್ತಮ ಸ್ನೇಹಿತರು ಮುಖ್ಯ ಎಂದರು.


ಈ ಪೈಕಿ ಕಲಘಟಗಿಯ ಗಂಜಿಗಟ್ಟಿ ಕಸ್ತೂರಿ ಬಾ ಶಾಲೆಯ ಮಗು, ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಕನ್ನಡ ವಿಷಯದಲ್ಲಿ 100ಕ್ಕೆ 100 ಅಂಕ ಪಡೆಯುವುದಾಗಿ ಭರವಸೆ ನೀಡಿತು. ಕನ್ನಡಕ್ಕೆ 100 ಅಂಕ ಪಡೆದರೆ, ಶಾಲೆಗೆ ಬಂದು ನಿನ್ನ ಭೇಟಿಯಾಗುವೆ ಎಂದು ಜಿಲ್ಲಾಧಿಕಾರಿಗಳು ಮಗುವಿಗೆ ಪ್ರೋತ್ಸಾಹ ನೀಡಿದರು.

ಡಿಡಿಪಿಐ ಎಸ್‌.ಎಸ್‌. ಕೆಳದಿಮಠ, ಸಮನ್ವಯಾಧಿಕಾರಿ ಎಸ್‌.ಎಂ. ಹುಡೇಮನಿ, ಶಿಕ್ಷಣಾಧಿಕಾರಿಗಳಾದ ಪ್ರಭಯ್ಯ ಚಿಕ್ಕಮಠ, ನಪೀಸಬಾನು ದಾವಲಸಾಬನವರ, ವಿಷಯ ಪರೀವೀಕ್ಷಕರು, ಸಹಾಯಕ ಯೋಜನಾಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು ಇದ್ದರು.