ಗದಗ: ಸಹಕಾರಿ ರಂಗದ ಭೀಷ್ಮ, ಮಾಜಿ ಸಚಿವ ದಿ. ಕೆ.ಎಚ್. ಪಾಟೀಲರ 101ನೇ ಜಯಂತ್ಯುತ್ಸವದ ಸಂಭ್ರಮಕ್ಕೆ ಗದಗ ಬೆಟಗೇರಿ ಅವಳಿ ನಗರ ಸಜ್ಜುಗೊಂಡಿದೆ.ಸೋಮವಾರ ಬೆಳಗ್ಗೆ 10.30ಕ್ಕೆ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಆಯೋಜಿಸಿರುವ ಬೃಹತ್ ಸಮಾರಂಭಕ್ಕೆ ವೇದಿಕೆ ಸಂಪೂರ್ಣ ಸಜ್ಜಾಗಿದೆ.
ಜಯಂತಿ ಕಾರ್ಯಕ್ರಮ ಕೇವಲ ಒಂದು ಆಚರಣೆಯಾಗಿ ಉಳಿಯದೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಜನಪರ ಯೋಜನೆಗಳ ಲೋಕಾರ್ಪಣೆಯ ವೇದಿಕೆಯಾಗಿ ಈ ಕಾರ್ಯಕ್ರಮ ರೂಪುಗೊಂಡಿದೆ.ಸಿದ್ಧತೆ: ಸಮಾರಂಭ ನಡೆಯುವ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದ್ದು, ಸಾವಿರಾರು ಜನರು ಕುಳಿತು ವೀಕ್ಷಿಸಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯನ್ನು ಹೂವು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಕಾರ್ಯಕ್ರಮಕ್ಕೆ ಬರುವ ಗಣ್ಯರು ಮತ್ತು ಸಾರ್ವಜನಿಕರನ್ನು ಸ್ವಾಗತಿಸಲು ಇಡೀ ಆವರಣ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ.ಈ ಬಾರಿಯ ಜಯಂತಿಯಲ್ಲಿ ಹತ್ತಾರು ಯೋಜನೆಗಳಿಗೆ ಚಾಲನೆ ಸಿಗಲಿದೆ. ಕಾಟನ್ ಸೇಲ್ ಸೊಸೈಟಿಯ ಶತಮಾನೋತ್ಸವ ಕಟ್ಟಡ ಹಾಗೂ ರಾಜೇಶ್ವರಿ ವಿದ್ಯಾನಿಕೇತನದ ನೂತನ ಸಂಕೀರ್ಣವನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ಉದ್ಘಾಟಿಸಲಿದ್ದಾರೆ.ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕೆ.ಎಚ್. ಪಾಟೀಲ ಆಸ್ಪತ್ರೆಯಲ್ಲಿ 100 ಉಚಿತ ಕೀಲು ಬದಲಾವಣೆ ಶಸ್ತ್ರಚಿಕಿತ್ಸೆ, 12 ಕಿಡ್ನಿ ಕಸಿ ಹಾಗೂ 1000 ಮೋತಿಬಿಂದು ಶಸ್ತ್ರಚಿಕಿತ್ಸೆಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಲಿದ್ದಾರೆ. ವಿಶೇಷವಾಗಿ, ಆಸ್ಪತ್ರೆಯಲ್ಲಿ ಜನಿಸುವ ಹೆಣ್ಣು ಮಗುವಿನ ಹೆರಿಗೆ ವೆಚ್ಚವನ್ನು ಸಂಪೂರ್ಣ ಉಚಿತಗೊಳಿಸಿರುವ ಘೋಷಣೆ ಈ ಜಯಂತಿಯ ಮೌಲ್ಯವನ್ನು ಹೆಚ್ಚಿಸಿದೆ.
ಬುತ್ತಿ ಆಲಯ: ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ರೋಗಿಗಳ ಸಂಬಂಧಿಕರಿಗಾಗಿ ಬುತ್ತಿ ಆಲಯವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ವೇದಿಕೆಯಲ್ಲಿ ಶಿಕ್ಷಣ ತಜ್ಞ ಪ್ರಭಾಕರ ಕೋರೆ ಅವರಿಗೆ 5 ಲಕ್ಷ ನಗದು ಒಳಗೊಂಡ ಕೆ.ಎಚ್. ಪಾಟೀಲ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಶಾಸಕರು, ಮಾಜಿ ಸಂಸದರು ಹಾಗೂ ಕೆ.ಎಚ್. ಪಾಟೀಲರ ನೂರಕ್ಕೂ ಹೆಚ್ಚು ಒಡನಾಡಿಗಳು ಆಗಮಿಸಲಿದ್ದಾರೆ.