ಹಾನಗಲ್ಲ ತಾಲೂಕಿನ ಕೆರೆಕ್ಯಾತನಹಳ್ಳಿಯಿಂದ ಕೆರೆಕ್ಯಾತನಹಳ್ಳಿ ತಾಂಡಾದವರೆಗಿನ ಒಂದು ಕಿಮೀಯಷ್ಟು ರಸ್ತೆ ಕಾಮಗಾರಿಗೆ 3 ವರ್ಷಗಳ ಹಿಂದೇಯೇ ಟೆಂಡರ್ ಆಗಿ ಕೆಲಸ ಆರಂಭಿಸಲಾಗಿದೆ. ಆದರೆ, ಅಕ್ಕಪಕ್ಕದ ಜಮೀನು ರೈತರ ತಕರಾರಿನಿಂದ ರಸ್ತೆ ಕಾಮಗಾರಿ ಸ್ಥಗಿತವಾಗಿದೆ. ಹಲವು ರೈತರು, ಊರಿಂದೂರಿಗೆ ಓಡಾಗುವ ಪ್ರಯಾಣಿಕರು ಪರದಾಡುವಂತಾಗಿ ಈಗ ಮುಖ್ಯಮಂತ್ರಿಗಳಿಗೆ ಪರಿಹಾರಕ್ಕಾಗಿ ಮನವಿ ರವಾನಿಸಿದ್ದಾರೆ.

ಹಾನಗಲ್ಲ: ತಾಲೂಕಿನ ಕೆರೆಕ್ಯಾತನಹಳ್ಳಿಯಿಂದ ಕೆರೆಕ್ಯಾತನಹಳ್ಳಿ ತಾಂಡಾದವರೆಗಿನ ಒಂದು ಕಿಮೀಯಷ್ಟು ರಸ್ತೆ ಕಾಮಗಾರಿಗೆ 3 ವರ್ಷಗಳ ಹಿಂದೇಯೇ ಟೆಂಡರ್ ಆಗಿ ಕೆಲಸ ಆರಂಭಿಸಲಾಗಿದೆ. ಆದರೆ, ಅಕ್ಕಪಕ್ಕದ ಜಮೀನು ರೈತರ ತಕರಾರಿನಿಂದ ರಸ್ತೆ ಕಾಮಗಾರಿ ಸ್ಥಗಿತವಾಗಿದೆ. ಹಲವು ರೈತರು, ಊರಿಂದೂರಿಗೆ ಓಡಾಗುವ ಪ್ರಯಾಣಿಕರು ಪರದಾಡುವಂತಾಗಿ ಈಗ ಮುಖ್ಯಮಂತ್ರಿಗಳಿಗೆ ಪರಿಹಾರಕ್ಕಾಗಿ ಮನವಿ ರವಾನಿಸಿದ್ದಾರೆ.

40-50 ವರ್ಷಗಳಿಂದ ಈ ರಸ್ತೆಯಲ್ಲಿ ಈ ಭಾಗದ ಜನರ ಓಡಾಟ ಹಾಗೂ ಸಂಪರ್ಕ ರಸ್ತೆಯಾಗಿದೆ. ಈ ಹಿಂದೆ ಎರಡು ಬಾರಿ ಈ ರಸ್ತೆ ದುರಸ್ತಿ ಹಾಗೂ ಡಾಂಬರೀಕರಣವೂ ಆಗಿದೆ. ಈಗ ರಸ್ತೆ ಕೆಟ್ಟು ಹೋಗಿದ್ದರಿಂದ ಈ ರಸ್ತೆ ಕಾಮಗಾರಿಗಾಗಿ ₹50 ಲಕ್ಷ ಬಿಡುಗಡೆಯಾಗಿ 3 ವರ್ಷಗಳಾಗಿದ್ದರೂ ರಸ್ತೆ ನಿರ್ಮಾಣಕ್ಕೆ ತಕರಾರು ಕಾರಣದಿಂದಾಗಿ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ.

ಈ ರಸ್ತೆಯ ಹೆಚ್ಚು ಭಾಗ ನಮ್ಮ ಹೊಲದಲ್ಲಿದೆ ಎಂದು ರೈತರು ತಕರಾರು ಮಾಡುತ್ತಿದ್ದಾರೆ. ಕೆರೆಯಲ್ಲಿ ರಸ್ತೆ ಇದೆ. ನಮ್ಮ ಹೊಲದಲ್ಲಿ ರಸ್ತೆ ಬೇಡ ಎಂಬುದು ತಕರಾರು ಮಾಡುವವರ ವಾದವಾಗಿದೆ. ಆದರೆ, ರಸ್ತೆ ಕೆರೆಯಲ್ಲಿಲ್ಲ. ಇದೇ ಸರಿಯಾದ ರಸ್ತೆ ಎಂಬುದು ಇನ್ನು ಕೆಲವರ ವಾದ. ಹೀಗಾಗಿ, ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿ ಕಾಮಗಾರಿ ಸ್ಥಗಿತಗೊಂಡಿದೆ. 3 ವರ್ಷಗಳಾದರೂ ಇದು ಬಗೆಹರಿದಿಲ್ಲ.

ಈ ಕುರಿತು ಅಳಲು ತೋಡಿಕೊಂಡ ರೈತ ಭರಮಪ್ಪ ಹಿತ್ತಲಮನಿ, ಇದು ಸರ್ಕಾರಿ ರಸ್ತೆ. ಅನಗತ್ಯವಾಗಿ ತಕರಾರು ಮಾಡುತ್ತಿದ್ದಾರೆ. 50-60 ವರ್ಷಗಳಾಚೆಯಿಂದಲೂ ಜನರ ಓಡಾಡುತ್ತಿದ್ದಾರೆ. ಕಾಮಗಾರಿ ಸ್ಥಗಿತವಾಗಿದ್ದರಿಂದ ಪರ ಊರಿಗೆ ಮತ್ತು ಇಲ್ಲಿನ ಜಮೀನಿಗೆ ಹೋಗುವವರಿಗೆ ಬಹಳಷ್ಟು ತೊಂದರೆ ಆಗಿದೆ. ರಸ್ತೆಯ ಮಧ್ಯದಲ್ಲಿಯೇ ಜೆಸಿಬಿಯಿಂದ ಗಟಾರ ಮಾಡಿ ಓಡಾಟಕ್ಕೆ ಹಾಗೂ ಕಾಮಗಾರಿಗೆ ಅಡಚಣೆ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡು, ಈಗ ಮುಖ್ಯಮಂತ್ರಿಗಳಿಗೆ ನಮ್ಮ ಸಮಸ್ಯೆ ಪರಿಹರಿಸಲು ಮನವಿ ಕಳಿಸಿದ್ದೇವೆ. ಈ ಕೂಡಲೇ ತಾಲೂಕು ಜಿಲ್ಲೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಮಸ್ಯೆ ಪರಿಹಾರಕ್ಕೆ ಬೇಡಿಕೊಳ್ಳುತ್ತೇವೆ ಎಂದರು.

ರಸ್ತೆ ಕಾಮಗಾರಿ ಕುರಿತು ಮಾಹಿತಿ ನೀಡಿದ ಜಿಲ್ಲಾ ಪಂಚಾಯತ್ ಕಿರಿಯ ಅಭಿಯಂತರ ಬಾಬುರಾವ್ ಸಾಕರೆ, ಕಾಮಗಾರಿ ಪೂರ್ಣಗೊಳಿಸಲು ಎಲ್ಲ ರೀತಿಯಿಂದ ಅಲ್ಲಿನ ತಕರಾರು ಮಾಡುವ ರೈತರ ಮನವೊಲಿಸಲು ನಾವು ಮಾಡಿದ ಪ್ರಯತ್ನಗಳು ಫಲ ನೀಡಿಲ್ಲ. ಈಗ ಅನಿವಾರ್ಯವಾಗಿ ಅನುದಾನವನ್ನು ವಾಪಸ್ ಮಾಡುವ ಹಂತದಲ್ಲಿದ್ದೇವೆ. ಇನ್ನೊಮ್ಮ ಪ್ರಯತ್ನ ನಡೆಸಿ ನೋಡುತ್ತೇವೆ ಎಂದಿದ್ದಾರೆ.

1940ರಿಂದ ಈ ರಸ್ತೆ ಇದೆ. ಆದರೆ, ಕೆಲ ರೈತರು ಅನಗತ್ಯವಾಗಿ ಕಾಮಗಾರಿಗೆ ತೊಂದರೆ ಮಾಡಿ ರಸ್ತೆ ಒಡೆದಿದ್ದಾರೆ. ಈ ವಿಷಯ ತಹಸೀಲ್ದಾರ್‌ ಗಮನಕ್ಕೂ ತರಲಾಗಿದೆ. ಇದರ ಸಮಸ್ಯೆ ಪರಿಹರಿಸಿ ನಮಗೆ ರಸ್ತೆ ನಿರ್ಮಿಸಿಕೊಡಬೇಕು. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ತಾಪಂ ಮಾಜಿ ಅಧ್ಯಕ್ಷ ದಾನಪ್ಪ ಲಮಾಣಿ ಹೇಳಿದರು.ರಸ್ತೆ ರೈತರ ಜಮೀನಿನಲ್ಲಿದೆ ಎಂಬುದು ಹಲವರ ಅಭಿಪ್ರಾಯವಾಗಿದ್ದು, ಇದೇ ಕಾರಣಕ್ಕಾಗಿ ಕಾಮಗಾರಿಗೆ ತಕರಾರು ಮಾಡುತ್ತಿದ್ದಾರೆ. ಹಿಂದೆ ಇದೇ ರಸ್ತೆ ಕಾಮಗಾರಿ ಮಾಡಲಾಗಿತ್ತು. ಈ ಕೂಡಲೇ ತಹಸೀಲ್ದಾರಿಗೆ ಅರ್ಜಿ ಸಲ್ಲಿಸಿ ರಸ್ತೆಯ ಜಾಗೆ ಅಳತೆ ಮಾಡಲು ವಿನಂತಿಸುತ್ತೇವೆ. ಸರ್ವೇ ಆದ ಮೇಲೆ ಮುಂದಿನ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಜಿಪಂ ಕಿರಿಯ ಎಂಜಿನಿಯರ್‌ ಬಾಬುರಾವ್ ಸಾಕರೆ ಹೇಳಿದರು.