ಸಮುದಾಯಕ್ಕೆ ನ್ಯಾಯ ದೊರೆಯುವ ವರೆಗೂ ಗಟ್ಟಿಯಾಗಿ ನಿಲ್ಲಿ

| Published : Nov 23 2025, 02:30 AM IST

ಸಾರಾಂಶ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಕಳೆದ 5 ವರ್ಷಗಳಿಂದ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ. ಈಗ ನ್ಯಾಯ ದೊರೆಯುವ ಭರವಸೆಯಿದ್ದು, ಈ ಹಂತದಲ್ಲಿ ಸಮುದಾಯದ ನಾಯಕರು ಗಟ್ಟಿಯಾಗಿ ನಿಲ್ಲಬೇಕಿದೆ.

ಕುಂದಗೋಳ:

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಕಳೆದ 5 ವರ್ಷಗಳಿಂದ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ. ಈಗ ನ್ಯಾಯ ದೊರೆಯುವ ಭರವಸೆಯಿದ್ದು, ಈ ಹಂತದಲ್ಲಿ ಸಮುದಾಯದ ನಾಯಕರು ಗಟ್ಟಿಯಾಗಿ ನಿಲ್ಲಬೇಕಿದೆ ಎಂದು ಕೂಡಲಸಂಗಮದ ಬಸವ ಜಯಮೃತ್ಯುಂಜಯ ಶ್ರೀ ಹೇಳಿದರು.

ಪಟ್ಟಣದ ಹರಭಟ್ಟ ಹೈಸ್ಕೂಲ್ ಮೈದಾನದಲ್ಲಿ ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ರ್‍ಯಾಲಿ, ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ ಮತ್ತು 201ನೇ ವಿಜಯೋತ್ಸವ, ಪಂಚಮಸಾಲಿ 2ಎ ಮೀಸಲಾತಿ ಹಾಗೂ ಲಿಂಗಾಯತ ಉಪ ಪಂಗಡಗಳಿಗೆ ಒಬಿಸಿ ಮೀಸಲಾತಿಗಾಗಿ ಆರಂಭಗೊಂಡಿರುವ 8ನೇ ಹಂತದ ಹೋರಾಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಳೆದ ಐದು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಪ್ರಾಮಾಣಿಕ ಹೋರಾಟ 8ನೇ ಹಂತಕ್ಕೆ ತಲುಪಿದ್ದು, ಮೈಸೂರು, ಉತ್ತರ ಮತ್ತು ಕಲ್ಯಾಣ ಕರ್ನಾಟಕವನ್ನು ಒಗ್ಗೂಡಿಸುವಲ್ಲಿ ಶಂಕರಗೌಡರ ಕೊಡುಗೆ ಶ್ಲಾಘನೀಯ. ಮುಖ್ಯಮಂತ್ರಿಗಳು ಮೀಸಲಾತಿ ಕೇಳುತ್ತಿರುವುದು ಅಸಂವಿಧಾನಿಕ ಎಂದು ಹೇಳಿರುವುದರಿಂದ, ಇನ್ನು ಮನವಿಗಿಂತ ಹಳ್ಳಿ-ಹಳ್ಳಿಗೆ ತೆರಳಿ ಬೂತ್‌ ಮಟ್ಟದಲ್ಲಿ ಸಂಘಟನೆ ಮಾಡಿ, ಹೋರಾಟವನ್ನು 224 ವಿಧಾನಸಭಾ ಕ್ಷೇತ್ರಗಳಿಗೆ ವಿಸ್ತರಿಸಬೇಕು ಎಂದು ಕರೆ ನೀಡಿದರು. ಶೋಷಿತ ವರ್ಗದವರು ಮತ್ತು ಇತರೆ ಸಮಾಜವನ್ನು ಮೇಲ್ಮಟ್ಟಕ್ಕೆ ಏರಿಸುವುದೇ ಈ ಹೋರಾಟದ ಮುಖ್ಯ ಉದ್ದೇಶವಾಗಿದೆ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ​ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಮಹಾರಾಜರು, ಡಾ. ಬಿ.ಆರ್. ಅಂಬೇಡ್ಕರ್, ಜಗಜ್ಯೋತಿ ಬಸವಣ್ಣನವರು ಸೇರಿದಂತೆ ಎಲ್ಲ ಸಮಾಜದ ಮಹನೀಯರ ಮೂರ್ತಿಗಳನ್ನು ಒಂದೇ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಮೂಲಕ ಜಾತಿ ಭೇದ ಮರೆತು ಸರ್ವರೂ ಒಗ್ಗೂಡುವ ಕಾರ್ಯವಾಗಬೇಕು. ​ಯಾವುದೇ ಪ್ರದೇಶದಲ್ಲಿ ಈ ಸಾಮರಸ್ಯದ ಕಾರ್ಯವನ್ನು ಕೈಗೆತ್ತಿಕೊಂಡರೆ ಆ ಕಾರ್ಯಕ್ಕೆ ವೈಯಕ್ತಿಕವಾಗಿ ₹50,000 ದಿಂದ ₹1 ಲಕ್ಷದ ವರೆಗೆ ಆರ್ಥಿಕ ಸಹಾಯ ಮಾಡುವುದಾಗಿ ಘೋಷಿಸಿದರು.

ಅಧಿಕಾರಕ್ಕಿಂತ ಸಮುದಾಯದ ನ್ಯಾಯಕ್ಕಾಗಿ ನಿಲ್ಲುವ ನಾಯಕರನ್ನು ಜನ ಇಷ್ಟಪಡುತ್ತಾರೆ. ಸಮುದಾಯಕ್ಕೆ ಮೋಸ ಮಾಡಿದ ನಾಯಕರನ್ನು ಜನ ದೂರ ಇಡುತ್ತಿದ್ದಾರೆ. 2ಎ ಬದಲಿಗೆ 2ಡಿ ಪ್ರವರ್ಗಕ್ಕೆ ಸೇರಿಸಲು ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರೇ ಕಾರಣರೆಂದು ಸ್ಪಷ್ಟಪಡಿಸಿದ ಯತ್ನಾಳ, ಮುಸ್ಲಿಂ ಸಮುದಾಯದ ಶೇ. 4ರಷ್ಟು ಮೀಸಲಾತಿ ತೆಗೆದು ಎಲ್ಲ ಸಮಾಜಗಳಿಗೂ ಹಂಚುವುದಾಗಿ ಹೇಳಿದರು. ಕೋಟ್ಯಂತರ ರುಪಾಯಿ ಲೂಟಿ ಮಾಡುವವರು ರೈತರಿಗೆ ಬೆಂಬಲ ಬೆಲೆ ನೀಡಲು ಹಣವಿಲ್ಲ ಎಂದು ಹೇಳುತ್ತಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಶಾಸಕ ಎಂ.ಆರ್. ಪಾಟೀಲ್ ಮಾತನಾಡಿ, ಸಮಾಜವನ್ನು ಮುಖ್ಯವಾಹಿನಿಗೆ ತರಬೇಕು ಮತ್ತು ಶೋಷಿತ ವರ್ಗದವರನ್ನು ಮೇಲಕ್ಕೆ ಎತ್ತಬೇಕು ಎಂಬುದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಬಸವಜಯ ಮೃತ್ಯುಂಜಯ ಶ್ರೀಗಳ ಉದ್ದೇಶ. ಅವರ ಈ ಹೋರಾಟಕ್ಕೆ ಸದಾ ಬೆಂಬಲವಿದೆ ಎಂದರು.

ಅದ್ಧೂರಿ ಮೆರವಣಿಗೆ:

ಇದಕ್ಕೂ ಮುನ್ನ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಗೆ ಹೊಂದಿಕೊಂಡಿರುವ ಶೇರೆವಾಡ ಟೋಲ್‌ನಿಂದ ಪಟ್ಟಣದ ಗಾಳಿ ಮರೆಮ್ಮ ದೇವಸ್ಥಾನದ ವರೆಗೆ ಬೈಕ್ ರ್‍ಯಾಲಿಗೆ ಗಣ್ಯರು ಚಾಲನೆ ನೀಡಿದರು. ಈ ವೇಳೆ ಪಟ್ಟಣದ ಪಂಚಗ್ರಹ ಹಿರೇಮಠದ ಶಿತಿಕಂಠೇಶ್ವರ ಶಿವಾಚಾರ್ಯರು, ಕಲ್ಯಾಣಪುರ ಮಠದ ಬಸವಣ್ಣ ಅಜ್ಜನವರು ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕರಾದ ಎಸ್.ಐ. ಚಿಕ್ಕನಗೌಡ್ರ, ಎಂ.ಎಸ್. ಅಕ್ಕಿ, ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ನಾಗರಾಜ್ ದೇಶಪಾಂಡೆ, ಮೇಯರ್ ಜ್ಯೋತಿ ಪಾಟೀಲ, ಮುಖಂಡರಾದ ಡಾ. ಅರವಿಂದ ಕಟಗಿ, ನಿಂಗನಗೌಡ ಮರಿಗೌಡ್ರು, ಉಮೇಶ ಹೆಬಸೂರ, ವೆಂಕನಗೌಡ ಕಂಠಪ್ಪಗೌಡ ಸೇರಿ ಹಲವರಿದ್ದರು.