ಅನ್ಯಾಯದ ವಿರುದ್ಧ ಹೋರಾಟಕ್ಕೆ ಒಂದಾಗಿ ನಿಲ್ಲಿ: ಎಂ.ಜಿ. ಭಟ್

| Published : Feb 16 2025, 01:46 AM IST

ಅನ್ಯಾಯದ ವಿರುದ್ಧ ಹೋರಾಟಕ್ಕೆ ಒಂದಾಗಿ ನಿಲ್ಲಿ: ಎಂ.ಜಿ. ಭಟ್
Share this Article
  • FB
  • TW
  • Linkdin
  • Email

ಸಾರಾಂಶ

ಕುಮಟಾ ಪಟ್ಟಣದ ವೈಭವ ಸಭಾಭವನದಲ್ಲಿ ವಿಶ್ವ ಮಾನವ ಹಕ್ಕುಗಳ ಸಂಘಟನೆಯ ತಾಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ನಡೆಯಿತು.

ಕುಮಟಾ: ಯಾವುದೇ ಅಭಿವೃದ್ಧಿಗಾಗಿ, ಜನಸೇವೆಗಾಗಿ ಅಥವಾ ಅನ್ಯಾಯದ ವಿರುದ್ಧದ ಹೋರಾಟಕ್ಕೆ ನಾಗರಿಕರು ಪಕ್ಷ, ಧರ್ಮ, ಜಾತಿ ಮೀರಿ ಒಂದಾಗಿ ನಿಲ್ಲಬೇಕು. ಇಲ್ಲದಿದ್ದರೆ ಭವಿಷ್ಯ ಕಷ್ಟವಿದೆ ಎಂದು ಉತ್ತರ ಕನ್ನಡ ಜಿಲ್ಲೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಜಿ. ಭಟ್ ಹೇಳಿದರು.

ಪಟ್ಟಣದ ವೈಭವ ಸಭಾಭವನದಲ್ಲಿ ವಿಶ್ವ ಮಾನವ ಹಕ್ಕುಗಳ ಸಂಘಟನೆಯ ತಾಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನಮ್ಮ ಜಿಲ್ಲೆಯ ಜನರಲ್ಲಿ ಹೋರಾಟದ ಉದ್ದೇಶವನ್ನು ಅರ್ಥಮಾಡಿಕೊಂಡು ಮುಕ್ತ ಮನಸ್ಸಿನಿಂದ ಬೆಂಬಲಿಸುವ ಮನೋಧರ್ಮ ಕಳೆದುಹೋಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜೆಡಿಎಸ್ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರಜ ನಾಯ್ಕ ಮಾತನಾಡಿ, ಸಂವಿಧಾನದ ಮೂಲಕ ನಮಗೆ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಲಾಗಿದೆ. ಬದುಕುವ ಹಕ್ಕು ಎಲ್ಲರಿಗೂ ಇದೆ. ಮಾನವ ಹಕ್ಕಿಗೆ ತೊಂದರೆಯಾದಾಗ ಶೋಷಿತರ, ದಮನಿತರ, ಬಡವರ ಪರವಾಗಿ ಕೆಲಸ ಮಾಡುವ ಧ್ವನಿಯಾಗಿ ವಿಶ್ವ ಮಾನವ ಹಕ್ಕು ತಾಲೂಕು ಸಂಘಟನೆ ಕೆಲಸ ಮಾಡಲಿ ಎಂದರು.

ಸಂಘಟನೆಯ ರಾಜ್ಯ ಪಶ್ಚಿಮ ಭಾಗದ ಮಹಿಳಾ ಅಧ್ಯಕ್ಷೆ ಅರ್ಚನಾ ಜಯಪ್ರಕಾಶ ಮಾತನಾಡಿ, ಸಂಘಟನೆ ಇರುವುದು ಜನಸೇವೆಗಾಗಿ, ಮಾನವ ಹಕ್ಕಿನಿಂದ ಯಾರೂ ವಂಚಿತರಾಗದಂತೆ ಕ್ರಮಕೈಗೊಳ್ಳುತ್ತಾ ಬಂದಿದ್ದೇವೆ ಎಂದರು.

ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ, ಜಿಲ್ಲೆಯ ಹಲವಾರು ಜ್ವಲಂತ ಸಮಸ್ಯೆಗಳಿಗೆ ಕರವೇ ಮುಂಚೂಣಿ ಹೋರಾಟ ಮಾಡುತ್ತಾ ಬಂದಿದೆ. ಹೋರಾಟ ಕಾನೂನಾತ್ಮಕವಾಗಿಯೂ ನಡೆಯಬೇಕಾದ ಅನಿವಾರ್ಯತೆ ಎದುರಾದಾಗ ಮಾನವ ಹಕ್ಕು ಸಂಘಟನೆ ಜತೆಯಾಗಿ ಕೈಜೋಡಿಸಲಿ. ರಾ.ಹೆ. ೬೬ ಚತುಷ್ಪಥ ಕಾಮಗಾರಿ ಅಂಥದ್ದೊಂದು ಹೋರಾಟಕ್ಕೆ ಮುನ್ನಡಿಯಾಗಲಿ ಎಂದರು.

ವಕೀಲ ನಾಗರಾಜ ಹೆಗಡೆ, ಅಧ್ಯಕ್ಷತೆ ವಹಿಸಿದ್ದ ಜಿಪಂ ಮಾಜಿ ಸದಸ್ಯ ರತ್ನಾಕರ ನಾಯ್ಕ ಮಾತನಾಡಿದರು. ಮಾನವ ಹಕ್ಕು ಸಂಘಟನೆಯ ಮಾಲಿನಿ ನಾಯ್ಕ, ನಿವೃತ್ತ ನೌಕರ ರಾಮಚಂದ್ರ ಗೌಡ, ಪುರಸಭೆ ನಾಮನಿರ್ದೇಶಿತ ಸದಸ್ಯೆ ದಾಕ್ಷಾಯಿಣಿ ಅರಿಗ, ಉದ್ಯಮಿ ಶೈಲೇಶ ನಾಯ್ಕ, ಸಂಪತ್ ಕುಮಾರ ಇತರರು ಇದ್ದರು. ಶಿಕ್ಷಕ ಮಂಜುನಾಥ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ನೂತನ ತಾಲೂಕು ಘಟಕದ ಅಧ್ಯಕ್ಷರಾಗಿ ಮಹೇಂದ್ರ ನಾಯ್ಕ, ಉಪಾಧ್ಯಕ್ಷ ಅಣ್ಣಪ್ಪ ನಾಯ್ಕ, ಸಹಕಾರ್ಯದರ್ಶಿ ಸುನೀಲಾ ಹರಿಕಂತ್ರ, ಕಾರ್ಯದರ್ಶಿಯಾಗಿ ಬಾಲಕೃಷ್ಣ್ರ ನಾಯ್ಕ, ಜಿಲ್ಲಾ ಸಮಿತಿ ಸದಸ್ಯರಾಗಿ ಮಂಜುನಾಥ ಪಟಗಾರ, ನಾಗರಾಜ ಹೆಗಡೆ, ಶಶಿಧರ ಅಡಿಗುಂಡಿ, ಸನೀಲಾ ಅಳ್ವೇಕೋಡಿ, ಜಗದೀಶ ಪಟಗಾರ, ರಾಮಚಂದ್ರ ಗೌಡ, ಜಗದೀಶ ನಾಯ್ಕ, ದಿನೇಶ ಭಂಡಾರಿ, ಪ್ರಕಾಶ ನಾಯ್ಕ, ನಾಗರತ್ನಾ ಮುಕ್ರಿ, ಶಾಂತಾರಾಮ ನಾಯ್ಕ, ಚಿದಾನಂದ ಅಂಬಿಗ, ಶಿವಾನಂದ ಮುಕ್ರಿ, ಪಾಂಡು ಪಟಗಾರ ಅವರನ್ನು ನಿಯುಕ್ತಿಗೊಳಿಸಿ ಗುರುತಿನ ಚೀಟಿ ನೀಡಲಾಯಿತು.