ತ್ಯಾಜ್ಯ ಸಂಸ್ಕರಣ, ವಧಾಲಯಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಭೇಟಿ

| Published : Oct 27 2024, 02:46 AM IST

ಸಾರಾಂಶ

ಪಡದಯ್ಯನ ಹಕ್ಕಲದ ವಧಾಲಯಗಳಿಗೆ ಭೇಟಿ ನೀಡಿ, ಅವುಗಳ ನಿರ್ವಹಣೆಗೆ ಹಂತ ಹಂತವಾಗಿ ತೆಗೆದುಕೊಳ್ಳುವ ಕ್ರಮಗಳ ಕುರಿತು ಮಾಹಿತಿ ಸಂಗ್ರಹಿಸಿದರು.

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ರಾಜಣ್ಣ ಕೊರವಿ ಅಧ್ಯಕ್ಷತೆಯಲ್ಲಿ ನಗರದ ತ್ಯಾಜ್ಯ ಸಂಸ್ಕರಣ ಘಟಕ ಹಾಗೂ ವಧಾಲಯಕ್ಕೆ ಶನಿವಾರ ಧಿಡೀರ್ ಭೇಟಿ ನೀಡಿ ಪರಿಶೀಲಿಸಿದರು.

ಇಂದಿರಾನಗರ ಕಾಂಪ್ಯಾಕ್ಟರ್ ಸ್ಟೇಷನ್ ಸುತ್ತಮುತ್ತಲಿನ ಸುಮಾರು 15 ವಾರ್ಡ್ ಗಳಿಂದ ಆಟೋಟಿಪ್ಪರ್ ವಾಹನಗಳ ಮೂಲಕ ಸಂಗ್ರಹವಾಗುವ ಹಸಿ ಹಾಗೂ ಒಣ ಕಸವನ್ನು ಕಾಂಪ್ಯಾಕ್ಟರ್ ಸ್ಟೇಷನ್ ನಲ್ಲಿನ ಹೆಚ್ಚಿನ ಸಾಮರ್ಥ್ಯದ ಕಾಂಪ್ಯಾಕ್ಟರ್ ಕಂಟೇನರ್ ಗಳಲ್ಲಿ ಸಾಗಿಸುವ ವಿಧಾನವನ್ನು ಪರಿಶೀಲಿಸಿದರು. ಅದೇ ಆವರಣದಲ್ಲಿ ಸ್ಥಾಪಿಸಲಾಗಿರುವ ಒಣ ತ್ಯಾಜ್ಯ ಸಂಗ್ರಹಣ ಕೇಂದ್ರವನ್ನೂ ಪರಿಶೀಲಿಸಿ ಒಣ ತ್ಯಾಜ್ಯ ನಿರ್ವಹಣೆಯ ಕುರಿತು, ಅಲ್ಲಿ ನುರಿತ ಮಾನವ ಸಂಪನ್ಮೂಲದ ಅವಶ್ಯಕತೆ ಇರುವ ಬಗ್ಗೆ, ಯಂತ್ರೋಪಕರಣಗಳ ನಿರ್ವಹಣೆ ಕುರಿತು ಮಾಹಿತಿ ಪಡೆದರು.

ಪಡದಯ್ಯನ ಹಕ್ಕಲದ ವಧಾಲಯಗಳಿಗೆ ಭೇಟಿ ನೀಡಿ, ಅವುಗಳ ನಿರ್ವಹಣೆಗೆ ಹಂತ ಹಂತವಾಗಿ ತೆಗೆದುಕೊಳ್ಳುವ ಕ್ರಮಗಳ ಕುರಿತು ಮಾಹಿತಿ ಸಂಗ್ರಹಿಸಿದರು. ಆಧುನಿಕ ವಧಾಲಯಗಳ ಪ್ರಸ್ತಾವನೆಯ ಕುರಿತು ಚರ್ಚಿಸಲಾಯಿತು.

ಪ್ರಮುಖವಾಗಿ ಕಾರವಾರ ರಸ್ತೆಯ ತ್ಯಾಜ್ಯ ಸಂಸ್ಕರಣ ನಿವೇಶನದಲ್ಲಿ ಸ್ಥಾಪಿಸಲಾಗಿರುವ ಪಾರಂಪರಿಕ ತ್ಯಾಜ್ಯ ನಿರ್ವಹಣೆಯ ಯಂತ್ರೋಪಕರಣಗಳ ಪರಿಶೀಲನೆ ವಿಧಾನಗಳನ್ನು ತಿಳಿದು, ಈ ಯೋಜನೆಯನ್ನು ಕರಾರು ಅನುಸಾರ ಅಂತಿಮಗೊಳಿಸಲು ಸೂಚಿಸಿದರು.

ಸಮಿತಿಯ ಸದಸ್ಯರಾದ ಮಹದೇವಪ್ಪ ನರಗುಂದ, ಚಂದ್ರಕಲಾ ಕೊಟ್ಟಬಾಗಿ, ಮೊಹಮ್ಮದ್ ಇಕ್ಬಾಲ್ ನವಲೂರು, ಸುಮಿತ್ರ ಗುಂಜಾಳ, ಫಮೀದ ಕಾರಡಗಿ, ಪಾಲಿಕೆಯ ಮುಖ್ಯವೈದ್ಯಾಧಿಕಾರಿ ಡಾ. ಶ್ರೀಧರ್ ದಂಡಪ್ಪನವರ, ಘನ ತ್ಯಾಜ್ಯ ವಸ್ತು ನಿರ್ವಹಣೆ ವಿಭಾಗದ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್ ಬಿ.ಎಂ., ಪಶುವೈದ್ಯಾಧಿಕಾರಿ ಎ.ಜಿ. ಕುಲಕರ್ಣಿ, ವಲಯ ಅಧಿಕಾರಿ ಮನೋಜ್ ಗಿರೀಶ್, ಪರಿಸರ ಅಭಿಯಂತರರಾದ ನಯನ ಕೆ.ಎಸ್., ಯುವರಾಜ್ ಕೆ.ಆರ್, ಅವಿನಾಶ್, ಆರೋಗ್ಯ ನಿರೀಕ್ಷಕಿ ದೀಪಿಕಾ ಆರ್, ಜ್ಯೋತಿ ನರೇಂದ್ರ ಸೇರಿದಂತೆ ಹಲವರಿದ್ದರು.