ತಾರಕಕ್ಕೇರಿದ ನೌಕರರ ಸಂಘದ ಚುನಾವಣೆ: ರಾಜಕೀಯ ಪಕ್ಷ ಮೀರಿಸಿದ ಪ್ರಚಾರದ ಭರಾಟೆ

| Published : Nov 09 2024, 01:04 AM IST / Updated: Nov 09 2024, 01:05 AM IST

ತಾರಕಕ್ಕೇರಿದ ನೌಕರರ ಸಂಘದ ಚುನಾವಣೆ: ರಾಜಕೀಯ ಪಕ್ಷ ಮೀರಿಸಿದ ಪ್ರಚಾರದ ಭರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ನೌಕರರ ಸಂಘದ ಚುನಾವಣೆಯಲ್ಲಿ ರಾಜಕೀಯ ಪಕ್ಷವನ್ನು ಮೀರಿಸುವಂತೆ ಪ್ರಚಾರ ಮಾಡಲಾಗುತ್ತಿದೆ.

ಕೊಪ್ಪಳ: ಜಿಲ್ಲಾ ನೌಕರರ ಸಂಘದ ಚುನಾವಣೆ ಜಿಲ್ಲಾದ್ಯಂತ ತಾರಕಕ್ಕೇರಿದೆ. ಈಗಾಗಲೇ ತಾಲೂಕು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜಿಲ್ಲಾ ಹಂತದ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ರಾಜಕೀಯ ಪಕ್ಷವನ್ನು ಮೀರಿಸುವಂತೆ ಪ್ರಚಾರ ಮಾಡಲಾಗುತ್ತಿದೆ.

ಜಿಲ್ಲಾ ಮಟ್ಟದ 66 ಸ್ಥಾನಗಳಿಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನದ ವರೆಗೂ ಬರೋಬ್ಬರಿ 121 ಆಕಾಂಕ್ಷಿಗಳು 125 ನಾಮಪತ್ರ ಸಲ್ಲಿಸಿದ್ದಾರೆ. ಕೆಲವರು ಎರಡು ನಾಮಪತ್ರ ಸಲ್ಲಿಸಿದ್ದಾರೆ.

ನ. 11ರಂದು ನಾಮಪತ್ರ ಪರಿಶೀಲನೆ ಮತ್ತು ವಾಪಸಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕಣದಲ್ಲಿ ಎಷ್ಟು ಆಕಾಂಕ್ಷಿಗಳು ಉಳಿಯುತ್ತಾರೆ ಎನ್ನುವುದು ಗೊತ್ತಾಗುತ್ತದೆ.

ನ. 16ರಂದು ಮತದಾನ ನಿಗದಿಯಾಗಿದ್ದು, ಯಾವ ಸ್ಥಾನಗಳಲ್ಲಿ ಸ್ಪರ್ಧೆಯಲ್ಲಿ ಉಳಿಯುತ್ತಾರೆ. ಆ ಸ್ಥಾನಕ್ಕೆ ಮಾತ್ರ ಮತದಾನ ನಡೆಯಲಿದೆ. ಈಗಾಗಲೇ ಇರುವ ಮಾಹಿತಿಯ ಪ್ರಕಾರ 30 ಸ್ಥಾನಗಳಿಗೆ ಕೇವಲ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧ ಆಯ್ಕೆ ಪಕ್ಕಾ ಎನ್ನಲಾಗುತ್ತಿದೆ. ಆದರೆ, ನಾಮಪತ್ರ ಪರಿಶೀಲನೆ ಮತ್ತು ನಾಮಪತ್ರ ವಾಪಸ್‌ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಅವಿರೋಧ ಆಯ್ಕೆಯಾದವರನ್ನು ಘೋಷಣೆ ಮಾಡಲಾಗುತ್ತದೆ.

ಪ್ರತ್ಯೇಕ ಬಣ

ಶಂಭುಲಿಂಗನಗೌಡ ಹಲಿಗೇರಿ ಅವರ ನೇತೃತ್ವದ ಬಣ ಮತ್ತು ನೌಕರರ ಸಂಘದ ಹಾಲಿ ಅಧ್ಯಕ್ಷ ನಾಗರಾಜ ಜುಮ್ಮಣ್ಣವರ ನೇತೃತ್ವದಲ್ಲಿ ಎರಡು ಪ್ರತ್ಯೇಕ ಬಣ ಇದ್ದು, ಇವರ ನಡುವೆಯೇ ಪೈಪೋಟಿ ಜೋರಾಗಿದೆ. ಈ ನಡುವೆ ಯಾವ ಬಣವೂ ಬೇಡ ಎಂದು ಕೆಲವರು ಪ್ರತ್ಯೇಕವಾಗಿಯೇ ತಮ್ಮ ಸ್ಥಾನವನ್ನು ತಾವು ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.

ಶಿಕ್ಷಕರ ವಲಯದಲ್ಲಿ ತೀವ್ರ ಪೈಪೋಟಿ

ಹಾಗೆ ನೋಡಿದರೆ ಇಲಾಖಾವಾರು ಸ್ಥಾನಗಳು ಇದ್ದು, ಬಹುತೇಕ ಇಲಾಖೆಯಲ್ಲಿ ಪೈಪೋಟಿಯೇ ಇಲ್ಲ. ಆದರೆ, ಶಿಕ್ಷಕರ ವಲಯದಲ್ಲಿ ಪೈಪೋಟಿ ಹೆಚ್ಚಿದೆ. ಶಿಕ್ಷಕರ ವಲಯದಲ್ಲಿ ಐದು ಸ್ಥಾನಗಳಿದ್ದು, ಎರಡು ಬಣದಿಂದ ತಲಾ ಐವರು ನಾಮಪತ್ರ ಸಲ್ಲಿಸಿದ್ದಾರೆ.

ಮನೆ ಮನೆಗೆ ಹೋಗಿ ಮತಯಾಚನೆ ಮಾಡುವುದು, ಪಾರ್ಟಿ ಮಾಡಿ ಮತಯಾಚನೆ ಮಾಡುವುದು ತುರುಸಾಗಿಯೇ ನಡೆದಿದೆ. ರಾಜಕೀಯ ಪಕ್ಷಗಳನ್ನು ನಾಚಿಸುವಂತೆ ಶಿಕ್ಷಕರು ಹಾಗೂ ನೌಕರರು ಸುತ್ತಾಡಿ ಮತಯಾಚನೆ ಮಾಡುತ್ತಿದ್ದಾರೆ. ಜಾತಿ, ಧರ್ಮದ ಆಧಾರದಲ್ಲಿ ಮತಯಾಚನೆ ಮಾಡಲಾಗುತ್ತಿದೆ.