ರಾಜ್ಯದಲ್ಲಿ ಪಿಎಂ ವಿಶ್ವಕರ್ಮ ತರಬೇತಿ ತಕ್ಷಣ ಆರಂಭಿಸಿ: ಅತುಲ್ ಕುಮಾರ್ ತಿವಾರಿ

| Published : Jan 06 2024, 02:00 AM IST / Updated: Jan 06 2024, 05:22 PM IST

ರಾಜ್ಯದಲ್ಲಿ ಪಿಎಂ ವಿಶ್ವಕರ್ಮ ತರಬೇತಿ ತಕ್ಷಣ ಆರಂಭಿಸಿ: ಅತುಲ್ ಕುಮಾರ್ ತಿವಾರಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ ನೋಂದಣಿಯಾಗಿರುವ ಫಲಾನುಭವಿಗಳಿಗೆ ತಕ್ಷಣದಲ್ಲಿ ತರಬೇತಿ ಆರಂಭಿಸುವಂತೆ ರಾಜ್ಯದ ಜಿಲ್ಲಾಧಿಕಾರಿಗಳಿಗೆ ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಸೂಚಿಸಿದರು.

ಕಾರವಾರ: ರಾಜ್ಯದಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ ನೋಂದಣಿಯಾಗಿರುವ ಫಲಾನುಭವಿಗಳಿಗೆ ತಕ್ಷಣದಲ್ಲಿ ತರಬೇತಿ ಆರಂಭಿಸುವಂತೆ ರಾಜ್ಯದ ಜಿಲ್ಲಾಧಿಕಾರಿಗಳಿಗೆ ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಸೂಚಿಸಿದರು.

ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಡಿಯೋ ಸಂವಾದದ ಮೂಲಕ, ರಾಜ್ಯದ ಕೌಶಲ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳು ಮತ್ತು ವಿವಿಧ ಜಿಲ್ಲೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕರ್ನಾಟಕದಲ್ಲಿ ಈ ವರೆಗೆ ಯೋಜನೆಗೆ 16,64,256 ಜನರ ನೋಂದಣಿ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಒಳಗೊಂಡ ತರಬೇತಿ ಕೇಂದ್ರಗಳಲ್ಲಿ ವಸತಿಯುತ ತರಬೇತಿ ನೀಡಲು ಕ್ರಮಕೈಗೊಳ್ಳಬೇಕು.

 ಮೊದಲ ಆದ್ಯತೆಯಲ್ಲಿ ಸರ್ಕಾರಿ ಕೇಂದ್ರಗಳನ್ನು ತರಬೇತಿ ಕೇಂದ್ರಗಳನ್ನಾಗಿ ಗುರುತಿಸಿ ನಂತರದಲ್ಲಿ ಖಾಸಗಿ ಕೇಂದ್ರದಲ್ಲಿ ಕೂಡಾ ತರಬೇತಿ ನೀಡಬೇಕು. ಮಹಿಳಾ ಅಭ್ಯರ್ಥಿಗಳಿಗೆ ಸಾಧ್ಯವಾದಷ್ಟು ಅವರ ವಾಸಸ್ಥಳಕ್ಕೆ ಹತ್ತಿರದ ಪ್ರದೇಶದಲ್ಲಿ ತರಬೇತಿ ಕೇಂದ್ರ ಗುರುತಿಸಬೇಕು. ಜಿಲ್ಲಾ ಮಟ್ಟದಲ್ಲಿ ತರಬೇತಿ ಕೇಂದ್ರ ತೆರೆಯಲು ಕೊರತೆಯಾದಲ್ಲಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲೂ ಕೇಂದ್ರ ತೆರೆದು ತರಬೇತಿ ನೀಡಲು ಕ್ರಮಕೈಗೊಳ್ಳಬೇಕು ಎಂದರು.

ಯೋಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕುಶಲಕರ್ಮಿಗಳ ನೋಂದಣಿ ಮಾಡಲು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಯೋಜನೆಯ ಪ್ರಯೋಜನ ಒದಗಿಸಬೇಕು. ಕುಶಲಕರ್ಮಿಗಳಿಗೆ ಟೂಲ್ ಕಿಟ್ ವಿತರಣೆ, ಅವರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತು ಬ್ರಾಡಿಂಗ್ ವ್ಯವಸ್ಥೆಯನ್ನೂ ಕೂಡಾ ಸರ್ಕಾರದಿಂದ ಮಾಡಲಾಗುವುದು ಎಂದು ತಿಳಿಸಿದರು.

ಯೋಜನೆ ಅನುಷ್ಠಾನ ಕುರಿತಂತೆ ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಕೇಂದ್ರದಿಂದ ತಕ್ಷಣ ಸರಿಪಡಿಸಲಾಗುತ್ತದೆ. ಎಲ್ಲ ಜಿಲ್ಲೆಗಳ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಸರಿಪಡಿಸಿಕೊಡಲು ಪ್ರಯತ್ನಿಸುವುದಾಗಿ ತಿಳಿಸಿದ ಅವರು, ಪಿಎಂ ವಿಶ್ವಕರ್ಮ ಯೋಜನೆಯನ್ನು ಕರ್ನಾಟಕದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಅಭಿಪ್ರಾಯಿಸಿದರು.

ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ಕೇಂದ್ರ ಕೌಶಲ್ಯ ಅಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಸೋನಲ್ ಮಿಶ್ರ, ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ಕನಗವಲ್ಲಿ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹಾಗೂ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಇದ್ದರು.