ಬೆಕ್ಕಿಲ್ಲದ ಮನೆಯಲ್ಲಿನ ಇಲಿಗಳಂತೆ ರಾಜ್ಯದ ಆಡಳಿತ

| Published : Oct 19 2024, 12:23 AM IST

ಬೆಕ್ಕಿಲ್ಲದ ಮನೆಯಲ್ಲಿನ ಇಲಿಗಳಂತೆ ರಾಜ್ಯದ ಆಡಳಿತ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹಲವು ವಿವಾದ ಹಾಗೂ ಹಗರಣಗಳ ಜಂಜಾಟದಲ್ಲಿರುವುದರಿಂದ ರಾಜ್ಯದ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಬೆಕ್ಕಿಲ್ಲದ ಮನೆಯಲ್ಲಿ ಇಲಿಗಳ ಓಡಾಟ ಎಂಬಂತೆ ರಾಜ್ಯದ ಆಡಳಿತ ವರ್ತಿಸುತ್ತಿದ್ದು, ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಇದೆಯೋ ಇಲ್ಲವೋ ಎನ್ನುವಂತಾಗಿದೆ. ಅದರಲ್ಲೂ ಶಿಕ್ಷಣ ಇಲಾಖೆಯ ಮಟ್ಟಿಗೆ ಸರ್ಕಾರ ಸತ್ತುಹೋಗಿದೆ‌ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಕಿಡಿಕಾರಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹಲವು ವಿವಾದ ಹಾಗೂ ಹಗರಣಗಳ ಜಂಜಾಟದಲ್ಲಿರುವುದರಿಂದ ರಾಜ್ಯದ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಬೆಕ್ಕಿಲ್ಲದ ಮನೆಯಲ್ಲಿ ಇಲಿಗಳ ಓಡಾಟ ಎಂಬಂತೆ ರಾಜ್ಯದ ಆಡಳಿತ ವರ್ತಿಸುತ್ತಿದ್ದು, ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಇದೆಯೋ ಇಲ್ಲವೋ ಎನ್ನುವಂತಾಗಿದೆ. ಅದರಲ್ಲೂ ಶಿಕ್ಷಣ ಇಲಾಖೆಯ ಮಟ್ಟಿಗೆ ಸರ್ಕಾರ ಸತ್ತುಹೋಗಿದೆ‌ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಕಿಡಿಕಾರಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ 5, 8, 9ನೇ ತರಗತಿಗಳಿಗೂ ಬೋರ್ಡ್ ಪರೀಕ್ಷೆ ಮಾಡಲು ಹೋಗಿದ್ದರು. ಜೊತೆಗೆ ಈ ಬಾರಿ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವೆಬ್ ಕಾಸ್ಟಿಂಗ್ ಮಾಡಿದ್ದರಿಂದ ನಗರದ ಹಲವು ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಗೆ ಪರೀಕ್ಷಾ ಕೇಂದ್ರಗಳೇ ಬೇಡ ಎಂದು ಶಿಕ್ಷಣ ಇಲಾಖೆಗೆ ಪತ್ರ ಬರೆಯುತ್ತಿದ್ದಾರೆ. ಒಮ್ಮೆಲೆ ವೆಬ್ ಕಾಸ್ಟಿಂಗ್ ಕ್ಯಾಮೆರಾ ಹಾಕಿ ಮಕ್ಕಳಿಗೆ ಬೋರ್ಡ್ ಪರೀಕ್ಷೆ ಬರೆಯಿರಿ ಎಂದರೆ ಮಕ್ಕಳು ಹೆದರುತ್ತಾರೆ‌. ಹಿಂದು ಮುಂದು ಯೋಚನೆ ಮಾಡದೆ ಸರ್ಕಾರ ಇಂತಹ ನಿರ್ಧಾರ ಮಾಡಿ ಶಿಕ್ಷಣ ಇಲಾಖೆಯನ್ನು ಸರ್ವನಾಶ ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಅಲ್ಲದೆ 10ನೇ ತರಗತಿಯ ಪರೀಕ್ಷಾ ಪ್ಯಾಟರ್ನ್(ಮಾದರಿ) ಬದಲಾವಣೆ ಮಾಡುವುದಕ್ಕೆ ಮುಂದಾಗಿದ್ದಾರೆ. ಪರೀಕ್ಷಾ ಪ್ಯಾಟರ್ನ್ ಬದಲಾಯಿಸಿ ಸಿಬಿಎಸ್‌ಇ ಮಾದರಿಯಲ್ಲಿ ಮಾಡಿ ಅವಾಂತರ ಮಾಡುತ್ತಾರೆ‌. ಹೀಗೆ ಮಾಡುವುದರಿಂದ ಪರೀಕ್ಷೆ ಬರೆಯಲಿರುವ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಆತಂಕದಲ್ಲಿರುವಂತೆ ಮಾಡಿರುವ ಆತಂಕವಾದಿ ಸರ್ಕಾರ ಇದಾಗಿದೆ ಎಂದು ಟೀಕಿಸಿದರು.

ಶಿಕ್ಷಣ ಇಲಾಖೆಯಲ್ಲಿನ ತಳಬುಡವಿಲ್ಲದ ಬದಲಾವಣೆಗಳು ಹಾಗೂ ನೀತಿ ನಿಯಮಗಳನ್ನು ಮಾಡಿರುವುದರಿಂದ ಈಗಾಗಲೇ ಸುಪ್ರೀಂ ಕೋರ್ಟ್ ನೇರವಾಗಿ ರಾಜ್ಯ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದೆ. ಬೇಕಾಬಿಟ್ಟಿ ನಿರ್ಧಾರ ಮಾಡುವ ರಾಜ್ಯದ ಶಿಕ್ಷಣ ಮಂತ್ರಿಯನ್ನು ಮೊದಲು ತೆಗೆದು ಹಾಕಬೇಕು. ಶಿಕ್ಷಣ ಇಲಾಯಿಂದ 5, 8, 9, 10, 11 ಹೀಗೆ ಎಲ್ಲ ತರಗತಿಗಳಲ್ಲಿಯೂ ಬೋರ್ಡ್ ಪರೀಕ್ಷೆ ಮಾಡಲು ಮುಂದಾಗಿರುವುದು ಖೇದಕರ. ಎಲ್ಲ ತರಗತಿಗಳ ಪರೀಕ್ಷೆಯನ್ನು ಬೋರ್ಡ್ ಪರೀಕ್ಷೆ ಮಾಡುವುದರಿಂದ ನೂರಾರು ಕೋಟಿ ಹಣ ಬೋರ್ಡ್‌ನಲ್ಲಿ ಉಳಿಯುತ್ತದೆ. ಹಾಗಾಗಿ ಎಲ್ಲವೂ ಬೋರ್ಡ್ ಪರೀಕ್ಷೆ ಮಾಡಲು ಮುಂದಾಗಿದ್ದಾರೆ ಎಂದರು.

ಇನ್ನು, ರಾಜ್ಯದಲ್ಲಿ 750 ಸರ್ಕಾರಿ ಪಿಯು ಕಾಲೇಜುಗಳಿದ್ದು, ಇಡೀ ರಾಜ್ಯದಲ್ಲಿ ಒಬ್ಬರೇ ಒಬ್ಬರು ದೈಹಿಕ ಶಿಕ್ಷಣ ಉಪನ್ಯಾಸಕರಿಲ್ಲ. ಆದರೂ ವಿದ್ಯಾರ್ಥಿಗಳಿಂದ ಕ್ರೀಡಾ ಶುಲ್ಕ ಸಂಗ್ರಹ ಮಾಡುತ್ತಾರೆ. 303 ಸರ್ಕಾರಿ ಪದವಿ ಕಾಲೇಜಿನಲ್ಲಿ ಒಬ್ಬರೂ ಕಾಯಂ ಪ್ರಾಂಶುಪಾಲರಿಲ್ಲ. ಒಟ್ಟಾರೆಯಾಗಿ ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆಯನ್ನು ಬಹಳ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಈ ಸರ್ಕಾರ ಬಹಳ‌ದಿನ ಇರುವುದಿಲ್ಲ ಎಂದು ಬೇಕಾಬಿಟ್ಟಿ ತೀರ್ಮಾನ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಹಾಗೂ ಪಾಲಕರ ಹಿತ ಬಯಸದ ಈ ಸರ್ಕಾರವೇ ನಾಲಾಯಕ ಸರ್ಕಾರ. ತರಾತುರಿಯಲ್ಲಿ ಪರೀಕ್ಷೆಗಳನ್ನು ಮುಂದೂಡಿ ಎಂದರೆ ಪೊಲೀಸರಿಂದ ಹಲ್ಲೆ ಮಾಡಿಸುತ್ತಿದ್ದಾರೆ. ಯಾರಾದರೂ ರಾಜ್ಯಪಾಲರಿಗೆ ದೂರು ಕೊಟ್ಟರೆ ಅವರನ್ನು ಒಳಗೆ ಹಾಕಿಸುತ್ತಾರೆ. ಹೀಗಾಗಿ ಇದೊಂದು ಗೂಂಡಾ ಸರ್ಕಾರವಾಗಿದೆ. ಮುಖ್ಯಮಂತ್ರಿಗಳು ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಮೂಲಕ ಶಿಕ್ಷಣ ಇಲಾಖೆಗೆ ಕಾಯಕಲ್ಪ ಕೊಡಬೇಕು, ಇಲ್ಲವೇ ಕುರ್ಚಿ ಬಿಡಬೇಕು ಎಂದು ಆಗ್ರಹಿಸಿದರು.-------------

ಕೋಟ್‌

ಸರ್ಕಾರ ಶಿಕ್ಷಣ ಇಲಾಖೆಯನ್ನು ಬಹಳ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಈ ಸರ್ಕಾರ ಬಹಳ‌ದಿನ ಇರುವುದಿಲ್ಲ ಎಂದು ಬೇಕಾಬಿಟ್ಟಿ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪಾಲಕರ ಹಿತ ಬಯಸದ ಈ ಸರ್ಕಾರವೇ ನಾಲಾಯಕ ಸರ್ಕಾರ. ತರಾತುರಿಯಲ್ಲಿ ಪರೀಕ್ಷೆಗಳನ್ನು ಮುಂದೂಡಿ ಎಂದರೆ ಪೊಲೀಸರಿಂದ ಹಲ್ಲೆ ಮಾಡಿಸುತ್ತಿದ್ದಾರೆ. ರಾಜ್ಯಪಾಲರಿಗೆ ದೂರು ನೀಡಿದರೆ ಅವರನ್ನು ಒಳಗೆ ಹಾಕಿಸುತ್ತಾರೆ.

ಅರುಣ ಶಹಾಪುರ, ವಿಧಾನ ಪರಿಷತ್ ಮಾಜಿ ಸದಸ್ಯ

ಈ ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ್, ಮುಖಂಡರಾದ ಈರಣ್ಣ ರಾವೂರ, ವಿಜಯ ಜೋಶಿ ಉಪಸ್ಥಿತರಿದ್ದರು.