ರಾಜ್ಯ ಕೃಷಿ ಮಂತ್ರಿಗಳು ಕುಂಭಕರ್ಣ ನಿದ್ರೆಗೆ ಜಾರಿದ್ದಾರೆ : ನಿಖಿಲ್‌

| Published : Jul 25 2025, 12:30 AM IST

ರಾಜ್ಯ ಕೃಷಿ ಮಂತ್ರಿಗಳು ಕುಂಭಕರ್ಣ ನಿದ್ರೆಗೆ ಜಾರಿದ್ದಾರೆ : ನಿಖಿಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ, ರೈತರಿಗೆ ರಸಗೊಬ್ಬರ ಕೊಡಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಒಂದು ಚೀಲ ಗೊಬ್ಬರ ಬೇಕು ಅಂತ ಹೋದ್ರೆ ನಾಲ್ಕೈದು ಗಂಟೆ ಕಾಯಿಸುತ್ತಾರೆ. ರಾಜ್ಯದ ಕೃಷಿ ಸಚಿವರು ಕುಂಭಕರ್ಣ ನಿದ್ರೆಗೆ ಜಾರಿದ್ದಾರೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಸಚಿವ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಚಲುವರಾಯಸ್ವಾಮಿ ವಿರುದ್ಧ ಕಿಡಿ । ಕುರ್ಚಿ ಕಿತ್ತಾಟದಲ್ಲಿ ರಾಜ್ಯದ ಜನ ಬೇಸತ್ತಿದ್ದಾರೆ । ಜೆಡಿಎಸ್ ಸದಸ್ಯತ್ವ ಅಭಿಯಾನ

ಕನ್ನಡಪ್ರಭ ವಾರ್ತೆ ಕೊಪ್ಪ

ರೈತರಿಗೆ ರಸಗೊಬ್ಬರ ಕೊಡಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಒಂದು ಚೀಲ ಗೊಬ್ಬರ ಬೇಕು ಅಂತ ಹೋದ್ರೆ ನಾಲ್ಕೈದು ಗಂಟೆ ಕಾಯಿಸುತ್ತಾರೆ. ರಾಜ್ಯದ ಕೃಷಿ ಸಚಿವರು ಕುಂಭಕರ್ಣ ನಿದ್ರೆಗೆ ಜಾರಿದ್ದಾರೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಸಚಿವ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹರಂದೂರು ದ್ಯಾವೇಗೌಡ ಮೆಮೋರಿಯಲ್ ನಲ್ಲಿ ಗುರುವಾರ ನಡೆದ ಜೆಡಿಎಸ್ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಮಾತನಾಡಿ, ರಾಜ್ಯದ ಕೃಷಿ ಸಚಿವರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಒಂದು ಟಿಸಿ ಕನೆಕ್ಷನ್ ಪಡೀಬೇಕಾದ್ರೆ ಕುಮಾರಣ್ಣನ ಆಡಳಿತದಲ್ಲಿ ₹25ಸಾವಿರ ಇತ್ತು, ಈಗ 2.5ಲಕ್ಷ ಆಗಿದೆ. ನೀವು ಏನ್ ಸರ್ಕಾರ ಮಾಡ್ತಿದ್ದೀರಾ ಅಂತ ರೈತರು ಪ್ರಶ್ನೆ ಮಾಡ್ತಿದ್ದಾರೆ ಎಂದು ಹೇಳಿದರು.

ರಾಜ್ಯದ ಅರಣ್ಯ ಪ್ರದೇಶದೊಳಗೆ ಜಾನುವಾರು ಮೇಯಿಸುವುದಕ್ಕೆ ನಿಷೇಧ ಎಂದು ಹೇಳಿರುವ ಸಚಿವ ಈಶ್ವರ್ ಖಂಡ್ರೆ ಅವರ ಸೂಚನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಈ ರೀತಿ ಬೇಜವಾಬ್ದಾರಿ ಹೇಳಿಕೆಗಳಿಂದ ಸರ್ಕಾರ ಆಡಳಿತ ಕುಸಿ ಯುತ್ತಿದೆ. ಶೃಂಗೇರಿ ಕ್ಷೇತ್ರದಲ್ಲಿ ಎಲ್ಲಾ ಕಡೆ ರಸ್ತೆಗಳು ಗುಂಡಿ ಬಿದ್ದಿದೆ. ಇದನ್ನ ಮುಚ್ಚುವುದಕ್ಕೂ ಈ ಸರ್ಕಾರದ ಬಳಿ ಹಣವಿಲ್ಲ ಎಂದು ವ್ಯಂಗ್ಯವಾಡಿದರು.

ಮನೆಗಳನ್ನ ನಿರ್ಮಿಸಿಕೊಂಡವರಿಗೆ ಹಕ್ಕು ಪತ್ರ ನೀಡಿಲ್ಲ. ಯಾವುದೇ ರೀತಿಯಲ್ಲೂ ಕ್ಷೇತ್ರದ ಜನತೆ ಅಭಿವೃದ್ಧಿಗೆ ಇಲ್ಲಿವರೆಗೂ ಕಾಂಗ್ರೆಸ್ ಶಾಸಕರು ಅಸಹಾಯಕತೆ ತೋರಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮೊರಾರ್ಜಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಸೂಸೈಡ್ ಮಾಡಿಕೊಂಡಿದ್ದಾರೆ ಎಂದು ತಪ್ಪಾಗಿ ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ಪಾರದರ್ಶಕ ತನಿಖೆಗೆ ನಾವು ಒತ್ತಾಯಿಸುತ್ತೇವೆ. ಇದನ್ನ ಕುಮಾರಣ್ಣನ ಗಮನಕ್ಕೆ ತಂದು ಗಂಭೀರವಾಗಿ ಪ್ರಕರಣವನ್ನ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಮಾಡಿ ಎಂದು ಕೋರ್ಟ್ ಸೂಚನೆ ನೀಡಿದೆ. ಆದರೆ, ಚುನಾವಣೆ ನಡೆಸಲು ಸರ್ಕಾರಕ್ಕೆ ಆತ್ಮವಿಶ್ವಾಸವಿಲ್ಲ. 3 ವರ್ಷ ಎಷ್ಟು ಆಗುತ್ತೋ ಅಷ್ಟು ದುಡ್ಡು ಮಾಡಿಕೊಳ್ಳಲು ಕಾಂಗ್ರೆಸ್ ನವರು ಸಿದ್ಧರಾಗಿದ್ದಾರೆ ಎಂದು ಆರೋಪಿಸಿದರು.

ಮೈಸೂರಿನಲ್ಲಿ ಸಾಧನ ಸಮಾವೇಶ ಮಾಡಿದ್ರು, ರಾಜ್ಯದಲ್ಲಿ ಏನು ಸಾಧನೆ ಆಗಿದೆ ಅಂತ ಕಾಂಗ್ರೇಸ್ಸಿಗರೇ ಉತ್ತರ ಕೊಡಬೇಕು. ಈ ಸರ್ಕಾರಕ್ಕೆ ರಾಜ್ಯದ ಅಭಿವೃದ್ಧಿಕ್ಕಿಂತ ಕುರ್ಚಿ ಕಿತ್ತಾಟವೇ ಮುಖ್ಯ ಎಂದು ಹೇಳಿದರು.

ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಸುಧಾಕರ್‌ ಎಸ್. ಶೆಟ್ಟಿ ಮಾತನಾಡಿ, ಕುಮಾರಸ್ವಾಮಿಯವರನ್ನು ಮತ್ತೊಮ್ಮೆ ರಾಜ್ಯದ ಮುಖ್ಯ ಮಂತ್ರಿಯಾಗಿ ಮಾಡ ಬೇಕೆನ್ನುವುದು ನಮ್ಮೆಲ್ಲರ ಅಸೆ. ಕಳೆದ ಚುನಾವಣೆಯಲ್ಲಿ ನನಗೆ ಮತ ನೀಡಿದ ಮತದಾರರ ಋಣ ತೀರಿಸುವುದು ತಳ ಮಟ್ಟದಿಂದ ಪಕ್ಷ ಸದೃಢಗೊಳಿಸುವುದು ನನ್ನ ಕರ್ತವ್ಯ ಎಂದು ಹೇಳಿದರು.

ಕ್ಷೇತ್ರದಲ್ಲಿದ್ದು ಕೆಲಸ ಮಾಡುತ್ತಿದ್ದೇನೆ. ಈ ಬಾರಿ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನಮ್ಮೊಂದಿಗಿರುವುದು ಮತ್ತಷ್ಟು ಬಲ ತಂದಿದೆ. ರಾಜ್ಯದಲ್ಲಿ ಅಬಿವೃದ್ಧಿ ಕಾಣದ ಕೇತ್ರವಿದ್ದರೆ ಅದು ಶೃಂಗೇರಿ ಕ್ಷೇತ್ರ. ಓದು ಮುಗಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶ ವಿಲ್ಲ. ಆರೋಗ್ಯ, ಶಿಕ್ಷಣ ಕೇತ್ರಗಳು ಅಭಿವೃದ್ಧಿ ಕಾಣದೆ ಸೊರಗಿವೆ. ರಸ್ತೆ ಅಭಿವೃದ್ಧಿಯಾಗಿಲ್ಲ, ಸ್ಥಳೀಯ ಶಾಸಕ ಕಳೆದ 7 ವರ್ಷಗಳಿಂದ ಯಾವುದೇ ಅಭಿವೃದ್ಧಿ ಮಾಡದೆ ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್‌.ಕೆ. ಕುಮಾರಸ್ವಾಮಿ, ಎಚ್.ವಿ. ವೆಂಕಟೇಶ್, ರಂಜನ್ ಅಜಿತ್ ಕುಮಾರ್, ರಶ್ಮಿ ರಾಮೇ ಗೌಡ, ಕನ್ಯಾಕುಮಾರಿ, ಪೂರ್ಣಿಮಾ, ಮುಖಂಡರಾದ ದಿವಾಕರ್ ಭಟ್, ರಾಮಸ್ವಾಮಿ ಖಗ್ಗ ಸೇರಿದಂತೆ ಸ್ಥಳೀಯ ಮುಖಂಡರು, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.-- ಬಾಕ್ಸ್‌---ಸೂಪರ್ ಸಿಎಂ ಸುರ್ಜೆವಾಲಸಿಎಂ ಸಿದ್ದರಾಮಯ್ಯರ ಮೇಲೆ ಮತ್ತೋರ್ವ ಸೂಪರ್ ಸಿಎಂ ಇದ್ದಾರೆ ಅವರು ಹೇಳಿದಂತೆ ಎಲ್ಲಾ ನಡೆಯುತ್ತದೆ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದರು.

ರಾಜ್ಯದಲ್ಲಿ ಕಾಂಗ್ರೇಸ್ ಗೆ ಜನ 136 ಶಾಸಕರನ್ನು ನೀಡಿದ್ದಾರೆ. ಆದರೆ, ಯಾವ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ಐದು ಪೈಸೆ ಯನ್ನು ಕೊಟ್ಟಿಲ್ಲ. ಶಾಸಕರೆಲ್ಲ ದೆಹಲಿಗೆ ತೆರಳಿ ಸೂಪರ್ ಸಿಎಂ ಸುರ್ಜೆವಾಲರ ಬಳಿ ಅನುದಾನಕ್ಕಾಗಿ ಬೇಡಿಕೆ ಇಟ್ಟ ನಂತರ ಸಿಎಂ ಸಿದ್ದರಾಮಯ್ಯ ಕಾಂಗ್ರೇಸ್ ಶಾಸಕರ ಕ್ಷೇತ್ರಗಳಿಗೆ ತಲಾ ₹50 ಕೋಟಿ ಅನುದಾನದ ಭರವಸೆ ನೀಡಿದ್ದಾರೆ ಎಂದರು.

ಬಿಜೆಪಿ ಮತ್ತು ಜೆಡಿಎಸ್ ಶಾಸಕರಿಗೂ ಸಮಾನ ಅನುದಾನ ನೀಡಬೇಕು. ಅವರೇನೂ ಬೇರೆ ರಾಜ್ಯದಿಂದ ಬಂದವರಲ್ಲ ಎಂದ ಅವರು, ಪ್ರತಿಯೊಬ್ಬ ಕಾಂಗ್ರೆಸ್ ಮಂತ್ರಿಗಳು, ಶಾಸಕರದ್ದು ಭಿನ್ನವಾದ ಹೇಳಿಕೆ ನೀಡುತ್ತಾರೆ. ಈ ತಾರತಮ್ಯ, ಬೇಜವಾಬ್ದಾರಿ ಹಾಗೂ ಬಾಲಿಶತನದ ಹೇಳಿಕೆಗಳು ಮುಂದಿನ ದಿನಗಳಲ್ಲಿ ಕಾಂಗ್ರೇಸ್‌ನ ಅಧಃ ಪತನಕ್ಕೆ ಕಾರಣವಾಗಲಿದೆ ಎಂದು ಹೇಳಿದರು.

- 24 ಕೆಸಿಕೆಎಂ 2

ಕೊಪ್ಪದ ಹರಂದೂರು ದ್ಯಾವೇಗೌಡ ಮೆಮೋರಿಯಲ್ ನಲ್ಲಿ ಗುರುವಾರ ನಡೆದ ಜೆಡಿಎಸ್ ಸದಸ್ಯತ್ವ ಅಭಿಯಾನವನ್ನು ನಿಖಲ್‌ ಕುಮಾರಸ್ವಾಮಿ ಉದ್ಘಾಟಿಸಿದರು. ಮಾಜಿ ಸಚಿವ ಎಚ್‌.ಕೆ. ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಸುಧಾಕರ್‌ ಎಸ್. ಶೆಟ್ಟಿ, ದಿವಾಕರ್ ಭಟ್, ಎಚ್.ವಿ. ವೆಂಕಟೇಶ್ ಇದ್ದರು.