ಸಾರಾಂಶ
ಮಂಗಳೂರು : ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರು ಹೊರಡಿಸಿದ ಪ್ರಾಸಿಕ್ಯೂಶನ್ ವಿಚಾರವನ್ನು ನ್ಯಾಯಾಲಯ ತೀರ್ಮಾನಿಸುತ್ತದೆ. ಆದರೆ ರಾಜ್ಯಪಾಲರ ಪಕ್ಷಪಾತಿ ನಡೆ ಇಡೀ ರಾಜ್ಯಕ್ಕೆ ಗೊತ್ತಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮೈಸೂರು ಮೂಡಾ ಹಗರಣಕ್ಕೆ ಸಂಬಂಧಿಸಿ ನ್ಯಾಯಾಲಯ ಆದೇಶ ಕಾಯ್ದಿರಿಸಿದ ಕುರಿತು ಮಂಗಳೂರಲ್ಲಿ ಶುಕ್ರವಾರ ಸುದ್ದಿಗಾರರಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ 12 ಗಂಟೆಯ ಒಳಗೆ ತರಾತುರಿಯಲ್ಲಿ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದರು.
ವಕೀಲರು ಯಾವ ರೀತಿ ವಾದ ಮಾಡುತ್ತಿದ್ದಾರೆ ಎಂದು ನಾನು ನೋಡಿಲ್ಲ. ಆದರೆ ರಾಜ್ಯಪಾಲರ ನಡೆ ಸರಿ ಇಲ್ಲ ಎಂದಾದರೆ ಆದೇಶ ತಪ್ಪು. ರಾಜ್ಯಪಾಲರು ಸರ್ಕಾರದ ಸಾಂವಿಧಾನಿಕ ಮುಖ್ಯಸ್ಥ. ಮುಖ್ಯಸ್ಥ ಸರ್ಕಾರದ ವಿರುದ್ಧವೇ ಷಡ್ಯಂತ್ರದಲ್ಲಿ ಭಾಗಿಯಾದರೆ ಏನೆಂದು ಕರೆಯೋದು? ಇದು ರಾಜ್ಯಕ್ಕೆ ಮಾಡಿದ ದ್ರೋಹ, ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಮಾಡಿದ್ದಾರೆ ಎಂದರು.
ಸುಳ್ಳನ್ನು ಸತ್ಯ ಮಾಡುವ ಆರೆಸ್ಸೆಸ್: ಬಿಜೆಪಿಯವರು ಸುಮ್ಮನೆ ಬೊಬ್ಬೆ ಹಾಕಿ ಸುಳ್ಳನ್ನು ಸತ್ಯ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಸುಳ್ಳನ್ನು ಸತ್ಯ ಮಾಡುವುದೇ ಆರ್‌ಎಸ್‌ಎಸ್‌ನ ತರಬೇತಿಯಾಗಿದೆ. ಆರ್‌ಎಸ್‌ಎಸ್ ಇದನ್ನೇ ತರಬೇತಿ ಕೊಡುವುದು, ಯಾವ ರೀತಿ ಪ್ರಚೋದನೆ ಮಾಡಬೇಕು, ಗಲಾಟೆ ಎಬ್ಬಿಸಬೇಕು, ದಂಗೆ ಮಾಡಬೇಕು ಎಂದು ತರಬೇತಿ ನೀಡುತ್ತಾರೆ. ಬಿಜೆಪಿ, ಸಂಘ ಪರಿವಾರದಲ್ಲಿ ಇದಕ್ಕೆಂದೇ ತರಬೇತಿ ಇರುತ್ತದೆ ಎಂದು ಅವರು ಹೇಳಿದರು.ಜಿಂದಾಲ್‌ಗೆ ಭೂಮಿ ಹಸ್ತಾಂತರ ಬಗ್ಗೆ ಹಿಂದಿನ ಸರ್ಕಾರದ ಕ್ಯಾಬಿನೆಟ್‌ನಲ್ಲಿ ಮಂಜೂರಾತಿ ನೀಡಲಾಗಿದೆ. ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ಯಾಕೆ ಅನುಮತಿ ನೀಡಿದ್ದಾರೆ? ಎಷ್ಟೋ ದಶಕದ ಹಿಂದೆ ಜಮೀನು ಸ್ವಾಧೀನ ಆಗಿದೆ. ಇವತ್ತಿನ ಬೆಲೆಗೂ ಅವತ್ತಿನ ಬೆಲೆಗೂ ಹೋಲಿಕೆ ಮಾಡಲು ಆಗುವುದಿಲ್ಲ ಎಂದರು.
ಬಿಜೆಪಿಗೆ ತಿರುಗು ಬಾಣ: ಆರ್‌ಎಸ್ಎಸ್‌ನ ಅಂಗಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್, ಚಾಣಾಕ್ಯ ಯೂನಿವರ್ಸಿಟಿಗೆ ಕಡಿಮೆ ಬೆಲೆಗೆ ಬೆಲೆ ಬಾಳುವ ಭೂಮಿ ನೀಡಲಾಗಿದೆ. ಇಲ್ಲಿ ಯಾವುದೇ ರೀತಿಯ ಕಡಿಮೆ ಬೆಲೆ ಮಾಡಿಲ್ಲ. ಕೆದಕುತ್ತಾ ಹೋದರೆ ಬಿಜೆಪಿಗರದ್ದೇ ನೂರು ಹಗರಣ ಬೆಳಕಿಗೆ ಬರುತ್ತದೆ. ನೀವು ಮಾಡಬಾರದೆಲ್ಲ ಮಾಡಿದ್ದೀರಿ. ಯಡಿಯೂರಪ್ಪ ಅವರು ಟ್ರಸ್ಟ್‌ಗೆ ಜಿಂದಾಲ್‌ನಿಂದ ದುಡ್ಡು ತಗೊಂಡಿಲ್ಲವೇ? ಮುಖ್ಯಮಂತ್ರಿಯಾಗಿ ಜಿಂದಾಲ್‌ನಿಂದ ಚೆಕ್ ಮೂಲಕ ಹಣ ತಗೊಂಡಿದ್ದರು.
ಯಾವ ಕಾರಣಕ್ಕಾಗಿ ಕೋಟಿ ಕೋಟಿ ಮೊತ್ತವನ್ನು ಜಿಂದಾಲ್ ಅವರು ಕೊಟ್ಟಿದ್ದಾರೆ? ಜಿಂದಾಲ್‌ನಿಂದ 30- 40 ಕೋಟಿ ರು. ತೆಗೆದುಕೊಂಡಿದ್ದಾರೆ. ಚೆಕ್ ಮೂಲಕ ನೇರವಾಗಿ ಹಣ ಸ್ವೀಕರಿಸಿದ್ದಾರೆ. ಇವರು ಮೈನಿಂಗ್‌ಗೆ ಅನುಮತಿ ಕೊಟ್ಟಿದ್ದರು. ಯಾವ ಕಾರಣಕ್ಕೆ ಹಣ ಕೊಟ್ಟಿದ್ದಾರೆ ಎಂಬುದು ಸ್ಪಷ್ಟವಾಯ್ತಲ್ಲ ಎಂದರು. ಮಾಜಿ ಸಚಿವ ಮುರುಗೇಶ್ ನಿರಾಣಿಯವರು ಇಂಡಸ್ಟ್ರಿಯಲ್ ಭೂಮಿ ಖರೀದಿಸಿ ಇಂಟರ್‌ನ್ಯಾಷನಲ್ ಸ್ಕೂಲ್ ಮಾಡಿದ್ದಾರೆ. ಇನ್ನು ಇಂತಹ ಎಷ್ಟೆಷ್ಟು ಕೇಸ್ ಇದೆ ಎಂದು ಗೊತ್ತಿಲ್ಲ. ಇನ್ನೊಬ್ಬರನ್ನು ದೂಷಿಸುವ ಮೊದಲು ನೀವು ಸರಿ ಇರಬೇಕು ಎಂದರು.