ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ರಾಜ್ಯಾದ್ಯಂತ ನಡೆಸಲುದ್ದೇಶಿಸಿರುವ ಬಿಜೆಪಿಯ ಪ್ರತಿಭಟನೆಗಳ ಸರಣಿಗೆ ಕೋಲಾರದಲ್ಲಿ ಬೃಹತ್ ರ್‍ಯಾಲಿ ನಡೆಸುವ ಮೂಲಕ ಸೋಮವಾರ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಹರಿಹಾಯ್ದ ಬಿಜೆಪಿ ಮುಖಂಡರು, ರಾಜ್ಯದಲ್ಲಿ ಅಧಿಕಾರದಲ್ಲಿರುವುದು ರೈತ ವಿರೋಧಿ ಸರ್ಕಾರ. ಕಾರ್ಯಕರ್ತರಿಗೆ ಬಿರಿಯಾನಿ ತಿನ್ನಿಸಲು ಇವರ ಬಳಿ ಹಣ ಇದೆ. ಆದರೆ ರೈತರಿಗೆ ಬರ ಪರಿಹಾರ ನೀಡಲು ಆಗುತ್ತಿಲ್ಲ ಎಂದು ಕಿಡಿಕಾರಿದರು.
ನಗರದ ಬಂಗಾರಪೇಟೆ ರಸ್ತೆಯ ಅಂಬೇಡ್ಕರ್ ವೃತ್ತದಿಂದ ಮೆಕ್ಕೆ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ತೀವ್ರ ಕಿಡಿಕಾರಿದರು. ಬರಪರಿಹಾರ ನೀಡಿ ಇಲ್ಲ, ಖುರ್ಚಿ ಬಿಡಿ ಎಂದು ಆಕ್ರೋಶ ಹೊರಹಾಕಿದರು.
ಆರು ತಿಂಗಳಾದರೂ ರಾಜ್ಯ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡದೆ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಕೊಡದಿದ್ದರೂ ಕಾಂಗ್ರೆಸ್ ಕಾರ್ಯಕರ್ತರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಾಗುತ್ತಿದೆ.
ಕಾರ್ಯಕರ್ತರಿಗೆ ಬಿರಿಯಾನಿ ತಿನ್ನಿಸಲು ಇವರ ಬಳಿ ಹಣವಿದೆ, ರೈತರಿಗೆ ನೀಡಲು ಹಣ ಇಲ್ಲವೇ? ಹಾಗಿದ್ದರೆ ಕುರ್ಚಿ ಖಾಲಿ ಮಾಡಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಅಲ್ಪಸಂಖ್ಯಾತ ಇಲಾಖೆ ಸಚಿವರು ಮನವಿ ಕೊಟ್ಟ ಮೂರು ದಿನಗಳಲ್ಲಿ ಮುಸ್ಲಿಮರಿಗೆ 1 ಸಾವಿರ ಕೋಟಿ ರು. ಅನುದಾನವನ್ನು ಕಾಲನಿ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ ಎಂದು ಕಿಡಿಕಾರಿದರು.
ಬರಗಾಲ ಬಂದು ಆರು ತಿಂಗಳಾದರೂ ರೈತರಿಗೆ ಪರಿಹಾರ ನೀಡಿಲ್ಲ, ಬೆಳಗಾವಿ ಅಧಿವೇಶನ ಕಳೆದು ತಿಂಗಳಾದರೂ ಪರಿಹಾರ ಕೊಟ್ಟಿಲ್ಲ. ರೈತರು ಚಾತಕ ಪಕ್ಷಿಗಳಂತೆ ಪರಿಹಾರಕ್ಕೆ ಕಾಯುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರದಿಂದ ರೈತರನ್ನು ಕಡೆಗಣಿಸಿ ಟಿಪ್ಪು ಸುಲ್ತಾನ್‌ನನ್ನು ವೈಭವೀಕರಿಸುವ ಮೂಲಕ ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ನಡೆಯುತ್ತಿದೆ.
ರೈತರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಿಂಚತ್ತೂ ಕಾಳಜಿ ಇಲ್ಲ. 19 ಕೆಜಿ ಅಕ್ಕಿ ಕೊಡುವ ಭರವಸೆ ನೀಡಿ, ಇದೀಗ ಕೇಂದ್ರ ಸರ್ಕಾರ ನೀಡುತ್ತಿರುವ 5 ಅಕ್ಕಿಯನ್ನೇ ಸರಿಯಾಗಿ ವಿತರಿಸುತ್ತಿಲ್ಲ.
ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿಗಳು ಸಂಪೂರ್ಣವಾಗಿ ವಿಫಲವಾಗಿವೆ. ಸಾರಿಗೆ, ಬೆಸ್ಕಾಂ ಸಂಸ್ಥೆಗಳಿಗೆ ಗ್ಯಾರಂಟಿ ಯೋಜನೆಗಳ ಹಣ ನೀಡದೆ ಸರ್ಕಾರವು ದಿವಾಳಿಯಾಗಿದೆ ಎಂದು ಟೀಕಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಹಲವು ಬಿಜೆಪಿ ಮುಖಂಡರು, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.