ರಾಜ್ಯ ಬಜೆಟ್‌: ಹೊಸದೇನೂ ಇಲ್ಲ; ಎಲ್ಲಾ ಹಳೇ ಘೋಷಣೆಗಳೇ..!

| Published : Feb 17 2024, 01:20 AM IST

ರಾಜ್ಯ ಬಜೆಟ್‌: ಹೊಸದೇನೂ ಇಲ್ಲ; ಎಲ್ಲಾ ಹಳೇ ಘೋಷಣೆಗಳೇ..!
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಹೊಸದಾಗಿ ಅಧಿಕಾರಕ್ಕೆ ಬಂದ ಬಿರುಸಲ್ಲಿ ₹೫೦ ಕೋಟಿ ಹಣ ಕೊಟ್ಟಿದ್ದೆಷ್ಟು ಅಷ್ಟೇ. ಈ ಬಜೆಟ್‌ನಲ್ಲಿ ಕಾರ್ಖಾನೆಗೆ ಹಣವನ್ನೇ ಕೊಟ್ಟಿಲ್ಲ. ಉಪ ಉತ್ಪನ್ನಗಳ ಘಟಕಗಳ ಸ್ಥಾಪನೆಗೆ ಆಸಕ್ತಿ ತೋರಿಲ್ಲ. ಕಾರ್ಖಾನೆಯಲ್ಲಿ ಒ ಅಂಡ್ ಎಂ ಕಾರ್ಯಾಚರಣೆ ಮುಂದುವರೆಯಲಿದೆಯೇ ಎನ್ನುವುದನ್ನೂ ಸರ್ಕಾರ ಖಚಿತಪಡಿಸದೆ ಮೌನಕ್ಕೆ ಶರಣಾಗಿದೆ.

ಮಂಡ್ಯ ಮಂಜುನಾಥಕನ್ನಡಪ್ರಭ ವಾರ್ತೆ ಮಂಡ್ಯ

ಬಜೆಟ್‌ನಲ್ಲಿ ಜಿಲ್ಲೆಗೆ ಯಾವುದೇ ಹೊಸ ಘೋಷಣೆಗಳಿಲ್ಲ. ಎಲ್ಲಾ ಹಳೆಯ ಘೋಷಣೆಗಳೇ...! ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ, ಕೆಆರ್‌ಎಸ್ ಬೃಂದಾವನವನ್ನು ವಿಶ್ವ ದರ್ಜೆಗೇರಿಸುವುದು, ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಇವೆಲ್ಲವೂ ಪ್ರತಿ ಬಾರಿ ಬಜೆಟ್‌ನಲ್ಲಿ ಪುನರಾವರ್ತನೆಯಾಗುತ್ತಲೇ ಇವೆ. ಜಿಲ್ಲೆಗೆ ಮಹತ್ವದ್ದಾದ ಹೊಸ ಕೊಡುಗೆಗಳೇನಾದರೂ ಇದೆಯೇ ಎಂದು ಇಡೀ ಬಜೆಟ್ ಪುಸ್ತಕ ಜಾಲಾಡಿದರೆ ಎಲ್ಲಿಯೂ ಸಿಗುವುದೇ ಇಲ್ಲ.

೨೦೧೮ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದ ಹೊಸ ಸಕ್ಕರೆ ಕಾರ್ಖಾನೆ ಪ್ರಸ್ತಾಪ ಬಜೆಟ್ ಪುಸ್ತಕಕ್ಕಷ್ಟೇ ಸೀಮಿತವಾಗಿದೆ. ಕಾರ್ಖಾನೆ ಸ್ಥಾಪಿಸುವುದಿರಲಿ ಇಂತಿಷ್ಟು ಹಣ ನಿಗದಿಪಡಿಸಿರುವುದನ್ನೂ ಇದುವರೆಗೆ ತೋರಿಸಿಲ್ಲ. ಆರು ವರ್ಷಗಳಿಂದ ಮೂರು ಸರ್ಕಾರಗಳು ಬದಲಾದರೂ ಹೊಸ ಸಕ್ಕರೆ ಕಾರ್ಖಾನೆ ಎಂಬ ತುಪ್ಪವನ್ನು ಮಂಡ್ಯ ಜನರ ಮೂಗಿಗೆ ಸವರಿ ಕೂರಿಸಿವೆಯಷ್ಟೇ.

ಸರ್ಕಾರ ಹೊಸದಾಗಿ ಅಧಿಕಾರಕ್ಕೆ ಬಂದ ಬಿರುಸಲ್ಲಿ ₹೫೦ ಕೋಟಿ ಹಣ ಕೊಟ್ಟಿದ್ದೆಷ್ಟು ಅಷ್ಟೇ. ಈ ಬಜೆಟ್‌ನಲ್ಲಿ ಕಾರ್ಖಾನೆಗೆ ಹಣವನ್ನೇ ಕೊಟ್ಟಿಲ್ಲ. ಉಪ ಉತ್ಪನ್ನಗಳ ಘಟಕಗಳ ಸ್ಥಾಪನೆಗೆ ಆಸಕ್ತಿ ತೋರಿಲ್ಲ. ಕಾರ್ಖಾನೆಯಲ್ಲಿ ಒ ಅಂಡ್ ಎಂ ಕಾರ್ಯಾಚರಣೆ ಮುಂದುವರೆಯಲಿದೆಯೇ ಎನ್ನುವುದನ್ನೂ ಸರ್ಕಾರ ಖಚಿತಪಡಿಸದೆ ಮೌನಕ್ಕೆ ಶರಣಾಗಿದೆ.

ಕೆಆರ್‌ಎಸ್ ಬೃಂದಾವನವನ್ನು ವಿಶ್ವ ದರ್ಜೆಗೇರಿಸುವ ಪ್ರಸ್ತಾವವೂ ಈಗಿನದ್ದೇನಲ್ಲ. ಬಹಳ ವರ್ಷಗಳಿಂದಲೂ ಈ ಘೋಷಣೆ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಲೇ ಇದೆ. ಬಿಜೆಪಿ ಸರ್ಕಾರದ ಅವಧಿಯಲ್ಲೇ ₹೩೦೦ ಕೋಟಿ ವೆಚ್ಚದಲ್ಲಿ ನಾಲೆಗಳ ಆಧುನೀಕರಣ ಕೈಗೊಳ್ಳಲಾಗಿತ್ತು. ಇದೀಗ ಮಳವಳ್ಳಿ ತಾಲೂಕಿನ ಮಾಧವ ಮಂತ್ರಿ, ಮದ್ದೂರು ತಾಲೂಕಿನ ಕೆಮ್ಮಣ್ಣು ನಾಲಾ ಆಧುನೀಕರಣ, ವಿಶ್ವೇಶ್ವರಯ್ಯ ನಾಲಾ ಜಾಲದ ಹೆಬ್ಬಕವಾಡಿ, ನಿಡಘಟ್ಟ ನಾಲೆಗಳ ಆಧುನೀಕರಣ ಮಾಡಲಾಗುವುದು ಎಂದು ಹೇಳಿದೆ. ಈ ನಾಲೆಗಳ ಆಧುನೀಕರಣಕ್ಕೆ ಎಷ್ಟು ಕೋಟಿ ರು. ಹಣ ಮೀಸಲಿರಿಸಲಾಗಿದೆ ಎನ್ನುವುದನ್ನು ನಿರ್ದಿಷ್ಟವಾಗಿ ಹೇಳಿಲ್ಲ.

ಮಂಡ್ಯದ ವಿ.ಸಿ. ಫಾರಂನಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತು ತಜ್ಞರ ಸಮಿತಿ ರಚಿಸಲಾಗುವುದು ಎಂಬ ಭರವಸೆ ಕೊಟ್ಟಿದೆಯಷ್ಟೇ. ರಾಜ್ಯದ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಸಕ್ಕರೆ ಕಾರ್ಖಾನೆಗಳ ಬಳಿ ಎಪಿಎಂಸಿ ವತಿಯಿಂದ ವೇ-ಬ್ರಿಡ್ಜ್ ಸ್ಥಾಪಿಸುವುದಾಗಿ ಹೇಳಿದೆ. ರಾಜ್ಯದಲ್ಲಿ ತೀವ್ರ ಅಸ್ವಸ್ತತೆಯಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಪ್ರಾಣ ಉಳಿಸುವ ಉದ್ದೇಶದಿಂದ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್‌ಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ.

ಇವುಗಳನ್ನು ಹೊರತು ಪಡಿಸಿದಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬೈಪಾಸ್ ರಸ್ತೆ, ನಗರಾಭಿವೃದ್ಧಿಗೆ ವಿಶೇಷ ಅನುದಾನ, ಹೊಸ ಕೈಗಾರಿಕೆಗಳ ಸ್ಥಾಪನೆ, ಶೀತಲೀಕರಣ ಕೇಂದ್ರಗಳು ಸೇರಿದಂತೆ ಜಿಲ್ಲೆಯ ಜನರ ಹಲವಾರು ನಿರೀಕ್ಷೆಗಳಿಗೆ ಬಜೆಟ್‌ನಲ್ಲಿ ಕಿಂಚಿತ್ತೂ ಸ್ಪಂದಿಸುವ, ಹಣ ಘೋಷಿಸುವ ಇಚ್ಛಾಶಕ್ತಿ, ಬದ್ಧತೆಯನ್ನೇ ತೋರ್ಪಡಿಸಿಲ್ಲ. ಬಜೆಟ್‌ನಲ್ಲಿ ಮಂಡ್ಯ ಜಿಲ್ಲೆಗೆ ನಿರಾಸೆ ಕಟ್ಟಿಟ್ಟ ಬುತ್ತಿ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಜನಸ್ನೇಹಿ, ರೈತರ ಪರ, ಮಹಿಳಾ ಪರ ಬಜೆಟ್ ಆಗಿದೆ. ಇದೊಂದು ಸಮತೋಲಿತ ಮತ್ತು ದೂರದೃಷ್ಟಿ ಚಿಂತನೆಗಳ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಎಂಬ ಬಜೆಟ್. ಸಮ ಸಮಾಜದ ನಿರ್ಮಾಣದ ಪರಿಕಲ್ಪನೆಯೊಂದಿಗೆ ಎಲ್ಲಾ ವರ್ಗಗಳ ಜನರಿಗೂ, ಎಲ್ಲಾ ಕ್ಷೇತ್ರಗಳಿಗೂ ನ್ಯಾಯ ಒದಗಿಸಲಾಗಿದೆ. ತೆರಿಗೆ ಹೊರೆ ಹೆಚ್ಚಿಸದೆ ಅಧಿಕ ನೆರವುಗಳ ನೀಡಿದ ಬಜೆಟ್. ರೈತರು, ರೈತ ಮಹಿಳೆಯರ ಸಬಲೀಕರಣ, ಸುಸ್ಥಿರ, ಸಮಗ್ರ ಕೃಷಿ ಅಭಿವೃದ್ಧಿಗೆ ದೂರಗಾಮಿ ಯೋಜನೆಗಳ ಜಾರಿ ಅಭಿನಂದನೀಯ.

- ಎನ್. ಚಲುವರಾಯಸ್ವಾಮಿ, ಕೃಷಿ ಸಚಿವರು

ಜಿಲ್ಲೆಯ ಪಾಲಿಗೆ ಬೋಗಸ್ ಬಜೆಟ್ ಇದು. ಯಾವುದೇ ಯೋಜನೆಯಲ್ಲೂ ಸ್ಪಷ್ಟತೆ ಇಲ್ಲ. ಹಣವನ್ನು ನಿಗದಿಪಡಿಸಿಲ್ಲ. ಇಂತಹ ಘೋಷಣೆಗಳು ನಿರರ್ಥಕ. ನಾವು ಅಧಿಕಾರಕ್ಕೆ ಬಂದು ಅಭಿವೃದ್ಧಿಯ ಚಿತ್ರಣವನ್ನೇ ಬದಲಾಯಿಸುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದವರ ನಿಜ ಬಣ್ಣ ಈಗ ಬಯಲಾಗಿದೆ. ಹಳೆಯ ಘೋಷಣೆಗಳಿಗೆ ಬಣ್ಣ ಬಳಿದಿದ್ದಾರೆ. ಜಿಲ್ಲೆಗೆ ದೂರದೃಷ್ಟಿ ಯೋಜನೆಗಳನ್ನು ರೂಪಿಸುವಲ್ಲಿ, ಶಾಶ್ವತ ಕೊಡುಗೆಗಳನ್ನು ನೀಡುವಲ್ಲಿ ಸರ್ಕಾರ ವೈಫಲ್ಯ ಸಾಧಿಸಿದೆ.

- ಸಿ.ಎಸ್. ಪುಟ್ಟರಾಜು, ಮಾಜಿ ಸಚಿವರು

ಅತ್ಯಂತ ನಿರಾಸದಾಯಕ ಬಜೆಟ್ ಆಗಿದೆ. ರೈತರು, ಯುವಕರು, ವಿದ್ಯಾರ್ಥಿಗಳ ಬಗ್ಗೆ ಕಿಂಚಿತ್ತು ಯೋಚನೆ ಮಾಡಿಲ್ಲ. ಇದರಿಂದ ಯಾವುದೇ ಯೋಜನೆ ಇಲ್ಲದಂತಾಗಿದೆ. ಬರೀ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ ತಜ್ಞರು ಎಂದು ಹೇಳಿಕೊಳ್ಳುತ್ತಿದ್ದರು. ಅದು ಹುಸಿಯಾಗಿದೆ. ಸರ್ಕಾರದ ಯಾವುದೇ ದೂರದೃಷ್ಟಿ ಇಲ್ಲದ ಬಜೆಟ್ ಆಗಿದೆ. ಬಜೆಟ್‌ನಲ್ಲಿ ಮಹತ್ವದ ಯೋಜನೆಗಳನ್ನು ಜಿಲ್ಲೆಗೆ ತರುವಲ್ಲಿ ಕಾಂಗ್ರೆಸ್ ಶಾಸಕರ ವೈಫಲ್ಯ ಎದ್ದುಕಾಣುತ್ತಿದೆ.

-ಡಾ.ಎನ್.ಎಸ್.ಇಂದ್ರೇಶ್, ಜಿಲ್ಲಾಧ್ಯಕ್ಷರು, ಬಿಜೆಪಿ ಘಟಕ

ಸಮಗ್ರ ಕರ್ನಾಟಕದ ಅಭ್ಯುದಯವನ್ನು ಗಮನದಲ್ಲಿಟ್ಟುಕೊಂಡು ತೆರಿಗೆ ಹೆಚ್ಚಿಸದೆ, ಎಲ್ಲಾ ಇಲಾಖೆಗಳಿಗೂ ಅನುದಾನ ಒದಗಿಸುವ ಮೂಲಕ ಆರ್ಥಿಕ ಶಿಸ್ತು ಕಾಯ್ದುಕೊಂಡು ಮಂಡಿಸಿರುವ ಸಮತೋಲನ ಬಜೆಟ್ ಇದು. ಮಂಡ್ಯ ಜಿಲ್ಲೆಗೆ ಹೊಸ ಸಕ್ಕರೆ ಕಾರ್ಖಾನೆ, ವಿ.ಸಿ.ಫಾರ್ಮ್‌ನಲ್ಲಿ ಕೃಷಿ ವಿವಿ ಸ್ಥಾಪನೆಗೆ ಸಮಿತಿ ರಚನೆ, ವಿಶ್ವೇಶ್ವರಯ್ಯ ನಾಲೆಗಳ ಅಭಿವೃದ್ಧಿ, ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದು, ಸಕ್ಕರೆ ನಾಡಿನ ಜನರಿಗೆ ಬಜೆಟ್ ಸಿಹಿ ಆಗಿದೆ.

-ಮಧು ಜಿ.ಮಾದೇಗೌಡ, ಶಾಸಕರು, (ದಕ್ಷಿಣ ಪದವೀಧರ ಕ್ಷೇತ್ರ)

ಬಜೆಟ್‌ನಲ್ಲಿ ಜಿಲ್ಲೆಯ ರೈತರ ಹಿತವನ್ನು ಕಾಪಾಡಿದೆ. ಮೈಷುಗರ್ ಕಾರ್ಖಾನೆ ಅಭಿವೃದ್ಧಿ, ನಾಲೆಗಳ ಆಧುನೀಕರಣಕ್ಕೆ ಒತ್ತು, ಕೃಷ್ಣರಾಜಸಾಗರ ಬೃಂದಾವನವನ್ನು ವಿಶ್ವದರ್ಜೆಯ ಪ್ರವಾಸಿ ತಾಣವನ್ನಾಗಿ ಮಾಡುವುದು. ಮಂಡ್ಯದ ವಿಸಿ ಫಾರಂನಲ್ಲಿ ಕೃಷಿ ವಿಶ್ವವಿದ್ಯಾನಿಲಯವನ್ನು ತೆರೆಯುವುದು ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸಿಎಂ ಸಿದ್ದರಾಮಯ್ಯನವರು ಕೊಡುಗೆ ನೀಡಿದ್ದಾರೆ.

- ದಿನೇಶ್ ಗೂಳಿಗೌಡ, ವಿಧಾನಪರಿಷತ್ ಸದಸ್ಯರು

ಸಿಎಂ ಸಿದ್ದರಾಮಯ್ಯ ಒಂದು ಸಮುದಾಯವನ್ನು ಓಲೈಸಿಕೊಳ್ಳಲು ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಹೆಚ್ಚಿನ ಅನುದಾನ ಹಾಗೂ ಕಾರ್ಯಕ್ರಮ ಘೋಷಿಸಿದೆ. ಇದು ನಿಜಕ್ಕೂ ದುರಂತ. ಇನ್ನು ಹೊಸದಾಗಿ ಮೈಷುಗರ್ ಕಾರ್ಖಾನೆ ಪ್ರಾರಂಭಿಸುವ ಸಂಬಂಧ ಅನುದಾನವನ್ನೇ ನೀಡಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಕೆಆರ್‌ಎಸ್ ಬೃಂದಾವನ ಉನ್ನತೀಕರಿಸಲು ಘೋಷಣೆ ಮಾಡಿದೆ. ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎನ್ನುವುದನ್ನು ಅವರೇ ಹೇಳಿಕೊಂಡಂತಾಗಿದೆ.

- ಡಾ. ಸಿದ್ದರಾಮಯ್ಯ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ

ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಬಜೆಟ್‌ನಲ್ಲಿ ಮಂಡ್ಯ ಮೂಲೆಗುಂಪಾಗುತ್ತಲೇ ಇದೆ. ಇದು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳಿಗಿರುವ ನಿರಾಸಕ್ತಿಯೋ, ಸರ್ಕಾರಗಳ ನಿರ್ಲಕ್ಷ್ಯವೋ ಗೊತ್ತಾಗುತ್ತಿಲ್ಲ. ಉದ್ಯೋಗ ಸೃಷ್ಟಿಗೆ ಪೂರಕವಾಗಿ ಉದ್ಯಮಗಳು, ಕೈಗಾರಿಕೆಗಳ ಘೋಷಣೆ ಇಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಡ್ಯಕ್ಕೆ ಕನಸಾಗೇ ಉಳಿದಿದೆ. ನಗರಾಭಿವೃದ್ಧಿಗೆ ಪೂರಕ ಯೋಜನೆಗಳಿಲ್ಲ. ಮಂಡ್ಯವನ್ನು ದೊಡ್ಡ ಹಳ್ಳಿಯಾಗಿ ಉಳಿಸುವುದು ಸರ್ಕಾರಗಳಿಂದ ಮುಂದುವರೆದಿದೆ.

- ಡಾ. ಅನಿಲ್ ಆನಂದ್, ನರರೋಗ ತಜ್ಞರು, ಮಂಡ್ಯ

ಕಾಂಗ್ರೆಸ್ ಸರ್ಕಾರ ಘೋಷಿಸಿರುವ ೫ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ರಾಜ್ಯದ ಖಜಾನೆಯಲ್ಲಿ ಹಣವೇ ಇಲ್ಲವಾಗಿದ್ದು, ಇದಕ್ಕಾಗಿ ಸರ್ಕಾರ ಸಾಲ ಮಾಡಲು ನಿರ್ಧರಿಸುವಾಗ ಇನ್ನು ಹೊಸ ಯೋಜನೆಗಳಿಗೆ ಹಣವನ್ನು ಎಲ್ಲಿ ನೀಡುತ್ತಾರೆ. ಅಲ್ಲದೆ, ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಲು ಹಣವೇ ಇಲ್ಲವಾಗಿದೆ. ಮಂಡ್ಯ ಜಿಲ್ಲೆಯ ಮತದಾರರು ಬದಲಾವಣೆ ಇರಲಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಬಹಳ ನಿರೀಕ್ಷೆಗಳನ್ನಿಟ್ಟಿದ್ದರು. ಆದರೆ, ಆ ನಿರೀಕ್ಷೆಗಳೆಲ್ಲವನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರಾಸೆಗೊಳಿಸಿದ್ದಾರೆ.

- ಸಿ.ಪಿ. ಉಮೇಶ್, ಸಂಚಾಲಕರು, ಮಂಡ್ಯ ಜಿಲ್ಲಾ ಲೋಕಸಭಾ ಕ್ಷೇತ್ರ