ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದ್ದರೂ ರಾಜ್ಯ ಕಾಂಗ್ರೆಸ್‌ ಸರ್ಕಾರ ಬರ ಪರಿಹಾರ ಘೋಷಿಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧಕ್ಷ ಬಿ.ವೈ. ವಿಜಯೀಂದ್ರ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದ್ದರೂ ರಾಜ್ಯ ಕಾಂಗ್ರೆಸ್‌ ಸರ್ಕಾರ ಬರ ಪರಿಹಾರ ಘೋಷಿಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧಕ್ಷ ಬಿ.ವೈ. ವಿಜಯೀಂದ್ರ ಆರೋಪಿಸಿದರು. ನಗರದ ಬಸವ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಸೇವಾ ಸಂಕಲ್ಪ ಬೂತ್‌ ಮಟ್ಟದ ವಿಜಯ ಸಂಕಲ್ಪ ಯಾತ್ರೆ ಉದ್ದೇಶಿಸಿ ಮಾತನಾಡಿದರು. ಜನರು, ರೈತರು ಮಹಿಳಾ ವಿರೋಧಿ ಸರ್ಕಾರ ಆಂತರಿಕ ಕಚ್ಚಾಟ, ಪಂಚ ಗ್ಯಾರಂಟಿ ನೆಪದಲ್ಲಿ ಅಭಿವೃದ್ಧಿ ಶೂನ್ಯದ ಜತೆಗೆ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ. ಅಧಿಕಾರ ಶಾಶ್ವತವಲ್ಲ, ರಾಜ್ಯದ ಜನರು ಕಾಂಗ್ರೆಸ್‌ ದುರಾಡಳಿತ ನೋಡುತ್ತಿದ್ದು, ಮುಂಬರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ ಆಡಳಿತದಲ್ಲಿ ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ, ವೈದ್ಯರಿಲ್ಲ, ಶಾಲೆಗಳಲ್ಲಿ ಶಿಕ್ಷಕರಿಲ್ಲ, ಬಸ್‌ಗಳಿಗೆ ಡಿಸೇಲ್‌ ಖರೀದಿಸುವ ಯೋಗ್ಯತೆ ಇಲ್ಲ, ವಿದ್ಯುತ್‌ ಅಭಾವವಾಗಿದೆ. ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆ ವಿದ್ಯುತ್‌, ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ, ₹5 ಲಕ್ಷದ ವರೆಗಿನ ಬೆಳೆಸಾಲ ಮನ್ನಾ ಮಾಡಲು ಬಜೆಪಿ ವಿಶೇಷ ಅಧಿವೇಶನದಲ್ಲಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. 3500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಸರ್ಕಾರ ತಲೆ ಕಡಿಸಿಕೊಂಡಿಲ್ಲ ಎಂದು ದೂರಿದರು.

ಯುಕೆಪಿಗೆ ಅನುದಾನ ಇಲ್ಲ;ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿವರ್ಷ ₹10 ಸಾವಿರ ಕೋಟಿ ಅನುದಾನ ಬಿಡುಗಡೆ ಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ನುಡಿದಂತೆ ನಡೆಯುತ್ತೇವೆ ಎಂದು ಸುಳ್ಳು ಜಾಹೀರಾತು ನೀಡಿ ವಂಚನೆಯಲ್ಲಿ ತೊಡಗಿದೆ. ಅಬಕಾರಿ ಇಲಾಖೆಗೆ ತಿಂಗಳಿಗೆ ₹45 ಸಾವಿರ ಕೋಟಿ ಮದ್ಯ ಮಾರಲು ಟಾರ್ಗೆಟ್‌ ನೀಡಿರುವ ಸರ್ಕಾರ ರಾಜ್ಯವನ್ನು ಕುಡುಕರ ರಾಜ್ಯವಾಗಿಸಲು ಹೊರಟಿದೆ. ಹೈನುಗಾರಿಕೆ ರೈತರಿಗೆ ಪ್ರತಿ ಲೀಟರ್‌ ಹಾಲಿಗೆ ₹5 ಸಹಾಯ ಧನ ನೀಡಲು ಇವರಿಗೆ ಮನಸ್ಸಿಲ್ಲ ಎಂದು ದೂರಿದರು.

ರಾಹುಲ್‌ ಗಾಂಧಿ ಪ್ರಧಾನಿ ಕನಸು;ರಾಹುಲ್‌ ಗಾಂಧಿ ಪ್ರಧಾನಿ ಮಾಡಲು ಚುನಾವಣೆ ಆಯೋಗದ ವಿರುದ್ಧ ಸುಳ್ಳು ಆರೋಪ ಮಾಡಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಸಂವಿಧಾನಿಕ ಸಂಸ್ಥೆಗಳ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ, ತಿಂಗಳಲ್ಲಿ ಹಲವು ಬಾರಿ ಸಿಎಂ ಡಿಕೆಶಿ ಅವರು ದೆಹಲಿಗೆ ಹೋದರೂ ರಾಜ್ಯದ ಜನತೆಗೆ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಅನುದಾನ ನೀಡಿಲ್ಲ. 3.5 ವರ್ಷದಲ್ಲಿ ಒಂದೇ ಒಂದು ಮನೆ ನೀಡಿಲ್ಲ, ಬಿಪಿಎಲ್‌ ಕಾರ್ಡ್‌ ನೀಡುತ್ತಿಲ್ಲ. ಸ್ವತಂತ್ರ್ಯ ಹೋರಾಟಗಾರರ ಪಿಂಚಣಿ ನೀಡಲು ಸರ್ಕಾರದ ಬಳಿ ಹಣವಿಲ್ಲ. ಸರ್ಕಾರಿ ನೇಮಕಾತಿಗಳು ನಡೆಯುತ್ತಿಲ್ಲ, ಇದು ಕಾಂಗ್ರೆಸ್‌ನ ಆಡಳಿತ, ಸಾಧನೆ ಎಂದು ದೂರಿದ ಅವರು, ದಲತರ ಹತ್ಯೆ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಗೃಹ ಸಚಿವ ಪ್ರೀಯಾಂಕ್‌ ಖರ್ಗೆ, ಕಾನೂನು ಸೂವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದರು.

ಚಿತ್ರದುರ್ಗ ಲೋಕಸಭಾ ಸದಸ್ಯ ಗೋವಿಂದ ಕಾರಜೋಳ. ಶಾಸಕ ಜಗದೀಶ ಗುಡಗುಂಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಮಾತನಾಡಿದರು. ಸಂಸದ ಪಿ.ಸಿ. ಗದ್ದಿಗೌಡರ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಪಿ.ರಾಜೀವ, ಜಿ.ಎಸ್‌.ನ್ಯಾಮಗೌಡ, ಸಂಜಯ ಪಾಟೀಲ, ದೊಡ್ಡನಗೌಡ ಪಾಟೀಲ, ಪರಿಷತ್‌ ಸದಸ್ಯ ಹಣಮಂತ ನಿರಾಣಿ ಇತರರು ವೇದಿಕೆಯಲ್ಲಿದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು.

ನಿರಾಣಿ ಆಹ್ವಾನಿಸದ್ದಕ್ಕೆ ಅಸಮಾಧಾನ;ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಜಿ ಸಚಿವ ಮುರುಗೇಶ ನಿರಾಣಿಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಕೆಲ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಪಕ್ಷದ ಹಿರಿಯರು, ಕಾರ್ಯಕರ್ತರನ್ನು ಕಡೆಗಣಿಸಬಾರದು. ಸೇವಾಸಂಕಲ್ಪ ಯಾತ್ರೆ ಕುರಿತು ಸರಿಯಾದ ಮಾಹಿತಿ ಇರಲಿಲ್ಲ. ಪಕ್ಷದ ವಿವಿಧ ಜವಾಬ್ದಾರಿಗಳನ್ನು ಹೊತ್ತವರು ಎಲ್ಲ ಕಾರ್ಯಕರ್ತರು, ಹಿರಿಯರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು. ಜಿಪಂ, ತಾಪಂ ಹಾಗೂ 2028ರ ಚುನಾವಣೆ ಗಮನದಲ್ಲಿಟ್ಟುಕೊಂಡು ಇಂದಿನಿಂದಲೇ ಕಾರ್ಯ ಪ್ರವೃತ್ತರಾಗುವಂತೆ ಸಲಹೆ ನೀಡಿದರು. ಬಿ.ವೈ.ವಿಜಯೀಂದ್ರ ಮಾತನಾಡಿ, ಯಾರೋಬ್ಬರ ಮೇಲೆ ಆರೋಪ ಪ್ರತ್ಯಾರೋಪ ಮಾಡುವುದು ಬೇಡ. ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಸಂಘಟನೆಗೆ ಕಾರ್ಯನಿರ್ವಹಿಸಬೇಕು. ಕಾರ್ಯಕರ್ತರು ಪಕ್ಷದ ಆಸ್ತಿ ಎಂಬುದನ್ನು ಮರೆಯಬಾರದು ಎಂದು ಸಮಜಾಯಿಸಿ ನೀಡಿದರು.