ಲಕ್ಷ್ಮೇಶ್ವರ: ರೈತರ ಮತ್ತು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕಾದ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಾ, ಕೃಷಿಕರನ್ನು ಮತ್ತಷ್ಟು ಅಧೋಗತಿಗೆ ತಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳು ಕೂಡಲೇ ಎಚ್ಚೆತ್ತು ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಆಗ್ರಹಿಸಿದರು.ಪಟ್ಟಣದಲ್ಲಿ ಸೋಮವಾರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಹಾಗೂ ಶಿರಹಟ್ಟಿ ಬಿಜೆಪಿ ಮಂಡಳ, ಲಕ್ಷ್ಮೇಶ್ವರ ನಗರ ಘಟಕ, ರೈತ ಘಟಕದ ವತಿಯಿಂದ ರೈತರ ವಿವಿಧ ಬೇಡಿಕೆಗೆ ಆಗ್ರಹಿಸಿ ಸಾವಿರಾರು ರೈತರ ಬೃಹತ್ ಪ್ರತಿಭಟನಾ ರ‍್ಯಾಲಿಯಲ್ಲಿ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿ ಮಾತನಾಡಿದರು.ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಂದಿದ್ದ ಅನೇಕ ರೈತಪರ ಯೋಜನೆಗಳನ್ನು ಅಧಿಕಾರಕ್ಕೆ ಬರುತ್ತಿದ್ದಂತೆಯೆ ರದ್ದುಗೊಳಿಸಿ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕೇಂದ್ರ ಸರ್ಕಾರ ಬೆಂಬಲ ಬೆಲೆಯನ್ನು ನಿಗದಿ ಮಾಡಿದೆ. ಆದರೆ ಇದಕ್ಕೆ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದ ಅವರು, ಹಲವು ವಿಚಾರಗಳಲ್ಲಿ ರಾಜ್ಯ ಸರ್ಕಾರದಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕಿಡಿಕಾರಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ, ಕಿಸಾನ್ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶಶಿ ಕುಲಕರ್ಣಿ, ಬಸವರಾಜ ಯಂಕಂಚಿ, ಶಿರಹಟ್ಟಿ ಮಂಡಳ ಬಿಜೆಪಿ ಅಧ್ಯಕ್ಷ ಸುನೀಲ್ ಮಹಾಂತಶೆಟ್ಟರ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಸವರಾಜ ಇಟಗಿ ಅವರು ಮಾತನಾಡಿದರು.ಸೋಮವಾರ ಬೆಳಗ್ಗೆ ಪಟ್ಟಣದ ಪಂಪ ವೃತ್ತದಲ್ಲಿ ಜಮಾಯಿಸಿದ ಸಾವಿರಾರು ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಾರ್ಯಾಲಯ ತಲುಪಿ, ತಹಸೀಲ್ದಾರ್ ಧನಂಜಯ ಎಂ. ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಪಲ್ಲೇದ, ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ಥಾವರೆಪ್ಪ ಲಮಾಣಿ, ಜಾನು ಲಮಾಣಿ, ನಿಂಗಪ್ಪ ಬನ್ನಿ, ಡಿ.ವೈ. ಹುನಗುಂದ, ಪರಶುರಾಮ ಇಮ್ಮಡಿ, ವಿಜಯಕುಮಾರ ಹತ್ತಿಕಾಳ, ಪರಮೇಶ ಹತ್ತಾಳ, ಕೃಷ್ಣ ಬಿದರಳ್ಳಿ, ಅಶೋಕ ಹರಿಜನ, ಅಶೋಕ ಶಿರಹಟ್ಟಿ, ಭೀಮಣ್ಣ ಯಂಗಾಡಿ, ಶಿವಣ್ಣ ಮಾದರ, ಹನುಮಂತ ಜಾಲಿಮರದ, ಜಗದೀಶಗೌಡ ಪಾಟೀಲ, ಮಂಜನಗೌಡ ಕೆಂಚನಗೌಡ್ರ, ನೀಲಪ್ಪ ಹತ್ತಿ, ಶಿವಯೋಗಿ ಅಂಕಲಕೋಟಿ, ಸೋಮೇಶ ಉಪನಾಳ, ಶಿವಣ್ಣ ಲಮಾಣಿ, ಪಾಂಡು ಲಮಾಣಿ, ಅನಿಲ ಮುಳಗುಂದ, ಬಸವರಾಜ ಕಲ್ಲೂರ, ಪವಿತ್ರ ಕಲಬುರ್ಗಿ ರಾಧಾ ಬಾರಕೇರ, ವೀಣಾ ಬೂದಿಹಾಳ ಸೋಮರೆಡ್ಡಿ ಮುದ್ದಾಬಳ್ಳಿ, ಕುಮಾರ ಹಿರೇಮಠ, ಶಕ್ತಿ ಕತ್ತಿ, ಸುರೇಶ ಮಾಂಡ್ರ ಸೇರಿದಂತೆ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.