ಗ್ಯಾರಂಟಿ ವಿರೋಧಿಸುವ ಮೂಲಕ ಜನರಿಗೆ ಅವಮಾನ

| Published : Apr 22 2024, 02:00 AM IST

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗ್ಯಾರಂಟಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಗ್ಯಾರಂಟಿ ಕುರಿತು ವ್ಯತಿರಿಕ್ತ ಹೇಳಿಕೆ ಕೊಡುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಪ್ರತಿನಿತ್ಯ 35 ಲಕ್ಷ ಮಹಿಳೆಯರು ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸುವ ಮೂಲಕ ಶಕ್ತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ.

----ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ಮೂಲಕ ಬಿಜೆಪಿ, ಜೆಡಿಎಸ್ ನಾಯಕರು ರಾಜ್ಯದ 6.50 ಕೋಟಿ ಜನರಿಗೆ ಅವಮಾನಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಕಿಡಿಕಾರಿದರು.

ಮೈಸೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಾಯಕರು ಗ್ಯಾರಂಟಿ ಯೋಜನೆಗಳನ್ನು ಕುರಿತು ವಿವಿಧ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದು ಈ ನಾಡಿನ ಕೋಟ್ಯಂತರ ಮಹಿಳೆಯರಿಗೆ ಮಾಡಿದ ಅವಮಾನವಾಗಿದೆ ಎಂದು ದೂರಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗ್ಯಾರಂಟಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಗ್ಯಾರಂಟಿ ಕುರಿತು ವ್ಯತಿರಿಕ್ತ ಹೇಳಿಕೆ ಕೊಡುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಪ್ರತಿನಿತ್ಯ 35 ಲಕ್ಷ ಮಹಿಳೆಯರು ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸುವ ಮೂಲಕ ಶಕ್ತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಸುಮಾರು 1.21 ಕೋಟಿಗೂ ಅಧಿಕ ಮಹಿಳೆಯರು ಗೃಹಲಕ್ಷ್ಮೀ ಯೋಜನೆ, 1.80 ಕೋಟಿ ಮಂದಿ ಗೃಹ ಜ್ಯೋತಿ. ಆದ್ದರಿಂದ ಮೈತ್ರಿ ಪಕ್ಷಗಳು ನೀಡುತ್ತಿರುವ ಹೇಳಿಕೆಗಳು ಯೋಜನೆಯ ಫಲಾನುಭವಿಗಳನ್ನು ಅಪಮಾನ ಮಾಡಿದಂತೆ ಎಂದು ಅವರು ತಿಳಿಸಿದರು.

ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ನಮ್ಮ ಪಕ್ಷದ ನಾಯಕರು, ಮುಖಂಡರು, ಜಿಲ್ಲಾ ಮಟ್ಟದ ಪದಾಧಿಕಾರಿಗಳ ರಕ್ತದ ಪ್ರತಿ ಕಣಕಣದಲ್ಲೂ ಗ್ಯಾರಂಟಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಬದ್ಧತೆ ಇದೆ. ನಮ್ಮ ದೇಹದಲ್ಲಿ ಒಂದು ಹನಿ ರಕ್ತ ಸಂಚಾರ ಇರುವ ತನಕವೂ ನಾವು ಯೋಜನೆಗಳನ್ನು ನಿಲ್ಲಿಸಲು ಹೋಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬಡವರಿಗೆ ಉಚಿತವಾಗಿ 10 ಕೆ.ಜಿ.ಅಕ್ಕಿಯನ್ನು ನೀಡುತ್ತೇವೆ ಎಂದು ನಮ್ಮ ಪಕ್ಷ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಇದಕ್ಕಾಗಿ ಹೆಚ್ಚುವರಿ 5 ಕೆ.ಜಿ. ಅಕ್ಕಿಯನ್ನು ಹಣ ಕೊಡುತ್ತೇವೆ ಕೊಡಿ ಎಂದರೂ ಕೇಂದ್ರ ಸರ್ಕಾರ ಕೊಡಲಿಲ್ಲ. ಇದರಿಂದಲೇ ತಿಳಿಯುತ್ತದೆ ಬಿಜೆಪಿಯವರು ಬಡವರ ವಿರೋಧಿ, ಮಹಿಳೆಯರ ವಿರೋಧಿ, ದಲಿತರ ವಿರೋಧಿ ಎಂದು. ರಾಜ್ಯಕ್ಕೆ ಪಡಿತರ ಅಕ್ಕಿಯನ್ನು ಕೊಡಲು ನಿರಾಕರಿಸುವ ಮೂಲಕ ಕರ್ನಾಟಕದ ಆರೂವರೆ ಕೋಟಿ ಜನರನ್ನು ಅವಮಾನಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ

ಜೂ.4 ರಂದು ಮೋದಿ ಸರ್ಕಾರ ಅಂತ್ಯವಾಗಲಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬರುತ್ತದೆ. ನರೇಗಾದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ನೀಡುವ ಕೂಲಿ ಮೊತ್ತವನ್ನು ಹೆಚ್ಚಳ ಮಾಡುತ್ತೇವೆ. ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು ಸೇರಿ 370 ರೂ. ಸಿಗುತ್ತಿದೆ. ಆದರೆ, ನಾವು ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರ 400 ರೂ. ನೀಡುತ್ತದೆ. ರಾಜ್ಯ ಸರ್ಕಾರ ತನ್ನ ಪಾಲಿನ ಸುಮಾರು 180 ರೂ. ಇದಕ್ಕೆ ಸೇರಿಸುವ ಮೂಲಕ ಕಾರ್ಮಿಕರಿಗೆ 580 ರೂ. ದೊರೆಯಲಿದೆ ಎಂದರು.

ಮಹಿಳೆಯರಿಗೆ 8 ಸಾವಿರ ರೂಪಾಯಿ ನೀಡಲಿದ್ದೇವೆ. ಕರ್ನಾಟಕದ ಮಹಿಳೆಯರಿಗೆ ಈಗ ದೊರೆಯುತ್ತಿರುವ 2 ಸಾವಿರದೊಂದಿಗೆ ಕೇಂದ್ರದ 8 ಸಾವಿರ ರೂ. ಸಿಗುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ರೈತರ ಬೆಳೆಗಳಿಗೆ ಎಂ.ಎಸ್‌.ಪಿ ಬೆಲೆಯ ಗ್ಯಾರಂಟಿ ನೀಡುತ್ತವೆ. ಸಾಲಮನ್ನಕ್ಕಾಗಿಯೇ ಸಮಿತಿಯನ್ನು ರಚಿಸುತ್ತೇವೆ ಎಂದು ಅವರು ಭರವಸೆ ನೀಡಿದರು.

ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಕೆ. ಹರೀಶ್ ಗೌಡ, ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಎಂ.ಕೆ. ಸೋಮಶೇಖರ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ನಗರಾಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಮೊದಲಾದವರು ಇದ್ದರು.

ನಾಯಕತ್ವ ಬದಲಾವಣೆ ಊಹಾಪೋಹ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವಿಚಾರ ಕೇವಲ ಊಹಾಪೂಹ. ವಿರೋಧ ಪಕ್ಷಗಳು ಉತ್ಪ್ರೇಕ್ಷ ಹೇಳಿಕೆಯನ್ನು ನೀಡುತ್ತಾ ಭ್ರಮೆಯಲ್ಲಿ ಮಾತನಾಡುತ್ತಿವೆ. ಇದು ನಂಬುವಂತದ್ದಲ್ಲ, ಯಾರು ನಂಬಬೇಡಿ. ಕಾಂಗ್ರೆಸ್ ಸರ್ಕಾರದ ಸಚಿವರು, ಶಾಸಕರು, ನಾಯಕರು ನೀಡಿರುವ ಹೇಳಿಕೆಗಳು ವೈಯಕ್ತಿ ಹಾಗೂ ಸಂದರ್ಭಾನುಸಾರವಾಗಿವೆ ಹೊರತು ಬೇರೆನೂ ಅರ್ಥ ಕಲ್ಪಿಸಬಾರದು.

- ರಣದೀಪ್ ಸಿಂಗ್ ಸುರ್ಜೇವಾಲ, ರಾಜ್ಯ ಕಾಂಗ್ರೆಸ್ ಉಸ್ತುವಾರಿ