ಕಾರವಾರ: ಕೇಂದ್ರ ಪುರಸ್ಕೃತ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಸಹಕಾರ ಮತ್ತು ಜವಾಬ್ದಾರಿ ಅತ್ಯಗತ್ಯ. ಆದರೆ, ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸದ ಹೊರತು ಈ ಯೋಜನೆಗಳು ಜನಸಾಮಾನ್ಯರಿಗೆ ತಲುಪಲು ಸಾಧ್ಯವಿಲ್ಲ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಂಸದರು, ಹಲವು ಮಹತ್ವದ ಯೋಜನೆಗಳು ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಆರೋಗ್ಯ ಇಲಾಖೆಯಡಿ ವಯೋವಂದನ ಯೋಜನೆಯು ಜಿಲ್ಲೆಯಲ್ಲಿ ಕೇವಲ ಶೇ. 10ರಷ್ಟು ಮಾತ್ರ ಗುರಿ ಮುಟ್ಟಿದೆ. ಇನ್ನು ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆಯು ಶೇ.50ಕ್ಕೆ ಸೀಮಿತವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ಜಾಗೃತಿ ಮೂಡಿಸಿ, ನೋಂದಣಿ ಶಿಬಿರಗಳನ್ನು ಆಯೋಜಿಸಬೇಕು ಎಂದು ಸೂಚಿಸಿದರು.
ಅಲ್ಲದೆ, ಜಲಜೀವನ್ ಮಿಷನ್ (ಮನೆ ಮನೆಗೆ ಗಂಗೆ) ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಗಳ ಅನುಷ್ಠಾನದಲ್ಲಿ ಕಂಡುಬಂದಿರುವ ಲೋಪದೋಷಗಳನ್ನು ತಕ್ಷಣ ಸರಿಪಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.ಜಿಲ್ಲೆಯಲ್ಲಿ ಸೌರಶಕ್ತಿ ಬಳಕೆಯನ್ನು ಉತ್ತೇಜಿಸಲು ಜಾರಿಗೆ ತಂದಿರುವ ಸೂರ್ಯ ಘರ್ ಮತ್ತು ಕುಸುಮ್ ಯೋಜನೆಗಳ ಪ್ರಗತಿ ಶೂನ್ಯವಾಗಿದೆ ಎಂದು ಸಂಸದರು ಅಸಮಾಧಾನ ಹೊರಹಾಕಿದರು. ಉದ್ಯೋಗ ಸೃಷ್ಟಿಯ ನಿಟ್ಟಿನಲ್ಲಿ ತೋಟಗಾರಿಕೆ ಮತ್ತು ಮೀನುಗಾರಿಕೆ ಇಲಾಖೆಗಳು ಹೆಚ್ಚು ಶ್ರಮಿಸಬೇಕಿದೆ. ನರ್ಸರಿಗಳ ನಿರ್ಮಾಣ ಹಾಗೂ ಅಲಂಕಾರಿಕ ಮೀನು ಕೃಷಿಯಂತಹ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಇದೇ ವೇಳೆ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಇತ್ತೀಚೆಗೆ ಉದ್ಘಾಟಿಸಿರುವ ಎರಡು ಕೋಟಿ ಮೌಲ್ಯದ ಯಂತ್ರೋಪಕರಣಗಳಿರುವ ಹೊಸ ಆಸ್ಪತ್ರೆ ಕಟ್ಟಡದ ಸೌಲಭ್ಯಗಳು ಜನರಿಗೆ ಸಕಾಲದಲ್ಲಿ ಸಿಗುವಂತಾಗಬೇಕು ಎಂದು ಆಶಿಸಿದರು.
ಯೋಜನೆಗಳ ವೈಫಲ್ಯದ ನಡುವೆಯೇ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ನಡೆಯುತ್ತಿರುವ ಉತ್ತಮ ಕಾರ್ಯಗಳನ್ನು ಕಾಗೇರಿ ಶ್ಲಾಘಿಸಿದರು. ಜೋಯಿಡಾವನ್ನು ಸಾವಯವ ತಾಲೂಕು ಆಗಿ ಬೆಳೆಸುತ್ತಿರುವುದು, ಕಾರವಾರದ ಒಣ ಮೀನು ಪ್ಯಾಕಿಂಗ್ ಘಟಕ ಹಾಗೂ ಸುಕ್ಕೇಹಳ್ಳಿಯ ಜೇನು ಮತ್ತು ಬಾಳೆಹಣ್ಣಿನಂತಹ ಗೃಹ ಉತ್ಪನ್ನಗಳನ್ನು ಎನ್‌ಆರ್‌ಎಲ್‌ಎಂ ಗುಂಪುಗಳು ಯಶಸ್ವಿಯಾಗಿ ಮಾರುಕಟ್ಟೆಗೆ ತರುತ್ತಿರುವುದು ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯತ್ ಸಿಇಒ ಡಾ. ದಿಲೀಶ್ ಶಶಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಆಡಳಿತ ಯಂತ್ರ ಸಂಪೂರ್ಣ ಕುಸಿತ, ಅವಧಿ ಪೂರೈಸುವ ಲಕ್ಷಣಗಳಿಲ್ಲಕಾರವಾರ: ರಾಜ್ಯದಲ್ಲಿ ಅಧಿಕಾರದ ಕಚ್ಚಾಟದಿಂದಾಗಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿದ್ದು, ಈ ಸರ್ಕಾರ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ " ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ದಿಶಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದರು.ರಾಜ್ಯದ ಜನತೆ ಉತ್ತಮ ಆಡಳಿತದ ನಿರೀಕ್ಷೆಯೊಂದಿಗೆ ಕಾಂಗ್ರೆಸ್‌ಗೆ ಬಹುಮತ ನೀಡಿದ್ದರು. ಆದರೆ ಕಳೆದ ಎರಡೂವರೆ ವರ್ಷಗಳ ಆಡಳಿತವನ್ನು ಗಮನಿಸಿದರೆ, ಅಭಿವೃದ್ಧಿಪರ ಚಟುವಟಿಕೆಗಳು ಎಲ್ಲಿಯೂ ಕಾಣುತ್ತಿಲ್ಲ. ಬದಲಾಗಿ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿರುವ ಆಂತರಿಕ ಕಚ್ಚಾಟದಿಂದಾಗಿ ಸರ್ಕಾರಿ ಯೋಜನೆಗಳು ಹಳ್ಳ ಹಿಡಿದಿವೆ. ಜನರ ವಿಶ್ವಾಸವನ್ನು ಈ ಸರ್ಕಾರ ಸಂಪೂರ್ಣವಾಗಿ ಕಳೆದುಕೊಂಡಿದೆ " ಎಂದು ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಲ್ಪಸಂಖ್ಯಾತರ ಓಲೈಕೆಯಲ್ಲಿ ಮಗ್ನವಾಗಿರುವ ಸರ್ಕಾರ, ತನ್ನ ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಹಾಕಲು ಪ್ರತಿದಿನ ಹೊಸ ಹೊಸ ವಿವಾದಗಳನ್ನು ಸೃಷ್ಟಿಸುತ್ತಿದೆ. ವಿವಾದಗಳನ್ನು ಹುಟ್ಟುಹಾಕಿ ಜನರ ಗಮನ ಬೇರೆಡೆ ಸೆಳೆಯುವ ಕುತಂತ್ರವನ್ನು ಬಿಟ್ಟು, ಪರಿಣಾಮಕಾರಿಯಾಗಿ ಆಡಳಿತ ನಡೆಸುವತ್ತ ಗಮನಹರಿಸಲಿ " ಎಂದು ಆಕ್ರೋಶ ಹೊರಹಾಕಿದರು.ಸಿಎಂ ಮತ್ತು ಡಿಸಿಎಂ ನಡುವಿನ ಗೊಂದಲಗಳನ್ನು ಅವರ ಹೈಕಮಾಂಡ್ ಮಟ್ಟದಲ್ಲೇ ಬಗೆಹರಿಸಿಕೊಳ್ಳಲಿ. ಪ್ರಸ್ತುತ ವಿದ್ಯಮಾನಗಳನ್ನು ನೋಡಿದರೆ ಸರ್ಕಾರದ ಸ್ಥಿತಿ ಡೋಲಾಯಮಾನವಾಗಿದೆ. ವಿರೋಧ ಪಕ್ಷವಾಗಿ ನಾವು ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಯಾವುದೇ ರಾಜಕೀಯ ಬದಲಾವಣೆಗಳಿಗೆ ಅಥವಾ ಆಗುಹೋಗುಗಳಿಗೆ ಸ್ಪಂದಿಸಲು ಸಂಪೂರ್ಣವಾಗಿ ಸಜ್ಜಾಗಿದ್ದೇವೆ ಎಂದು ಕಾಗೇರಿ ಇದೇ ವೇಳೆ ಸ್ಪಷ್ಟಪಡಿಸಿದರು.ಹೆಗಡೆ ನಮ್ಮ ಜೊತೆಗೇ ಇದ್ದಾರೆ
ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರು ಮತ್ತೆ ರಾಜಕೀಯಕ್ಕೆ ಬರಲಿದ್ದಾರೆಯೇ, ಭಟ್ಕಳದಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, ನಗುತ್ತಲೇ ಉತ್ತರಿಸಿದ ಸಂಸದ ಕಾಗೇರಿ, ಅನಂತಕುಮಾರ ಹೆಗಡೆ ಯಾವಾಗಲೂ ನಮ್ಮ ಜೊತೆಗೇ ಇದ್ದೇ ಇದ್ದಾರೆ " ಎಂದು ಹೊರಟರು.