ಸಾರಾಂಶ
- ನಗರದ ಬಂಟರ ಸಮುದಾಯ ಭವನದಲ್ಲಿ ಆಯೋಜನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದಿಂದ ಗದಗದಲ್ಲಿ ನಡೆಯುವ ರಾಜ್ಯಮಟ್ಟದ ಪ್ರಪ್ರಥಮ ಸಮ್ಮೇಳನ ಅಂಗವಾಗಿ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆ ಹಾಗೂ ಪ್ರಥಮ ವರ್ಷದ ಸಮ್ಮೇಳನದ ಪೂರ್ವಸಿದ್ಧತೆ ಕುರಿತು ಚರ್ಚೆ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭ ಜ.12ರಂದು ನಗರದ ಬಂಟರ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11ಕ್ಕೆ ನಡೆಯುವ ಪೂರ್ವಭಾವಿ ಕಾರ್ಯಕಾರಿಣಿಯಲ್ಲಿ ಸಮ್ಮೇಳನದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಸಂಘದ ಪದಾಧಿಕಾರಿಗಳು, ಸಂಪಾದಕರು ಭಾಗವಹಿಸಲಿದ್ದಾರೆ ಎಂದರು.
ಪಾವಗಡದಲ್ಲಿ ಸಂಪಾದಕ ರಾಮಾಂಜಿನಪ್ಪ ಮೇಲೆ ಸಾರ್ವಜನಿಕ ಸ್ಥಳದಲ್ಲಿ ನಡೆದ ಹಲ್ಲೆ, ದೌರ್ಜನ್ಯ ಖಂಡಿಸಿ, ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ ಜೊತೆಗೆ ಸಂತ್ರಸ್ಥ ರಾಮಾಂಜಿನಪ್ಪ ಮತ್ತು ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸುವಂತೆ ಜಿಲ್ಲಾಡಳಿತ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಅರ್ಪಿಸಲಾಗುವುದು ಎಂದರು.ಪತ್ರಕರ್ತ ರಾಮಾಂಜಿನಪ್ಪ ಅವರು ಅಕ್ರಮ ದಂಧೆಗಳು, ರಿಯಲ್ ಎಸ್ಟೇಟ್ ದಂಧೆಯ ಕರಾಳತೆಯನ್ನು ಬಯಲಿಗೆಳೆಯುತ್ತಿದ್ದರು. ದಿಟ್ಟತನದ ವರದಿಗಳ ಮೂಲಕ ಸಂಚಲನ ಮೂಡಿಸುತ್ತಿದ್ದರು. ತಾಲೂಕಿನ ಪ್ರತಿ ಸಮಸ್ಯೆಗಳ ಬಗ್ಗೆ, ಕೆಲವು ಮಾಫಿಯಾಗಳ ಬಗ್ಗೆ ನೇರ ವರದಿ ಮಾಡುತ್ತಿದ್ದರು. ರಾಮಾಂಜಿನಪ್ಪಗೆ ಸರ್ಕಾರ ಭದ್ರತೆ, ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದರು.
ಇಂಥ ರಾಮಾಂಜಿನಪ್ಪ ಅವರ ಮೇಲೆ ನಡು ಬೀದಿಯಲ್ಲೇ ಸಾರ್ವಜನಿಕವಾಗಿ ಅರೆಬೆತ್ತಲೆಗೊಳಿಸಿ, ಮಹಿಳೆಯರ ಮೂಲಕ ದೌರ್ಜನ್ಯ ಮಾಡಿಸಿದ್ದು ಅಕ್ಷಮ್ಯ, ಕಾನೂನು ಬಾಹಿರ ಕೃತ್ಯ. ಇಂಥ ಕೃತ್ಯದ ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟಿದ್ದು ಅಮಾನವೀಯ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ರಾಮಾಂಜಿನಪ್ಪ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಪತ್ರಿಕೆಗಳ ಸಂಪಾದಕರು, ವರದಿಗಾರರು ಅನ್ಯಾಯ, ಅಕ್ರಮಗಳನ್ನು ವರದಿಗಳ ಮೂಲಕ ಬಯಲಿಗೆಳೆಯಲು ಮುಕ್ತ ಅವಕಾಶ ಇರಬೇಕು. ಈ ನಿಟ್ಟಿನಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಇರುವ ಕಾನೂನಿನ ಮಾದರಿಯಲ್ಲೇ ಮಾಧ್ಯಮ ಕ್ಷೇತ್ರದ ಸಿಬ್ಬಂದಿಯ ರಕ್ಷಣೆಗೆ ಕಾನೂನು ರೂಪಿಸಿ, ಜಾರಿಗೊಳಿಸಬೇಕು. ಮುದ್ರಣ ಮತ್ತು ದೃಶ್ಯ ಮಾಧ್ಯಮ ಪ್ರತಿನಿಧಿಗಳಿಗೆ, ನೌಕರರಿಗೆ ಸೂಕ್ತ ರಕ್ಷಣೆ, ಭದ್ರತೆ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಸುರೇಶ ಆರ್. ಕುಣಿಬೆಳಕೆರೆ ಮಾತನಾಡಿ, ಮಾಧ್ಯಮ ಅಕಾಡೆಮಿ ಪುರಸ್ಕೃತರು ಸೇರಿದಂತೆ ಅನೇಕರಿಗೆ ಸಂಘದಿಂದ ಅಂದಿನ ಸಭೆಯಲ್ಲಿ ಸನ್ಮಾನಿಸಿ, ಗೌರವಿಸಲಾಗುವುದು. ಈಗಾಗಲೇ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆಗೆ ಅಂತಿಮ ಸಿದ್ಧತೆಗಳೂ ನಡೆದಿವೆ. ಗದಗ್‌ನಲ್ಲಿ ನಡೆಯುವ ಸಂಘದ ರಾಜ್ಯಮಟ್ಟದ ಪ್ರಪ್ರಥಮ ಸಮ್ಮೇಳನದ ಅಂಗವಾಗಿ ನಗರದಲ್ಲಿ ರಾಜ್ಯ ಕಾರ್ಯಕಾರಿಣಿ ಹಮ್ಮಿಕೊಳ್ಳಲಾಗಿದೆ ಎಂದರು.ಸಂಘದ ರಾಜ್ಯ ಪರಿಷತ್ತು ಸದಸ್ಯರಾದ ಡಾ. ಬಿ.ವಾಸುದೇವ, ಡಾ. ಕೆ.ಜೈಮುನಿ, ಪ್ರಧಾನ ಕಾರ್ಯದರ್ಶಿ ಗೋವರ್ದನ್, ಖಜಾಂಚಿ ಟಿ.ಜಿ. ಶಿವಮೂರ್ತಿ, ನಾಗರಾಜ ಇದ್ದರು.
- - - -10ಕೆಡಿವಿಜಿ2.ಜೆಪಿಜಿ:ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಸುರೇಶ ಆರ್.ಕುಣಿಬೆಳಕೆರೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಡಾ.ಬಿ.ವಾಸುದೇವ, ಟಿ.ಜಿ.ಶಿವಮೂರ್ತಿ, ಡಾ.ಕೆ.ಜೈಮುನಿ, ಗೋವರ್ದನ, ನಾಗರಾಜ ಇದ್ದರು.