ಈಗಾಗಲೇ 33 ಲಕ್ಷ ರೈತರಿಗೆ ತಲಾ ₹2000 ಬರ ಪರಿಹಾರ: ಕೃಷ್ಣ ಬೈರೇಗೌಡ

| Published : Feb 12 2024, 01:34 AM IST / Updated: Feb 12 2024, 01:28 PM IST

Krishna byregowda
ಈಗಾಗಲೇ 33 ಲಕ್ಷ ರೈತರಿಗೆ ತಲಾ ₹2000 ಬರ ಪರಿಹಾರ: ಕೃಷ್ಣ ಬೈರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಮೊದಲ ಹಂತದ 2000 ರು. ಪರಿಹಾರ ಹಣವನ್ನು ಈವರೆಗೆ 33 ಲಕ್ಷ ರೈತರಿಗೆ ನೀಡಲಾಗಿದೆ. ದಾಖಲೆಗಳ ಸಮಸ್ಯೆಯಿಂದಾಗಿ ಇನ್ನೂ 1.66 ಲಕ್ಷ ರೈತರಿಗೆ ಪರಿಹಾರ ನೀಡುವುದು ಬಾಕಿ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು 

ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಮೊದಲ ಹಂತದ 2000 ರು. ಪರಿಹಾರ ಹಣವನ್ನು ಈವರೆಗೆ 33 ಲಕ್ಷ ರೈತರಿಗೆ ನೀಡಲಾಗಿದೆ. ದಾಖಲೆಗಳ ಸಮಸ್ಯೆಯಿಂದಾಗಿ ಇನ್ನೂ 1.66 ಲಕ್ಷ ರೈತರಿಗೆ ಪರಿಹಾರ ನೀಡುವುದು ಬಾಕಿ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಒಟ್ಟು 628 ಕೋಟಿ ರು. ಬರ ಪರಿಹಾರ ಹಣ ಸಂದಾಯವಾಗಿದೆ. 

ಇನ್ನುಳಿದ 1.66 ಲಕ್ಷ ರೈತರಿಗೆ ಸುಮಾರು 30 ಕೋಟಿ ರು.ನಷ್ಟು ಪರಿಹಾರ ಮೊತ್ತ ತಲುಪಬೇಕಿದೆ. ಸರಿಯಾದ ದಾಖಲೆ ಪಡೆದು ಸಂದಾಯ ಮಾಡಲಾಗುವುದು. 

ಪ್ರತಿ ಗ್ರಾ.ಪಂ.ವ್ಯಾಪ್ತಿಯಲ್ಲೂ ಪರಿಹಾರ ಪಡೆದಿರುವ ರೈತರ ಪಟ್ಟಿ ಪ್ರಕಟಿಸಲು ಸೂಚಿಸಲಾಗಿದೆ. ಯಾವುದೇ ರೈತರ ಹೆಸರು ಕೈಬಿಟ್ಟುಹೋಗಿದ್ದರೆ ಕೂಡಲೇ ಸ್ಥಳೀಯ ಕೃಷಿ ಇಲಾಖೆ, ಕಂದಾಯ ಇಲಾಖೆ ಸಂಪರ್ಕಿಸಬಹುದು ಎಂದರು. 

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬರ ಪರಿಹಾರ ನೀಡಿಕೆಯಲ್ಲಿ ದುರುಪಯೋಗವಾಗಿದೆ. ರೈತರ ಹೆಸರಲ್ಲಿ ನೈಜ ಫಲಾನುಭವಿ ಅಲ್ಲದವರಿಗೂ ಸ್ಥಳೀಯ ಅಧಿಕಾರಿಗಳು ಬರ ಪರಿಹಾರದ ಹಣ ನೀಡಿ ಲೂಟಿ ಹೊಡೆದಿದ್ದಾರೆ. 

ಆದರೆ, ಯಾವ ಅಧಿಕಾರಿಗಳ ವಿರುದ್ಧವೂ ಕ್ರಮ ಆಗಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದೆ. ಜೊತೆಗೆ ಈಗ ನೀಡುತ್ತಿರುವ ಬರ ಪರಿಹಾರದಲ್ಲಿ ಅಂತಹ ಯಾವುದೇ ದುರುಪಯೋಗಕ್ಕೆ ಅವಕಾಶವಾಗದಂತೆ ನೇರ ರೈತರ ಖಾತೆಗೆ ಹಣ ವರ್ಗಾವಣೆಯಾಗುವಂತೆ ನೋಡಿಕೊಂಡಿದೆ ಎಂದು ತಿಳಿಸಿದರು.

ಬರ ನಿರ್ವಹಣೆಗೆ ಕ್ರಮ : ಇನ್ನು, ರಾಜ್ಯದ 234 ಬರ ತಾಲ್ಲೂಕುಗಳು ಬರಪೀಡಿತವಾಗಿವೆ. ಬರ ನಿರ್ವಹಣೆಗೆ ಸರ್ಕಾರ 870 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಕುಡಿಯುವ ನೀರು, ಮೇವಿನ ಸಮಸ್ಯೆಯಾಗದಂತೆ ಸೂಕ್ತ ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿಕಾರಿಗಳು ಅಗತ್ಯ ಕ್ರಮ ವಹಿಹಿಸುತ್ತಿದ್ದಾರೆ ಎಂದರು. 

ರಾಜ್ಯಕ್ಕೆ ಬಂದಿರುವ ಅಮಿತ್‌ ಶಾ ಬರ ಪರಿಹಾರ ಘೋಷಿಸಲಿ: ರಾಜ್ಯಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಾಪಸ್‌ ತೆರಳುವ ಮುನ್ನ ರಾಜ್ಯಕ್ಕೆ ಬರ ಪರಿಹಾರ ಘೋಷಿಸಬೇಕು. 

ರಾಜ್ಯ ಬಿಜೆಪಿ ನಾಯಕರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ಅಮಿತ್‌ ಶಾರನ್ನು ಭೇಟಿ ಮಾಡಿ ಬರ ಪರಿಹಾರ ಘೋಷಿಸಲು ಒತ್ತಾಯಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ರಾಜ್ಯದ ಬರ ಪರಿಹಾರಕ್ಕೆ ಹಣ ನೀಡುವಂತೆ ನಾಲ್ಕೈದು ತಿಂಗಳಿಂದ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದೇವೆ. ಇದುವರೆಗೆ ಒಂದು ರುಪಾಯಿ ಹಣ ನೀಡಿಲ್ಲ. 

ಕೇಂದ್ರ ಹಣಕಾಸು ಸಚಿವರು ಸುಳ್ಳು ಹೇಳಿದ್ದಾರೆ. ನಾವು ಭಿಕ್ಷೆ ಕೇಳುತ್ತಿಲ್ಲ, ನಮ್ಮ ಪಾಲು ಕೇಳುವುದು ನಮ್ಮ ಹಕ್ಕು, ಗೃಹ ಸಚಿವರು ರಾಜ್ಯದಲ್ಲೇ ಪರಿಹಾರ ಘೋಷಿಸಿ ಹೋಗಲಿ ಎಂದು ಮನವಿ ಮಾಡುತ್ತೇನೆ ಎಂದರು.

ಬಿಜೆಪಿ-ಜೆಡಿಎಸ್ ನಾಯಕರು ಗೃಹ ಸಚಿವರನ್ನು ಭೇಟಿ ಮಾಡಿ ರಾಜ್ಯದ ಪಾಲಿನ ಬರ ಪರಿಹಾರ ಹಣ ಬಿಡುಗಡೆ ಮಾಡಿಸಲಿ. ಇಲ್ಲದಿದ್ದರೆ ರೈತರ ವಿಚಾರದಲ್ಲಿ ಪ್ರತಿಪಕ್ಷಗಳದ್ದು ನಾಟಕ ಎಂದು ಹೇಳಬೇಕಾಗುತ್ತದೆ ಎಂದರು.