ಭದ್ರಾ ಮೇಲ್ದಂಡೆಗೆ 3 ಟಿಎಂಸಿ ನೀರು ಹರಿಸುವುದು, ಗುಟ್ಕಾ ಬ್ಯಾನ್ ವಿರೋಧಿಸಿ ರೈತರ ಪರ ಶಾಂತಿಯುತ ಹೋರಾಟ ನಡೆಸಿದ್ದ ಪ್ರತಿಭಟನಾಕಾರರ ಮೇಲೆ ರಾಜ್ಯ ಸರ್ಕಾರವು ಪೊಲೀಸರನ್ನು ಬಿಟ್ಟು ದೌರ್ಜನ್ಯ ಎಸಗಿದ್ದಲ್ಲದೇ, ರೈತ-ಹೋರಾಟಗಾರರ ಮೇಲೆ ಪೊಲೀಸರೂ ಮೃಗೀಯವಾಗಿ ವರ್ತಿಸಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- ಹೋರಾಟಗಾರ ಕೊರಳ ಪಟ್ಟಿಗೆ ಕೈಹಾಕಿ, ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿ, ಸಿಬ್ಬಂದಿ - ದೌರ್ಜನ್ಯ ಮಾಡಿದ ಅಧಿಕಾರಿಗಳ ಪಟ್ಟಿ ಇದ್ದು, ನಮ್ಮ ಸರ್ಕಾರ ಬಂದಾಗ ಪಾಠ ಕಲಿಸುತ್ತೇವೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಮೇಲ್ದಂಡೆಗೆ 3 ಟಿಎಂಸಿ ನೀರು ಹರಿಸುವುದು, ಗುಟ್ಕಾ ಬ್ಯಾನ್ ವಿರೋಧಿಸಿ ರೈತರ ಪರ ಶಾಂತಿಯುತ ಹೋರಾಟ ನಡೆಸಿದ್ದ ಪ್ರತಿಭಟನಾಕಾರರ ಮೇಲೆ ರಾಜ್ಯ ಸರ್ಕಾರವು ಪೊಲೀಸರನ್ನು ಬಿಟ್ಟು ದೌರ್ಜನ್ಯ ಎಸಗಿದ್ದಲ್ಲದೇ, ರೈತ-ಹೋರಾಟಗಾರರ ಮೇಲೆ ಪೊಲೀಸರೂ ಮೃಗೀಯವಾಗಿ ವರ್ತಿಸಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿಯುತವಾಗಿ ದಾವಣಗೆರೆ ಬಂದ್ ನಡೆಸಿದ್ದ ವೇಳೆ ರಾಜ್ಯ ಸರ್ಕಾರವು ರೈತರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ. ಪೊಲೀಸರು ಕೆಲ ಮುಖಂಡರ ಮೇಲೆ, ಕೆಲವರ ಕೊರಳಪಟ್ಟಿ ಹಿಡಿದು, ಎಳೆದಾಡಿದ್ದಾರೆ. ನಮ್ಮ ಮೇಲೆ ದೌರ್ಜನ್ಯ ಎಸಗಿದ ಎಲ್ಲ ಅಧಿಕಾರಿ, ಸಿಬ್ಬಂದಿ ಪಟ್ಟಿ ಮಾಡಿಕೊಂಡಿದ್ದು, ಮುಂದೆ ನಮ್ಮ ಸರ್ಕಾರ ಬಂದಾಗ ತಕ್ಕ ಪಾಠ ಕಲಿಸುತ್ತೇವೆ ಎಂದರು.
ಅಡಕೆ ಬೆಳೆಗಾರರಿಗೆ ಧಕ್ಕೆ ಆಗದಂತೆ ಹಿತರಕ್ಷಣೆ ಮಾಡುವುದು ಯಾವುದೇ ಸರ್ಕಾರದ ಆದ್ಯತೆಯಾಗಬೇಕು. ಸರ್ಕಾರವು ಗುಟ್ಕಾ ನಿಷೇಧ ಹಿಂಪಡೆಯುವ ವಿಷಯದಲ್ಲಿ ಸ್ಪಷ್ಡ ಹಾಗೂ ರೈತ ಪರ ನಿಲುವನ್ನು ತಾಳಬೇಕು. ಅಡಕೆ ಬೆಳೆಗಾರರಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಘೋರ ಅನ್ಯಾಯ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ರೈತರು, ರೈತ ಮುಖಂಡರು, ಅಡಕೆ ಬೆಳೆಗಾರರ ಜೊತೆಗೆ ಚರ್ಚಿಸಿ, ವಿಧಾನಸೌಧ ಚಲೋ ಹೋರಾಟ ಹಮ್ಮಿಕೊಳ್ಳಲಿದ್ದೇವೆ ಎಂದು ಅವರು ತಿಳಿಸಿದರು.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಆರೋಗ್ಯ ಸಚಿವ ಯು.ಟಿ. ಖಾದರ್ ಹಾಗೂ ಜಲ ಸಂಪನ್ಮೂಲ ಸಚಿವ ಚಲುವರಾಯ ಸ್ವಾಮಿ ನಿವಾಸಗಳಿಗೆ ಮುತ್ತಿಗೆ ಹಾಕಿ, ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದ್ದೇವೆ. ಚನ್ನಗಿರಿ, ಹೊನ್ನಾಳಿ ಸೇರಿದಂತೆ ಜಿಲ್ಲೆಯ ರೈತರ ಹಿತಕಾಯಲು ಆ.26ರಿಂದ 3 ದಿನಗಳ ಪಾದಯಾತ್ರೆ ನಡೆಸಿ, ಉಪ ವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದೆವು. ಭದ್ರಾ ಡ್ಯಾಂ ಅಚ್ಚುಕಟ್ಟು ರೈತರ ಹಿತಕಾಯಲು ನಮ್ಮ ಹೋರಾಟ ನಡೆಸಿದ್ದೇವೆ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ಮೊದಲು ತುಂಗಾ ನದಿಯಿಂದ 17.41 ಟಿಎಂಸಿ ನೀರನ್ನು ಭದ್ರಾ ಡ್ಯಾಂಗೆ ತುಂಬಿಸಬೇಕು. ಆ ನಂತರವೇ ಭದ್ರಾ ಮೇಲ್ದಂಡೆಗೆ ನೀರು ಹರಿಸಬೇಕೆಂಬ ಷರತ್ತು ಇದೆ. ತರೀಕೆರೆ ತಾ. ಮುತ್ತಿನಕೊಪ್ಪದ ಬಳಿ ₹324 ಕೋಟಿ ವೆಚ್ಚದಲ್ಲಿ 5 ಮೋಟಾರ್ ಹಾಗೂ ಪೈಪ್‌ಲೈನ್ ಕಾಮಗಾರಿ ಪೂರ್ಣವಾಗಿವೆ. ಬಾಕಿ ಕಾಮಗಾರಿಗೆ ₹30 ಕೋಟಿ ಅಗತ್ಯವಿದೆ. ಅದನ್ನು ರಾಜ್ಯ ಸರ್ಕಾರ ತಕ್ಷಣ ಬಿಡುಗಡೆ ಮಾಡಿ, ಕಾಮಗಾರಿ ಪೂರ್ಣಗೊಳಿಸಲಿ. ರೈತರ ಬೆಳೆಗಳಿಗೆ ನೀರಿನ ಅಭಾವ ಆಗದಂತೆ ಕ್ರಮ ಕೈಗೊಳ್ಳಲಿ ಎಂದು ತಾಕೀತು ಮಾಡಿದರು.ನಮ್ಮ ಸಮಾಧಿಯನ್ನು ಮಾಡಿ, ಅದರ ಮೇಲೆ ಬೇಕಿದ್ದರೆ ನೀರು ಕೊಂಡೊಯ್ಯಲಿ. ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕುತ್ತೇನೆ. ಪೊಲೀಸರನ್ನು ಬಿಟ್ಟು ನಮ್ಮ ಮೇಲೆ ದೌರ್ಜನ್ಯ ಮಾಡಿಸುತ್ತೀರಾ? ರಕ್ತ ಕೊಟ್ಟೇವು, ನೀರು ಕೊಡೆವು. ನಮ್ಮ ಪ್ರಾಣ ಬೇಕಿದ್ದರೆ ಇಲ್ಲಿಯೇ ಹೋಗಲಿ ಎಂದ ರೇಣುಕಾಚಾರ್ಯ, ಮದ್ಯ, ಡ್ರಗ್ಸ್, ಗಾಂಜಾ, ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಇಂತಹ ವಿಷಯಗಳತ್ತ ಗಮನಹರಿಸದೇ, ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಎಸಗುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
- - -(ಬಾಕ್ಸ್)
* ಗುಟ್ಕಾ ನಿಷೇಧ ಬಗ್ಗೆ ಸಿಎಂ-ಆರೋಗ್ಯ ಸಚಿವ ಭಿನ್ನ ರಾಗ!- ಮುಖ್ಯಮಂತ್ರಿ-ಸಂಪುಟ ಸದಸ್ಯರಲ್ಲೇ ಹೊಂದಾಣಿಕೆ ಇಲ್ಲ-ರೇಣುಕಾಚಾರ್ಯದಾವಣಗೆರೆ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆ.13ರಂದು ಗುಟ್ಕಾ ನಿಷೇಧ ಮಾಡಿ, ಆ.14ರಂದು ಅಡಕೆ ಬೆಳೆಗಾರರ ಹಿತ ಕಾಯುತ್ತೇವೆಂದು, ಗುಟ್ಕಾ ನಿಷೇಧ ಹಿಂಪಡೆಯುತ್ತೇವೆಂದರು. ಕೆಲ ಹೊತ್ತಿನಲ್ಲೇ ಆರೋಗ್ಯ ಸಚಿವ ಯು.ಟಿ.ಖಾದರ್ ಗುಟ್ಕಾ ನಿಷೇಧ ಆದೇಶ ಹಿಂಪಡೆಯಲ್ಲವೆಂದರು. ಇದನ್ನೆಲ್ಲಾ ನೋಡಿದರೆ ಸಿಎಂ ಹಾಗೂ ಸಂಪುಟ ಸದಸ್ಯರಲ್ಲೇ ಹೊಂದಾಣಿಕೆ ಇಲ್ಲವೆನಿಸುತ್ತದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ದೂರಿದರು.
ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಡಕೆ ಬೆಳೆಗಾರರ ವಿರೋಧಿ ಸರ್ಕಾರವಿದೆ. ಗುಟ್ಕಾ ಬ್ಯಾನ್ ಮಾಡುವ ಮೂಲಕ ಅಡಕೆ ಬೆಳೆಗಾರ ರೈತರನ್ನು ಹತ್ತಿಕ್ಕುವ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಸಿಎಂ ಒಂದು ಹೇಳಿಕೆ ನೀಡಿದರೆ, ಆರೋಗ್ಯ ಸಚಿವ ಮತ್ತೊಂದು ಹೇಳಿಕೆ ನೀಡಿ, ಗೊಂದಲ ಮೂಡಿಸುತ್ತಾರೆ ಎಂದರು.ನಮ್ಮ ಉದ್ದೇಶ ಇಷ್ಟೇ. ಇವತ್ತು ಇಡೀ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಇದ್ದು, ಗಾಂಜಾ, ಡ್ರಗ್ಸನ್ನು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಸಣ್ಣ ಸಣ್ಣ ಮಕ್ಕಳು ಸಹ ಡ್ರಗ್ಸ್, ಗಾಂಜಾ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಸಿಗರೇಟ್ ಮಾಫಿಯಾ, ಲಿಕ್ಕರ್ ಮಾಫಿಯಾದ ಲಾಬಿಗೆ ಕಾಂಗ್ರೆಸ್ ಸರ್ಕಾರ ಮಣಿದಿದೆ. ರಾಜ್ಯದ ಗೃಹ ಮಂತ್ರಿ ಅನಗತ್ಯವಾಗಿ ಬೇರೆಯವರ ಬಗ್ಗೆ ಚರ್ಚಿಸುತ್ತಾರೆ. ಸಂಘ ಪರಿವಾರ, ಬಿಜೆಪಿ ವಿರುದ್ಧ ಮಾತನಾಡುವುದೇ ಗೃಹ ಮಂತ್ರಿ ಕೆಲಸವಾಗಿದೆ. ಅದನ್ನು ಬಿಟ್ಟು, ಡ್ರಗ್ಸ್ ಮಾಫಿಯಾ, ಗಾಂಜಾ ಮಾಫಿಯಾವನ್ನು ನಿಯಂತ್ರಿಸಲು ಇಂತಹ ಸಚಿವರಿಂದ ಆಗುತ್ತಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವರು ಹರಿಹಾಯ್ದರು.
- - -(-ಫೋಟೋ ಇದೆ)