ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗಬೆಂಗಳೂರು ಸೇರಿದಂತೆ ರಾಜ್ಯದ ಪೂರ್ವ ಭಾಗಗಳಿಗೆ ಕುಡಿವ ನೀರು ಪೂರೈಕೆ ಸಂಬಂಧ, ರಾಜ್ಯ ಶರಾವತಿ ಜಲಾಶಯದಿಂದ 40 ಟಿಎಂಸಿ ನೀರು ಬಳಸಿಕೊಳ್ಳಲು ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಗುರುವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಶರಾವತಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡಿದ ನಂತರ 40 ಟಿಎಂಸಿ ನೀರು ಸಮುದ್ರಕ್ಕೆ ಹೋಗುತ್ತದೆ. ಈ ನೀರನ್ನು ಬಳಸಿಕೊಳ್ಳುವ ಸಂಬಂಧ ಪೀಜಿಬಿಲಿಟಿ ವರದಿ ಪಡೆಯಲು ಮುಂದಾಗಿದೆ ಎಂದರು.ಜಿಲ್ಲೆಯ ಜೀವನಾಡಿಯಾಗಿರುವ ವಾಣಿವಿಲಾಸ ಸಾಗರ ಜಲಾಶಯಕ್ಕೆ ಪ್ರಸ್ತುತ ಭದ್ರಾ ಜಲಾಶಯದಿಂದ ಪ್ರತಿ ನಿತ್ಯ 700 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣಗೊಳ್ಳುವವರೆಗೂ ಎತ್ತಿನಹೊಳೆ ಮುಖ್ಯ ಕಾಲುವೆ 32.50 ಕಿಮೀದಲ್ಲಿ ಬೇಲೂರು ತಾಲೂಕಿನ ಹೊಲಬಗೆರೆ ಗ್ರಾಮದ ಬಳಿ ಹಳೇಬೀಡು ಕೆರೆ, ಬೆಳವಾಡಿ ಕೆರೆ-ಮುಖಾಂತರ ವೇದಾವತಿ ನದಿಗೆ ಹರಿಸಿ ಅಲ್ಲಿಂದ ವಾಣಿವಿಲಾಸ ಸಾಗರ ಜಲಾಶಯ ತುಂಬಿಸುವ ಪ್ರಸ್ತಾವನೆ ಇದೆ.
ಶರಾವತಿ ನೀರನ್ನು ವಿವಿ ಸಾಗರದಲ್ಲಿ ಸಂಗ್ರಹಿಸಿ ನಂತರ ಬೆಂಗಳೂರಿಗೆ ಒಯ್ಯುವ ಉದ್ದೇಶ ಇದೆ. ಮುಂದಿನ ದಿನಗಳಲ್ಲಿ ವಾಣಿವಿಲಾಸ ಸಾಗರ ಜಲಾಶಯ ಸದಾ ಭರ್ತಿಯಾಗುವ ಎಲ್ಲಾ ಅವಕಾಶಗಳು ದಟ್ಟವಾಗಿದ್ದು, ಇದರಿಂದ ನಮ್ಮ ರೈತರ ಮೊಗದಲ್ಲಿ ಮಂದಹಾಸ ಮೂಡುವುದಲ್ಲದೇ ಮತ್ತು ಜಿಲ್ಲೆಯಲ್ಲಿನ ಅಂತರ್ಜಲ ಮಟ್ಟ ಹೆಚ್ಚಳವಾಗುವುದು ಬಹುತೇಕ ನಿಶ್ಚಿತವಾಗಿದೆ ಎಂದರು.ಸರ್ಕಾರವು ಜನರ ಸರ್ವತೋಮುಖ ಏಳಿಗೆಗಾಗಿ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ನಿರಾತಂಕವಾಗಿ ಸಾಗುತ್ತಿದ್ದು, ಮುಂದೆಯೂ ಯಾವುದೇ ಅಡ್ಡಿಯಿಲ್ಲದೆ ಸಾಗಲಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 4.50 ಲಕ್ಷ, ಗೃಹಜ್ಯೋತಿ ಯೋಜನೆಯಡಿ 3.71 ಲಕ್ಷ, ಗೃಹಲಕ್ಷ್ಮೀ ಯೋಜನೆಯಡಿ 3.81 ಲಕ್ಷ, ಯುವನಿಧಿ ಯೋಜನೆಯಡಿ 4726 ಹಾಗೂ ಶಕ್ತಿ ಯೋಜನೆಯಡಿ 2.60 ಕೋಟಿ ಮಹಿಳೆಯರು ಸದುಪಯೋಗ ಪಡೆದುಕೊಂಡಿದ್ದಾರೆ.ಬೆಳೆ ಸಮೀಕ್ಷೆಯಲ್ಲಿ ನಮ್ಮ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಪೂರ್ವ ಮುಂಗಾರು ಹಂಗಾಮಿನಲ್ಲಿ 1,30,694 ರೈತರ ತಾಕುಗಳ ಪೈಕಿ 1,28,375 ತಾಕುಗಳ ಬೆಳೆ ಸಮೀಕ್ಷೆ ಪೂರ್ಣಗೊಂಡಿದೆ. 2023 ರ ಮುಂಗಾರು ಹಂಗಾಮಿನಲ್ಲಿ 81501 ರೈತರು ₹284.22 ಕೋಟಿ ಬೆಳೆ ವಿಮೆ ಪಡೆದಿದ್ದಾರೆ. 2024 ರ ಮುಂಗಾರು ಹಂಗಾಮಿನಲ್ಲಿ 1,12,101 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿದ್ದು, ಜಿಲ್ಲೆಯು ರಾಜ್ಯದಲ್ಲಿ 8ನೇ ಸ್ಥಾನದಲ್ಲಿರುತ್ತದೆ. 2023 ರ ಮುಂಗಾರು ಹಂಗಾಮಿನಲ್ಲಿ 1,44,166 ರೈತರಿಗೆ ₹125.75 ಕೋಟಿಗಳನ್ನು ಪಾರದರ್ಶಕವಾಗಿ ಫ್ರೂಟ್ಸ್, ಪರಿಹಾರ್ ತಂತ್ರಾಂಶಗಳ ಮೂಲಕ ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಿರುವುದು ನಮ್ಮ ಸರ್ಕಾರದ ಹೆಮ್ಮೆಯಾಗಿದೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಈ ವೇಳೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಗೋವಿಂದ ಎಂ.ಕಾರಜೋಳ, ಆದಿಜಾಂಬವ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಜಿ.ಎಸ್. ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್‍ಪೀರ್, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎಸ್.ಜೆ. ಸೋಮಶೇಖರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಉಪ ವಿಭಾಗಾಧಿಕಾರಿ ಎಂ. ಕಾರ್ತಿಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ. ಕುಮಾರಸ್ವಾಮಿ ಇದ್ದರು.