ಭತ್ತ ಖರೀದಿ ಕೇಂದ್ರ ತೆರೆಯದ ರಾಜ್ಯ ಸರ್ಕಾರ, ಜಿಲ್ಲಾಡಳಿತ:ಬಿಜೆಪಿ ರೈತ ಮೋರ್ಚಾ ವತಿಯಿಂದ ಡೀಸಿ ಕಚೇರಿ ಎದುರು ಪ್ರತಿಭಟನೆ

| Published : Jan 11 2025, 12:46 AM IST

ಭತ್ತ ಖರೀದಿ ಕೇಂದ್ರ ತೆರೆಯದ ರಾಜ್ಯ ಸರ್ಕಾರ, ಜಿಲ್ಲಾಡಳಿತ:ಬಿಜೆಪಿ ರೈತ ಮೋರ್ಚಾ ವತಿಯಿಂದ ಡೀಸಿ ಕಚೇರಿ ಎದುರು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ದಲ್ಲಾಳಿಗಳು ಬೆಳೆಗಾರರಿಂದ ಖರೀದಿಸುತ್ತಿರುವ ಭತ್ತದ ತೂಕದಲ್ಲೂ ವ್ಯತ್ಯಾಸವಾಗುತ್ತಿದೆ. 74 ಕಿಲೋ ಹಸಿ ಭತ್ತವನ್ನು 70 ಕಿಲೋಗೆ ಹಾಗೂ ಸ್ವಲ್ಪ ಒಣಗಿರುವ 72 ಕಿಲೋ ಭತ್ತವನ್ನು 70 ಕಿಲೋಗೆ ಪರಿಗಣಿಸುತ್ತಿದ್ದಾರೆ. ಜೊತೆಗೆ, ಚೀಲದ ತೂಕದ ಲೆಕ್ಕದಲ್ಲಿ 1 ಕಿಲೋವನ್ನು ಕಳೆಯಲಾಗುತ್ತಿದೆ ಎಂದು ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಭತ್ತ ಖರೀದಿ ಕೇಂದ್ರ ತೆರೆಯದಿರುವ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಜಿಲ್ಲಾ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಸರ್. ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಕುಮಾರ್ ನೇತೃತ್ವದಲ್ಲಿ ಸೇರಿದ ಕಾರ್ಯಕರ್ತರು ನಂತರ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆಯಲ್ಲಿ ತೆರಳಿದರು.

ನಂತರ ಕಚೇರಿ ಎದುರು ಧರಣಿ ಕುಳಿತು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕಾಣೆಯಾಗಿದ್ದಾರೆ ಎಂದು ಪೋಸ್ಟರ್ ಪ್ರದರ್ಶಿಸಿ

ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮಂಡ್ಯ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿದ್ದ ಭತ್ತ ಮತ್ತು ರಾಗಿ ಬೆಳೆ ಕಟಾವು ಅಂತಿಮ ತಲುಪಿದೆ. ಸಂಕ್ರಾಂತಿ ವೇಳೆಗೆ ಭತ್ತದ ಕೊಯ್ಲು ಮತ್ತು ಒಕ್ಕಣೆ ಬಹುತೇಕ ಮುಗಿಯುತ್ತದೆ. ಆದರೆ, ಇದುವರೆಗೂ ಭತ್ತ ಖರೀದಿ ಕೇಂದ್ರಗಳು ಆರಂಭವಾಗದ ಕಾರಣ ಮುಕ್ತ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ತೀವ್ರ ಕುಸಿತ ಕಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನ್ನದಾತರಿಗೆ ಆಗುತ್ತಿರುವ ಅನ್ಯಾಯವನ್ನು ಇನ್ನೆರಡು ಮೂರು ದಿನಗಳಲ್ಲಿ ಸರಿಪಡಿಸದಿದ್ದರೆ ಜಿಲ್ಲೆಯಲ್ಲಿರುವ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ಬೀಗ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ದಪ್ಪ ಭತ್ತದ ಬೆಲೆಯು 1800- 1900 ರು., ಸಣ್ಣ ಭತ್ತದ ಬೆಲೆಯು 1900- 2000 ರು.ಗೆ ಇಳಿಕೆಯಾಗಿದೆ. ಆದರೆ, ಕೇಂದ್ರ ಸರ್ಕಾರ ಈ ಹಂಗಾಮಿನಲ್ಲಿ ಭತ್ತಕ್ಕೆ ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) 2,425 ರು. ನಿಗದಿಪಡಿಸಿದೆ. ಪ್ರಸ್ತುತ ದಲ್ಲಾಳಿಗಳು ಖರೀದಿ ಮಾಡುವ ಮೊತ್ತಕ್ಕಿಂತ ಎಂಎಸ್‌ಪಿ ಮೊತ್ತವೇ ಹೆಚ್ಚಾಗಿದೆ ಎಂದು ದೂರಿದರು.

ಬೆಂಬಲ ಬೆಲೆ ಯೋಜನೆಯಡಿ ಇನ್ನೂ ಧಾನ್ಯ ಖರೀದಿ ಕೇಂದ್ರಗಳು ಜಿಲ್ಲೆಯಲ್ಲಿ ಆರಂಭವಾಗದ ಕಾರಣ ಭತ್ತದ ದಲ್ಲಾಳಿಗಳಿಗೆ ಮಾರಾಟ ಮಾಡುವುದು ಅನಿವಾರ್ಯವಾಗಿದೆ. ಕೂಡಲೇ ಈ ಅನ್ಯಾಯಕ್ಕೆ ಜಿಲ್ಲಾಡಳಿತ ಮತ್ತು ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ದಲ್ಲಾಳಿಗಳು ಬೆಳೆಗಾರರಿಂದ ಖರೀದಿಸುತ್ತಿರುವ ಭತ್ತದ ತೂಕದಲ್ಲೂ ವ್ಯತ್ಯಾಸವಾಗುತ್ತಿದೆ. 74 ಕಿಲೋ ಹಸಿ ಭತ್ತವನ್ನು 70 ಕಿಲೋಗೆ ಹಾಗೂ ಸ್ವಲ್ಪ ಒಣಗಿರುವ 72 ಕಿಲೋ ಭತ್ತವನ್ನು 70 ಕಿಲೋಗೆ ಪರಿಗಣಿಸುತ್ತಿದ್ದಾರೆ. ಜೊತೆಗೆ, ಚೀಲದ ತೂಕದ ಲೆಕ್ಕದಲ್ಲಿ 1 ಕಿಲೋವನ್ನು ಕಳೆಯಲಾಗುತ್ತಿದೆ ಎಂದು ಕಿಡಿಕಾರಿದರು.

ಕಾರ್ಮಿಕರ ಅಭಾವದಿಂದ ಭತ್ತದ ಕಟಾವು ಮತ್ತು ಒಕ್ಕಣೆಗಾಗಿ ರೈತರು ಅನಿವಾರ್ಯವಾಗಿ ಯಂತ್ರಗಳನ್ನು ಅವಲಂಬಿಸಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಯಂತ್ರೋಪಕರಣಗಳ ಮಾಲೀಕರು, ಮಧ್ಯವರ್ತಿಗಳು ಭತ್ತ ಕಟಾವು ಮತ್ತು ಒಕ್ಕಣೆಗಾಗಿ ದುಬಾರಿ ದರ ವಸೂಲಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಕೂಡಲೇ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಬೇಕು. ಪ್ರತಿ ಕ್ವಿಂಟಲ್‌ಗೆ ಎಂಎಸ್‌ಪಿ ದರದ ಜತೆಗೆ 800 ರು. ಪ್ರೋತ್ಸಾಹ ಧನ ನೀಡಬೇಕು. ಪ್ರತಿ ಕ್ವಿಂಟಾಲ್‌ಗೆ 3000 ರು. ಬೆಂಬಲ ಬೆಲೆ ನಿಗದಿಪಡಿಸಬೇಕು. ಅಕಾಲಿಕ ಮಳೆಯಿಂದ ಭತ್ತದ ಬೆಳೆ ನಷ್ಟಕ್ಕೊಳಗಾಗಿರುವ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು. ಬಿಸಿಲಿನ ಅಭಾವದಿಂದ ಭತ್ತವನ್ನು ಒಣಗಿಸಲು ಕಷ್ಟವಾಗುತ್ತಿದೆ. ಹೀಗಾಗಿ ಖರೀದಿ ನಂತರ ಉಗ್ರಾಣಗಳಲ್ಲಿ ಬಿಸಿ ಗಾಳಿಯ ಮೂಲಕ ಭತ್ತವನ್ನು ಒಣಗಿಸಿ ರಕ್ಷಿಸುವ ಪ್ರಕ್ರಿಯೆಯನ್ನು ಖರೀದಿ ಏಜೆನ್ಸಿಗಳೇ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿಯ ಎಚ್.ಟಿ. ಮಂಜುನಾಥ್, ಅಶೋಕ್ ಕುಮಾರ್, ನಿಂಗರಾಜು, ವಿವೇಕ್, ಸಿದ್ದರಾಜು ಗೌಡ, ನಿತ್ಯಾನಂದ, ಶಿವಕುಮಾರ್ ಆರಾಧ್ಯ, ಸಚಿನ್, ಪ್ರಮೋದ್ ಆರಾಧ್ಯ, ಆನಂದ್, ಮಧು ಸೇರಿದಂತೆ ಹಲವರು ಭಾಗವಹಿಸಿದ್ದರು.