ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯಿಂದ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ, ಯೋಗ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಜ.13, 14ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಸಂಘದ ಜಿಲ್ಲಾಧ್ಯಕ್ಷ ವೀರೇಶ ಎಸ್.ಒಡೇನಪುರ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯಿಂದ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ, ಯೋಗ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಜ.13, 14ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಸಂಘದ ಜಿಲ್ಲಾಧ್ಯಕ್ಷ ವೀರೇಶ ಎಸ್.ಒಡೇನಪುರ ತಿಳಿಸಿದರು.

ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜ.13ರ ಬೆಳಿಗ್ಗೆ 10.30ಕ್ಕೆ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ್‌ ಅಧ್ಯಕ್ಷತೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕ್ರೀಡಾಕೂಟ ಉದ್ಘಾಟಿಸುವರು. ವಿಪ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ, ಕೆ.ಅಬ್ದುಲ್ ಜಬ್ಬಾರ್‌, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ, ಶಾಸಕರಾದ ಕೆ.ಎಸ್.ಬಸವಂತಪ್ಪ, ಬಿ.ಪಿ.ಹರೀಶ, ಬಸವರಾಜ ವಿ.ಶಿವಗಂಗಾ, ಬಿ.ದೇವೇಂದ್ರಪ್ಪ, ಡಿ.ಜಿ.ಶಾಂತನಗೌಡ ವಿಪ ಸದಸ್ಯರು ಭಾಗವಹಿಸುವರು ಎಂದರು.

ನಿಗಮ ಮಂಡಳಿ ಅಧ್ಯಕ್ಷರಾದ ಎನ್.ಜಯದೇವ ನಾಯ್ಕ, ಅಸಗೋಡು ಜಯಸಿಂಹ, ಎಚ್.ಬಿ.ಮಂಜಪ್ಪ, ವಡ್ನಾಳ ಜಗದೀಶ, ಶಾಮನೂರು ಟಿ.ಬಸವರಾಜ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಜಿ.ಎಚ್.ಮರಿಯೋಜಿರಾವ್‌, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್‌, ಎಸ್ಪಿ ಉಮಾ ಪ್ರಶಾಂತ, ಪಾಲಿಕೆ ಆಯುಕ್ತೆ ರೇಣುಕಾ ಪಾಲ್ಗೊಳ್ಳುವರು ಎಂದು ಹೇಳಿದರು.

ಕ್ರೀಡಾಕೂಟ, ಯೋಗ ಸ್ಪರ್ಧೆಯಲ್ಲಿ ಸುಮಾರು 2 ಸಾವಿರದಿಂದ 2,500 ಸರ್ಕಾರಿ ನೌಕರರು ಪಾಲ್ಗೊಳ್ಳುವರು. ಆನ್‌ಲೈನ್ ಮೂಲಕ ನೋಂದಣಿಗೆ ಅವಕಾಶ ನೀಡಲಾಗಿದ್ದು, ಸ್ಪರ್ಧಿಗಳಿಗೆ ಎರಡು ದಿನಗಳ ಕಾಲ ಪ್ರಯಾಣ ಭತ್ಯೆ ಹಾಗೂ ವಿಶೇಷ ಸಾಂದರ್ಭಿಕ ರಜೆ ಮಂಜೂರಾತಿಯಾಗಿದೆ. ಸ್ಪರ್ಧಿಗಳಿಗೆ ಗುಣಮಟ್ಟದ ಟಿಶರ್ಟ್ ಹಾಗೂ ಕ್ಯಾಪ್ ನೀಡಲಾಗಿದೆ. 2ನೇ ವರ್ಷದಂದು

ವಾಸುದೇವ ರಾಯ್ಕರ್ ಹಾಗೂ ಇತರೆ ಯೋಗ ಸಾಧಕರ ನೇತೃತ್ವದಲ್ಲಿ ಯೋಗ ಸ್ಪರ್ಧೆ ನಡೆಯಲಿದ್ದು, 150ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವರು. ಕಳೆದ ವರ್ಷ ನಮ್ಮ ಜಿಲ್ಲೆಯಲ್ಲಿ ಆರಂಭಿಸಿದ್ದ ಯೋಗ ಸ್ಪರ್ಧೆ ಈಗ ರಾಜ್ಯವ್ಯಾಪಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಜ.14ರಂದು ಗುಂಪು ಸ್ಪರ್ಧೆ ನಡೆಯಲಿವೆ. ಅದೇ ದಿನ ಸರ್ಕಾರಿ ನೌಕರರ ಸಮುದಾಯ ಭವನ ಹಾಗೂ ಮೇರಿ ದೇವಸ್ಯ ಸಭಾಂಗಣದಲ್ಲಿ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿವೆ. ಅದೇ ದಿನ ಸಂಜೆ 5.30ಕ್ಕೆ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಸಮಾರೋಪ ಸಮಾರಂಭ‍ವನ್ನು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಉದ್ಘಾಟಿಸಲಿದ್ದಾರೆ ಎಂದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಪರಶುರಾಮಪ್ಪ ಮಾತನಾಡಿ, 2025-26ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಸ್ಪರ್ಧಾಳು ನೌಕರರಿಗೆ ಪ್ರಯಾಣ ಭತ್ಯೆ ಹಾಗೂ ವಿಶೇಷ ಸಾಂದರ್ಭಿಕ ರಜೆ ಮಂಜೂರಾತಿ ನೀಡಿ, ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಸಮಿತಿ ಅಧ್ಯಕ್ಷರು ಆದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶ ಹೊರಡಿಸಿದ್ದಾರೆ ಎಂದರು.

ಸಂಘದ ಜಿಲ್ಲಾ ಗೌರವಾಧ್ಯಕ್ಷ ಎನ್.ಮಾರುತಿ, ಕಾರ್ಯಾಧ್ಯಕ್ಷ ಬಿ.ಪಾಲಾಕ್ಷಿ, ಖಜಾಂಚಿ ಬಿ.ಆರ್.ತಿಪ್ಪೇಸ್ವಾಮಿ, ರಾಜ್ಯ ಪರಿಷತ್ ಸದಸ್ಯ ಜಿ.ಓಬಳಪ್ಪ, ಸಾಂಸ್ಕೃತಿಕ ಕಾರ್ಯದರ್ಶಿ ಸುಧಾ, ನರೇಶ, ಸೋಮಶೇಖರಪ್ಪ ಇತರರು ಇದ್ದರು.