ಸಾರಾಂಶ
ರಾಜ್ಯ ಸರ್ಕಾರ ನೆರೆ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ನೆರೆ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ವಿರೋಧ ಪಕ್ಷದ ಉಪ ಮುಖ್ಯಸ್ಥ ಅರವಿಂದ ಬೆಲ್ಲದ ತಿಳಿಸಿದರು.
ರಬಕವಿ-ಬನಹಟ್ಟಿ : ರಾಜ್ಯ ಸರ್ಕಾರ ನೆರೆ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ನೆರೆ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. 2019ರ ನೆರೆಹಾವಳಿ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಆಗಿದ್ದ ಬಿ.ಎಸ್.ಯಡಿಯೂರಪ್ಪ ದೇಶದಲ್ಲೇ ಪ್ರಥಮ ಬಾರಿಗೆ ದಾಖಲೆಯ ಪರಿಹಾರ ನೀಡುವ ಮೂಲಕ ನೆರೆ ಸಂತ್ರಸ್ತರಿಗೆ ತಕ್ಷಣ ನೆರವು ನೀಡಿದ್ದರು ಎಂದು ವಿರೋಧ ಪಕ್ಷದ ಉಪ ಮುಖ್ಯಸ್ಥ ಅರವಿಂದ ಬೆಲ್ಲದ ತಿಳಿಸಿದರು.
ಮುಳುಗಡೆ ಗ್ರಾಮ ಅಸ್ಕಿ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಮನೆ ಕಳೆದುಕೊಂಡ ಸಂತ್ರಸ್ತರಿಗೆ ₹5 ಲಕ್ಷ ದಾಖಲೆಯ ಪರಿಹಾರ ನೀಡಿ ಉದಾರತೆ ಮೆರೆದಿದ್ದರು. ಆದರೆ ಈಗಿನ ಸರ್ಕಾರ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗುತ್ತಿಲ್ಲ. ಎಲ್ಲದಕ್ಕೂ ಕೇಂದ್ರದತ್ತ ಬೊಟ್ಟು ಮಾಡದೇ ರಾಜ್ಯ ಸರ್ಕಾರ ತಕ್ಷಣ ನೆರೆ ಸಂತ್ರಸ್ತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಕನಿಷ್ಠ ಜವಾಬ್ದಾರಿ ನಿರ್ವಹಿಸಬೇಕು. ಮುಳುಗಡೆ ಸಂತ್ರಸ್ತರು ಮನೆಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ.
ಜನಜಾನುವಾರುಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಸೂಕ್ತ ಪರಿಹಾರ ನೀಡಿ ಮುಳುಗಡೆ ಗ್ರಾಮಗಳಿಗೆ ಪುನರ್ವಸತಿ ಕೇಂದ್ರಗಳನ್ನುನಿರ್ಮಿಸಬೇಕು. ಮುಳುಗಡೆಯಾದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಿಂದಿನ ಸರ್ಕಾರ ನೀಡಿದಷ್ಟೇ ಪರಿಹಾರ ವಿತರಿಸಬೇಕೆಂದು ಆಗ್ರಹಿಸುವುದಾಗಿ ಸಂತ್ರಸ್ತರಿಗೆ ಭರವಸೆ ನೀಡಿದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ರಬಕವಿ ಬನಹಟ್ಟಿ ತಾಲೂಕಿನ ಕೃಷ್ಣಾ ನದಿ ಸಂತ್ರಸ್ತ ಗ್ರಾಮಗಳಾದ ತಮದಡ್ಡಿ, ಹಳಿಂಗಳಿ, ಮದನಮಟ್ಟಿ, ಆಸ್ಕಿ ಮತ್ತು ಕುಲಹಳ್ಳಿ, ರಬಕವಿಯ ಹೊಸಪೇಟೆ ಓಣಿಯ ಜನರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿ, ನೆರವಾಗಬೇಕಿದೆ. ಸಂತ್ರಸ್ತರಿಗೆ ತಕ್ಷಣ ಪರಿಹಾರ ವಿತರಿಸಿ ಹೆಚ್ಚಿನ ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹೆಚ್ಚಿನ ಪರಿಹಾರ ನೀಡಬೇಕೆಂದರು. ಶಾಸಕ ಸಿದ್ದು ಸವದಿ ಮಾತನಾಡಿ, ಕಳೆದ ಹತ್ತು ದಿನಗಳಿಂದ ಜಲಾವೃತ ಗೊಂಡಿರುವ ಆಸ್ಕಿ ಗ್ರಾಮದ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ವಿತರಿಸಿಲ್ಲ. ಜಾನುವಾರುಗಳಿಗೆ ಮೇವು ಪೂರೈಕೆ ಸಮರ್ಪಕವಾಗಿಲ್ಲ.
ಇನ್ನೂ ಸರ್ವೆ ನಡೆಸಿ ಬಳಿಕ ಪರಿಹಾರ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳುತ್ತಿರುವುದು ಸಂತ್ರಸ್ತರ ಬಗೆಗಿನ ಕಾಳಜಿಯನ್ನು ಎತ್ತಿ ತೋರುತ್ತದೆ. ಕೇಂದ್ರದ ಪರಿಹಾರಕ್ಕೆ ಕಾಯದೆ ರಾಜ್ಯ ಸರ್ಕಾರ ತಕ್ಷಣ ಪರಿಹಾರ ವಿತರಣೆ ಮತ್ತು ಜಾನುವಾರುಗಳಿಗೆ ಮೇವು ಪೂರೈಸಬೇಕು. ಬೆಳೆ ನೀರಲ್ಲಿ ಮುಳುಗಿರುವುದರಿಂದ ಸಂತ್ರಸ್ತ ರೈತರು ಜಾನುವಾರುಗಳನ್ನು ರಕ್ಷಿಸಲು ಹರಸಾಹಸ ಪಡುವಂತಾಗಿದೆ. ನೆರೆಹಾವಳಿಗೆ ಸ್ಪಂದಿಸಲು ವಿಫಲವಾಗಿರುವ ಸರ್ಕಾರದ ನಿಷ್ಕ್ರಿಯತೆಯನ್ನು ಖಂಡಿಸುವುದಾಗಿ ನುಡಿದರು. ಇದೇ ವೇಳೆ ಜಾನುವಾರುಗಳಿಗೆ ಸಮರ್ಪಕ ಮೇವು ದೊರೆಯುತ್ತಿಲ್ಲ ಎಂದು ಅಲ್ಲಿಯ ರೈತರು ತಮ್ಮ ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತನಗೌಡ ಪಾಟೀಲ್, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರ, ಬಸವರಾಜ್ ಯಂಕಂಚಿ, ಸತ್ಯನಾರಾಯಣ ಹೇಮಾದ್ರಿ, ಸುರೇಶ್ ಅಕ್ಕಿವಾಟ, ಪುಂಡಲೀಕ ಪಾಲಬಾವಿ,ಬಾಬಾ ಗೌಡ ಪಾಟೀಲ್, ವರ್ಧಮಾನ್ ಕೋರಿ, ಶ್ರೀಶೈಲ್ ಬೀಳಗಿ, ಬುಜುಬಲಿ ಕೆಂಗಾಲಿ ಸೇರಿದಂತೆ ತಮದಡ್ಡಿ, ಹಳಿಂಗಳಿ, ಮದನಮಟ್ಟಿ ಮತ್ತು ತೇರದಾಳದ ಧುರೀಣರು ವಿಪಕ್ಷದ ಶಾಸಕಾಂಗ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರಿಗೆ ಮನವಿ ಸಲ್ಲಿಸಿದರು.