ಸಾರಾಂಶ
ಕನ್ನಡಪ್ರಭವಾರ್ತೆ ತುರುವೇಕೆರೆ
ಬರಗಾಲದಿಂದ ತತ್ತರಿಸಿರುವ ರಾಜ್ಯದ ರೈತಾಪಿಗಳಿಗೆ ಬರ ಪರಿಹಾರ ವಿತರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವಿ.ಪ ಮುಖ್ಯ ಸಚೇತಕ ಬಿಜೆಪಿಯ ಎನ್.ರವಿಕುಮಾರ್ ಆರೋಪಿಸಿದರು.ತಾಲೂಕಿನ ಬಾಣಸಂದ್ರದ ಬಳಿ ಇರುವ ಕುಣಿಕೇನಹಳ್ಳಿ ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರಕ್ಕೆ ಭೇಟಿ ನೀಡಿದ ಅವರು ಅಲ್ಲಿ ಸಲುಹುತ್ತಿರುವ ಹಳ್ಳಿಕಾರ್ ತಳಿಯ ಆಕಳುಗಳ ಆರೈಕೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂಧರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದೆ. ರೈತಾಪಿಗಳು ಬಹಳ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಬೆಳೆ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಲು ರಾಜ್ಯ ಸರ್ಕಾರ ಕೂಡಲೇ ೧೦ ಸಾವಿರ ಕೋಟಿಯನ್ನು ಬಿಡುಗಡೆ ಮಾಡಬೇಕೆಂದು ಎನ್.ರವಿಕುಮಾರ್ ಆಗ್ರಹಿಸಿದರು.ಓಟಿನ ರಾಜಕಾರಣಕ್ಕಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ೧೦ ಸಾವಿರ ಕೋಟಿ ನೀಡಲು ಮುಂದಾಗಿದೆ. ಆದರೆ ಯಾವುದೇ ಜಾತಿಗೆ ಸೀಮಿತವಾಗದ ದೇಶದ ಬೆನ್ನೆಲುಬು ಎಂದು ಕರೆಯುವ ರೈತರಿಗೆ ೧೦ ಸಾವಿರ ಕೋಟಿ ನೀಡಲು ಹಿಂದೇಟು ಹಾಕುತ್ತಿದೆ ಎಂದು ವಿಷಾದಿಸಿದರು.
ಹಳ್ಳಿಕಾರ್ ತಳಿ:ನಶಿಸಿ ಹೋಗುತ್ತಿರುವ ಹಳ್ಳಿಕಾರ್ ತಳಿ ರಾಸುಗಳ ಸಂರಕ್ಷಣೆ ಮಾಡುವುದು ಅತ್ಯಗತ್ಯವಾಗಿದೆ. ಈ ಹಳ್ಳಿಕಾರ್ ತಳಿಗಳ ಸಂರಕ್ಷಣೆಗಾಗಿ ಮೈಸೂರು ಸಂಸ್ಥಾನದ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಸುಮಾರು ೯೨೬ ಎಕರೆ ಜಮೀನನ್ನು ಮೀಸಲಿಟ್ಟಿರುವುದು ಅವರ ದೂರದೃಷ್ಠಿತ್ವವನ್ನು ಎತ್ತಿ ತೋರಿಸುತ್ತದೆ ಎಂದರು.
ಹಳ್ಳಿಕಾರ್ ತಳಿಗಳ ಸಾಕಣೆಯಲ್ಲಿ ತೊಡಗಿರುವ ರೈತಾಪಿಗಳಿಗೆ ಸರ್ಕಾರ ಪ್ರತಿ ತಿಂಗಳು ಒಂದು ಸಾವಿರ ರು.ಗಳನ್ನು ಪ್ರೋತ್ಸಾಹವಾಗಿ ನೀಡಬೇಕು. ಅಲ್ಲದೇ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕೆಂದೂ ಸಹ ಎನ್.ರವಿಕುಮಾರ್ ಆಗ್ರಹಿಸಿದರು.ಹಿಂದೂ ರಾಷ್ಟ್ರ:
ಪ್ರಪಂಚದಲ್ಲಿ ಹಿಂದೂ ರಾಷ್ಟ್ರ ಇದ್ದರೆ ಅದು ಭಾರತ ಮಾತ್ರ. ನಮ್ಮ ಭಾರತೀಯ ಸಂಸ್ಕೃತಿಯನ್ನು ಕಾಪಾಡಿಕೊಂಡು ಬರಲು ಭಾರತೀಯ ಜನತಾ ಪಕ್ಷ ಹೋರಾಟ ಮಾಡುತ್ತಿದ್ದರೆ, ಕಾಂಗ್ರೆಸ್ ಹಿಂದೂ ರಾಷ್ಟ್ರ ಮಾಡಲು ತಡೆ ಒಡ್ಡುತ್ತಿದೆ. ಒಂದು ಸಮುದಾಯದವರ ಓಲೈಕೆಗಾಗಿ ಹಿಂದುತ್ವವನ್ನೇ ಬಲಿಕೊಡಲು ಸನ್ನದ್ಧವಾಗಿದೆ. ಭಾರತೀಯ ಸಂಸ್ಕೃತಿಯನ್ನು ಪ್ರಪಂಚದ ಎಲ್ಲಾ ದೇಶಗಳೂ ಬಹಳ ಪ್ರೀತಿಯಿಂದ ಒಪ್ಪಿದರೆ ಈ ಕಾಂಗ್ರೆಸ್ ಮಾತ್ರ ವಿರೋಧಿಸುತ್ತಿದೆ ಎಂದು ಕಿಡಿಕಾರಿದರು.ನೀವೂ ಹೇಳಿ - ದೇಶವೇ ರಾಮನ ಜಪ ಮಾಡುತ್ತಿದೆ. ಪ್ರಪಂಚಕ್ಕೆ ಒಳಿತಾಗಲಿ ಎಂದು ರಾಮ ಜಪ ಮಾಡುತ್ತಿದ್ದಾರೆ. ರಾಮನ ಹೆಸರಿನಿಂದ ಬಿಜೆಪಿಗೆ ಅನುಕೂಲವಾಗಲಿದೆ ಎಂಬ ಚಿಂತೆಗೆ ಬಿದ್ದಿರುವ ಕಾಂಗ್ರೆಸ್ ಜಗ್ಗದೇ ರಾಮನ ಜಪ ಮಾಡಲಿ. ಅವರೇ ಅದರ ಲಾಭ ಪಡೆದುಕೊಳ್ಳಲಿ ಎಂದು ಎನ್.ರವಿಕುಮಾರ್ ಕಾಂಗ್ರೆಸ್ ಗೆ ಸವಾಲೆಸೆದರು.
ಆ ೨೨ ರಂದು ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಯ ಕ್ಷಣವನ್ನು ಇಡೀ ಪ್ರಪಂಚವೇ ಕಾತರದಿಂದ ಕಾಯುತ್ತಿದೆ. ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.ದೇಶದ ಮನೆಮನೆಗಳಲ್ಲೂ ರಾಮನಾಮ ಪಠಣವಾಗಲಿದೆ. ಇದೊಂದು ಐತಿಹಾಸಿಕ ದಿನವಾಗಿ ಮಾರ್ಪಡಲಿದೆ ಎಂದು ಎನ್.ರವಿಕುಮಾರ್ ಹೇಳಿದರು. ತಾಲೂಕಿಗೆ ಆಗಮಿಸಿದ ಎನ್.ರವಿಕುಮಾರ್ ಅವರನ್ನು ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು. ಚೌಡೇನಹಳ್ಳಿಯ ಬಸವರಾಜ್ ಅವರ ಮನೆಯಲ್ಲಿ ರವಿಕುಮಾರ್ ಉಪಹಾರ ಸೇವಿಸಿದರು. ಈ ಸಂಧರ್ಭದಲ್ಲಿ ಸಿಂಡಿಕೇಟ್ ಮಾಜಿ ಸದಸ್ಯ ಸುನಿಲ್ ಪ್ರಸಾದ್, ರಾಜು, ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರದ ಉಪ ನಿರ್ದೇಶಕ ಡಾ.ಜಗದೀಶ್, ಸಹಾಯಕ ಸಿದ್ದಲಿಂಗಯ್ಯ, ಬಿಜೆಪಿ ಮುಖಂಡರಾದ ದುಂಡಾ ರೇಣುಕಯ್ಯ, ವೀರೇಂದ್ರ ಪಾಟೀಲ್, ಮಾಚೇನಹಳ್ಳಿ ಬಸವೇಶ್, ರಕ್ಷಿತ್, ಅನಿತಾ ನಂಜುಂಡಯ್ಯ, ಯೋಗಾನಂದ್, ಕುಮಾರ್, ದುರ್ಗೇಶ್, ಹರೀಶ್, ನಿಂಗರಾಜ್ ಗೌಡ, ರಾಕೇಂದ್, ಚೇನತ್, ರಾಕೇಶ್, ದಿನೇಶ್, ಮಣೀಗೌಡ ಮತ್ತು ವಸಂತ ಸೇರಿದಂತೆ ಹಲವಾರು ಮುಖಂಡರು ಇದ್ದರು.
೧೫ ಟಿವಿಕೆ ೧ತುರುವೇಕೆರೆ ತಾಲೂಕು ಕುಣಿಕೇನಹಳ್ಳಿಯ ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರಕ್ಕೆ ವಿಧಾನ ಪರಿಷತ್ ನ ಮುಖ್ಯ ಸಚೇತಕ ಎನ್.ರವಿಕುಮಾರ್ ರವರು ಭೇಟಿ ನೀಡಿದ್ದರು.