ಗೋಹತ್ಯೆ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲ

| Published : Feb 07 2024, 01:48 AM IST

ಸಾರಾಂಶ

ಬೀದರ್‌ನಲ್ಲಿ ರಾಜ್ಯ ಕಾಂಗ್ರೆಸ್‌ ವಿರುದ್ಧ ಬಿಜೆಪಿಯಿಂದ ಜಿಲ್ಲಾಧ್ಯಕ್ಷ ಸೋಮನಾಥ ನೇತೃತ್ವದಲ್ಲಿ ಜಾನುವಾರು ಸಮೇತ ಪ್ರತಿಭಟನೆ. ಗೋ ಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಿನ ಜಾರಿಗಾಗಿ ಸರ್ಕಾರಕ್ಕೆ ಶಾಸಕ ಪ್ರಭು ಚವ್ಹಾಣ್‌ ಆಗ್ರಹ. ಹಾಲಿನ ಸಹಾಯ ಧನ ಬಿಡುಗಡೆ ಮಾಡದಿದ್ರೆ ಉಗ್ರ ಹೋರಾಟ ಖಚಿತ ಎಂದು ಎಚ್ಚರಿಕೆ.

ಕನ್ನಡಪ್ರಭ ವಾರ್ತೆ ಬೀದರ್‌

ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಖಂಡಿಸಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರುವುದಕ್ಕೆ ಒತ್ತಾಯಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ಹುಡಗಿ ಅವರ ನೇತೃತ್ವದಲ್ಲಿ ಜಾನುವಾರು ಸಮೇತ ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ಪ್ರಭು ಚವ್ಹಾಣ್‌, ರಾಜ್ಯ ಸರ್ಕಾರದಿಂದ ಗೋಹತ್ಯೆ ನಿಷೇಧ ಕಾಯ್ದೆ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಗೋ ಶಾಲೆಗೆ ಸಮರ್ಪಕವಾಗಿ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದರು.

ಹೀಗೆ ರಾಜ್ಯ ಸರ್ಕಾರ ಮೂಕ ಪ್ರಾಣಿಗಳ ಮೇಲೆ ಅನ್ಯಾಯ ಮಾಡುತ್ತಿದೆ. ಬಿಜೆಪಿ ಸರ್ಕಾರವಿದ್ದಾಗ ರೈತರಿಗೆ ನೀಡಲಾಗುತ್ತಿರುವ ಹಾಲಿನ ಸಹಾಯ ಧನವನ್ನು ಈಗಿನ ರಾಜ್ಯ ಕಾಂಗ್ರೆಸ್‌ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ, ರೈತರ ನೆರವಿಗೆ ಸರ್ಕಾರ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಭಟನಾಕರರನ್ನು ಉದ್ದೇಶಿಸಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಹಾಗೂ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ನಿರ್ಲಕ್ಷಿಸಿದ್ದು ಅತ್ಯಂತ ಬೇಸರದ ಸಂಗತಿ ಎಂದು ತೀವ್ರ ಅಕ್ರೋಶ ವ್ಯಕ್ತಪಡಿಸಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನೇಕ ಕ್ರಮಗಳನ್ನು ಜರುಗಿಸಲಾಗಿತ್ತು. ಚೆಕ್‌ಪೋಸ್ಟ್‌ಗಳನ್ನು ತೆರೆದು, ಗೋವುಗಳನ್ನು ಕಸಾಯಿಖಾನೆಗಳಿಗೆ ಸಾಗಿಸದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿತ್ತು. ಈಗ ಆ ಕೆಲಸ ಆಗುತ್ತಿಲ್ಲ. ಈಗ ಸಾರ್ವಜನಿಕ ಸ್ಥಳದಲ್ಲಿ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಪರಿಶಿಷ್ಟ ಜಾತಿಯ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗಳಿಗೆ ಬಳಸಿಕೊಂಡು ಪರಿಶಿಷ್ಟ ಜಾತಿಯ ಅಭಿವೃದ್ಧಿ ಕುಂಠಿತಗೊಳಿಸಿದೆ. ರಾಜ್ಯ ಸರ್ಕಾರವು ಗೋಹತ್ಯೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಗೋಹತ್ಯೆಯನ್ನು ತಡೆದು ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.

ಬಸವಕಲ್ಯಾಣ ಶಾಸಕ ಶರಣು ಸಲಗರ ಮಾತನಾಡಿ, ಗೋವುಗಳ ಸಾಕಣೆ ಮಾಡುವವರಿಗೆ ನಮ್ಮ ಸರ್ಕಾರದ ಅವಧಿಯಲ್ಲಿ ಪ್ರೋತ್ಸಾಹ ಧನ ಕೊಡುತ್ತಿದ್ದೇವು. ಈಗ ಅದನ್ನು ಕೊಡುತ್ತಿಲ್ಲ. ಶೀಘ್ರ ಪ್ರೋತ್ಸಾಹ ಧನ ಕೊಡಬೇಕು. ಅಗತ್ಯ ಇರುವ ಕಡೆಗಳಲ್ಲಿ ಗೋಶಾಲೆ ಆರಂಭಿಸಬೇಕು. ಕಸಾಯಿಖಾನೆಗಳನ್ನು ಬಂದ್‌ ಮಾಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ ಹುಡಗಿಯವರು ಮಾತನಾಡಿ, ರಾಜ್ಯ ಸರ್ಕಾರದ ರೈತ ಮತ್ತು ದಲಿತ ವಿರೋಧಿ ನೀತಿ ಖಂಡಿಸಲಾಗುತ್ತದೆ. ರಾಜ್ಯದಲ್ಲಿ ಗೋಹತ್ಯೆ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು ಹಾಗೂ ಗೋ ಶಾಲೆಗಳಿಗೆ ಅನುದಾನ ಜಾರಿಗೊಳಿಸಿ, ಗೋರಕ್ಷಣೆ ತುರ್ತು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್‌ ಸೇವೆ ಪುನಃ ಆರಂಭಿಸಬೇಕು. ಇಲ್ಲದಿದ್ದಲ್ಲಿ ಗ್ರಾಮ ಮಟ್ಟದಲ್ಲಿ ಪಕ್ಷದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪೀರಪ್ಪ ಯರನಳ್ಳಿ, ಮಾಧವ ಹೊಸೂರೆ, ಬೀದರ್‌ ಗ್ರಾಮಾಂತರ ಘಟಕದ ಅಧ್ಯಕ್ಷ ರಾಜೇಂದ್ರ ಪೂಜಾರಿ, ನಗರ ಘಟಕದ ಅಧ್ಯಕ್ಷ ಶಶಿ ಹೊಸಳ್ಳಿ, ಔರಾದ್‌ ತಾಲೂಕು ಘಟಕ ಅಧ್ಯಕ್ಷ ಆರ್‌. ಪನ್ನಾಳೆ, ರಾಜಶೇಖರ ನಾಗಮೂರ್ತಿ, ರಾಜಕುಮಾರ ಪಾಟೀಲ್‌ ನೆಮತಾಬಾದ, ಬಾಬುರಾವ್‌ ಕಾರಬಾರಿ, ನರೇಶ ಗೌಳಿ, ವಿಕ್ರಮ ಮುಧಾಳೆ, ನಿತಿನ ನವಲಕೇರೆ, ಸಂಜು ಭೀಮನಗರ, ಭೂಷಣ ಪಾಠಕ, ರೋಷನ್‌ ವರ್ಮಾ, ವೀರೂ ದಿಗ್ವಾಲ್‌, ಹಣಮಂತ ಬುಳ್ಳಾ, ನವೀನ ಚಿಟ್ಟಾ, ಬಸವರಾಜ ಪವಾರ, ಶಿವಪುತ್ರ ವೈದ್ಯ ಹಾಗೂ ಶ್ರೀನಿವಾಸ ಚೌಧರಿ ಸೇರಿದಂತೆ ಅನೇಕ ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.