ರಸಗೊಬ್ಬರ ಪೂರೈಸುವಲ್ಲಿ ರಾಜ್ಯ ಸರ್ಕಾರ ವಿಫಲ; ಬಿಜೆಪಿ ಪ್ರತಿಭಟನೆ

| Published : Aug 01 2025, 12:30 AM IST

ರಸಗೊಬ್ಬರ ಪೂರೈಸುವಲ್ಲಿ ರಾಜ್ಯ ಸರ್ಕಾರ ವಿಫಲ; ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತರಿಗೆಂದು ಕೇಂದ್ರ ಸರ್ಕಾರ ಪೂರೈಸಿದ ರಸಗೊಬ್ಬರವನ್ನು ಸಮರ್ಪಕವಾಗಿ ವಿತರಿಸುವಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿ, ಕೃಷಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ರೈತರಿಗೆಂದು ಕೇಂದ್ರ ಸರ್ಕಾರ ಪೂರೈಸಿದ ರಸಗೊಬ್ಬರವನ್ನು ಸಮರ್ಪಕವಾಗಿ ವಿತರಿಸುವಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿ, ಕೃಷಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಎದುರಾಗಿರುವ ಯೂರಿಯಾ ಸಮಸ್ಯೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗಿದ್ದು, ಮುಂಗಾರು ಬಿತ್ತನೆ ಮುನ್ನವೇ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು. ಆದರೆ, ರೈತರ ಬಗ್ಗೆ ಯಾವುದೇ ಕಾಳಜಿಯಿಲ್ಲದ ಮುಖ್ಯಮಂತ್ರಿಗಳು ಹಾಗೂ ಕೃಷಿ ಸಚಿವರು ರಾಜ್ಯದಲ್ಲಾಗಿರುವ ರಸಗೊಬ್ಬರ ಕೊರತೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿಯೇ ರೈತರು ಯೂರಿಯಾಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ನೇತೃತ್ವ ವಹಿಸಿದ್ದ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ ಮಾತನಾಡಿ, ರೈತರಿಗೆ ಸರಿಯಾದ ಸಮಯಕ್ಕೆ ರಸಗೊಬ್ಬರ ವಿತರಣೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇಡೀ ರಾಜ್ಯದಲ್ಲಿ ಯೂರಿಯಾ ಅಭಾವದಿಂದ ರೈತರು ಕಂಗೆಟ್ಟು ಹೋರಾಟಕ್ಕೆ ಧುಮುಕಿದ್ದಾರೆ. ಕೊಪ್ಪಳದ ರೈತರೊಬ್ಬರು ಯೂರಿಯಾ ಸಕಾಲಕ್ಕೆ ಸಿಗಲಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡು ಮಣ್ಣು ತಿಂದಿದ್ದಾರೆ. ದೇಶಕ್ಕೆ ಅನ್ನನೀಡುವ ರೈತರು ಮಣ್ಣು ತಿನ್ನುವ ಪರಿಸ್ಥಿತಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ತಂದೊಡ್ಡಿದೆ. ಸರ್ಕಾರದ ಜನವಿರೋಧಿ ಧೋರಣೆ ವಿರುದ್ಧ ಬಿಜೆಪಿ ರೈತ ಮೋರ್ಚಾ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಬೀದಿಗಿಳಿದು ಹೋರಾಟಕ್ಕೆ ಧುಮುಕಿದ್ದು ಕಾಂಗ್ರೆಸ್‌ನ ನಿಷ್ಕಾಳಜಿಯ ವಿರುದ್ಧ ಚಳವಳಿಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರೈತರು, ಕಾರ್ಮಿಕರು ಸೇರಿದಂತೆ ದುಡಿವ ಜನರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಸರ್ಕಾರ ಜನವಿರೋಧಿಯಂತೆ ವರ್ತಿಸುತ್ತಿದೆ. ರೈತರಿಗೆ ಸಕಾಲಕ್ಕೆ ಬಿತ್ತನೆಬೀಜ ಹಾಗೂ ರಸಗೊಬ್ಬರ ಪೂರೈಕೆಯಾಗುತ್ತಿಲ್ಲ. ಬೆಳೆದಿರುವ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಒಂದೆಡೆ ಬೀಜ-ಗೊಬ್ಬರಕ್ಕಾಗಿ ಪರದಾಡುತ್ತಿರುವ ರೈತರು ಕೃಷಿ ಉತ್ಪನ್ನಗಳಿಗೆ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಹೆಚ್ಚುತ್ತಿರುವ ನಷ್ಟವನ್ನು ಭರಿಸಲಾಗದ ಸ್ಥಿತಿಯಲ್ಲಿ ಆತ್ಮಹತ್ಯೆಗೆ ಮೊರೆ ಹೋಗಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.ಕೂಡಲೇ ಯೂರಿಯಾ ಅಭಾವವನ್ನು ಸರ್ಕಾರ ಸರಿಪಡಿಸಬೇಕು. ಕೇಂದ್ರ ಸರ್ಕಾರದಿಂದ ಬರುವ ರಸಗೊಬ್ಬರವನ್ನು ಸರಿಯಾದ ಸಮಯಕ್ಕೆ ವಿತರಣೆ ಮಾಡಬೇಕು. ವಿನಾಕಾರಣ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವ ಕಾಂಗ್ರೆಸ್ ನಾಯಕರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಒತ್ತಾಯಿಸಿದರು.

ನಗರದ ಗಡಗಿಚನ್ನಪ್ಪ ವೃತ್ತದಿಂದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಕಚೇರಿ ಮುಂದೆ ಸಮಾವೇಶಗೊಂಡರು. ಇದೇ ವೇಳೆ ಪಕ್ಷದ ಜಿಲ್ಲಾ ಪ್ರಮುಖ ನಾಯಕರು ಹಾಗೂ ರೈತ ಮೋರ್ಚಾದ ಜಿಲ್ಲಾ ಮುಖಂಡರು ಮಾತನಾಡಿ, ರಾಜ್ಯ ಸರ್ಕಾರದ ರೈತ ವಿರೋಧಿ ನಿಲುವನ್ನು ಖಂಡಿಸಿದರು. ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ, ಜಿಲ್ಲಾಧ್ಯಕ್ಷ ಗಣಪಾಲ ಐನಾಥರೆಡ್ಡಿ, ಮುಖಂಡರಾದ ಎಚ್‌.ಹನುಮಂತಪ್ಪ, ಕೆ.ಎಂ. ಮಹೇಶ್ವರಸ್ವಾಮಿ, ಎಸ್‌.ದಿವಾಕರ, ವೆಂಕಟರಮಣ, ಸುರೇಖಾ ಮಲ್ಲನಗೌಡ, ಸಾಧನಾ ಹಿರೇಮಠ, ಸುಗುಣಾ, ಮೋಕಾ ಮುದ್ದನಗೌಡ ಸೇರಿದಂತೆ ಪಕ್ಷದ ರೈತ ಮೋರ್ಚಾದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ ಕುಮಾರ್ ಮೋಕಾ ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರಿಗೆ ಪಕ್ಷದ ಮುಖಂಡರು ಮನವಿ ಸಲ್ಲಿಸಿದರು.