ವಸೂಲಿ ಗ್ಯಾಂಗ್ ಆದ ರಾಜ್ಯ ಸರ್ಕಾರ: ಪ್ರಧಾನಿ ಮೋದಿ ಆರೋಪ

| Published : Apr 30 2024, 02:01 AM IST

ಸಾರಾಂಶ

ಬಾಗಲಕೋಟೆಯ ನವನಗರದಲ್ಲಿ ಬಿಜೆಪಿ ಸೋಮವಾರ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ರಾಜ್ಯ ಸರ್ಕಾರ ಆಡಳಿತ ನಡೆಸುವ ಬದಲು ವಸೂಲಿ ಮಾಡುವ ಗ್ಯಾಂಗ್ ರೀತಿ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯ ಸರ್ಕಾರ ಆಡಳಿತ ನಡೆಸುವ ಬದಲು ವಸೂಲಿ ಮಾಡುವ ಗ್ಯಾಂಗ್ ರೀತಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಗಂಭೀರ ಆರೋಪ ಮಾಡಿದರು.

ನವನಗರದಲ್ಲಿ ಬಿಜೆಪಿ ಸೋಮವಾರ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಎಸ್ಸಿ, ಎಸ್ಟಿ, ಒಬಿಸಿಗಳ ಮೀಸಲಾತಿ ಹಕ್ಕು ಕಸಿದು ಇತರರಿಗೆ ನೀಡುವ ಹುನ್ನಾರವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಬೆಂಗಳೂರಿನ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡರೆ ಸಿಲಿಂಡರ್ ಸ್ಫೋಟ ಎನ್ನುತ್ತಾರೆ, ಹುಬ್ಬಳ್ಳಿ ವಿದ್ಯಾರ್ಥಿನಿ ಹತ್ಯೆ ಪ್ರಕರಣದಲ್ಲಿ ಆಕೆಯ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ಮಾತನಾಡುತ್ತಾರೆ. ಖಜಾನೆಯಲ್ಲಿರುವ ನಿಮ್ಮ ದುಡ್ಡನ್ನು ಲೂಟಿ ಹೊಡೆಯುವ ಕಾಯಕದಲ್ಲಿ ನಿರತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಒಂದು ಜಿಲ್ಲೆ ಒಂದು ಉತ್ಪನ್ನದಡಿ ನೇಕಾರರ ಉತ್ಪನ್ನಗಳಿಗೆ ಆದ್ಯತೆ ನೀಡುವ ಕೆಲಸವನ್ನು ನಿಮ್ಮ ಮೋದಿ ಸರ್ಕಾರ ಮಾಡಿದೆ. ಜನರ ಬಳಿ ರಿಪೋರ್ಟ್‌ ಕಾರ್ಡ್‌ ಇಡದೇ ನಾನು ಎಂದಿಗೂ ಮಾತನಾಡುವುದಿಲ್ಲ. ಇಳಕಲ್ಲ ಸೀರೆಗೆ ಮಾರುಕಟ್ಟೆ ಒದಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಂಡಿದ್ದು, ಅಮೃತ ಭಾರತ ಯೋಜನೆಯಡಿ ಬಾಗಲಕೋಟೆ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಬಾದಾಮಿ, ಪಟ್ಟದಕಲ್ಲು, ಐಹೊಳೆ ಗಮನದಲ್ಲಿರಿಸಿಕೊಂಡು ಪ್ರವಾಸೋದ್ಯಮಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಿಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು.

ನಕಲಿ ವಿಡಿಯೋಗಳು ಸಿಕ್ಕರೆ ದೂರು ದಾಖಲಿಸಿ:

ಇದು ಸಾಮಾಜಿಕ ಜಾಲತಾಣ, ಮಾಹಿತಿ ತಂತ್ರಜ್ಞಾನ ಯುಗ. ಜಗತ್ತಿನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿದವರಲ್ಲಿ ನಿಮ್ಮ ಮೋದಿಯೂ ಒಬ್ಬ. ನಾನು ಸಾಮಾಜಿಕ ಜಾಲತಾಣವನ್ನು ಸಮಾಜ ಒಗ್ಗೂಡಿಸಲು ಬಳಸಿಕೊಂಡಿದ್ದೇನೆ. ಆದರೆ, ಎಐ ತಂತ್ರಜ್ಞಾನ ಬಳಸಿಕೊಂಡು ನನ್ನ ನಕಲಿ ಧ್ವನಿ ಸೃಷ್ಟಿಸಿ ಬಿಜೆಪಿಗೆ ಹಿನ್ನಡೆ ಆಗುವಂಥ ಕೆಲಸ ನಡೆಯುತ್ತಿದೆ. ನಿಮ್ಮ ಮೋದಿ ಏನಿದ್ದರೂ ನಿಮ್ಮ ಮುಂದೆ ಬಂದೇ ಮತ ಕೇಳುತ್ತಾನೆ. ಹಿಂದೆ ಕುಳಿತು ಮಾತನಾಡುವುದಿಲ್ಲ. ಹೀಗಾಗಿ ನಿಮ್ಮ ಗಮನಕ್ಕೆ ಅಂಥ ಯಾವುದೇ ಧ್ವನಿಸುರಳಿ, ನಕಲಿ ವಿಡಿಯೋಗಳು ಸಿಕ್ಕರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ಇಲ್ಲವೇ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಗಮನಕ್ಕೆ ತರುವಂತೆ ಮನವಿ ಮಾಡಿದ ಅವರು, ಇತ್ತೀಚೆಗೆ ಮಧ್ಯಪ್ರದೇಶದ ಚುನಾವಣೆ ವೇಳೆ ಅಮಿತಾಬ್ ಬಚ್ಚನ್ ಅವರ ಧ್ವನಿ ದುರ್ಬಳಕೆ ಮಾಡಿಕೊಂಡ ಘಟನೆಯನ್ನು ಪ್ರಸ್ತಾಪಿಸಿದರು.ಮೋಜು, ಮಸ್ತಿ ಮಾಡುವವರಿಂದ ದೇಶ ಸದೃಢವಾಗಲ್ಲ:

ಭಾರತವನ್ನು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ದೇಶವನ್ನಾಗಿಸಲು ಪಣ ತೊಟ್ಟಿದ್ದೇವೆ. ಅದು ಯಾರಿಂದ ಸಾಧ್ಯ ಎಂದು ಜನರನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದಾಗ, ಜನ ಮೋದಿ.. ಮೋದಿ... ಎಂದು ಕೂಗಿದರು. ಆಗ ನಿಮ್ಮ ವೋಟಿನಿಂದ ಅದು ಸಾಧ್ಯ. ಅದಕ್ಕಾಗಿ 24/7 ಕೆಲಸ ಮಾಡಬೇಕು. 2047ಕ್ಕೆ ಅದನ್ನು ಸಾಕಾರಗೊಳಿಸಬೇಕು. ಮೋಜು, ಮಸ್ತಿ ಮಾಡುವವರಿಂದ ಅದು ಸಾಧ್ಯವಿಲ್ಲ. ಅದಕ್ಕೆ ವ್ಹಿಜನ್ ಬೇಕು. ಜೀವನ ಮೀಸಲಿಡಬೇಕು. ನೀವು ಮತ ಕೊಟ್ಟು ಗೆಲ್ಲಿಸಿದರೆ ನಿಮ್ಮ ಮೋದಿ ಅದನ್ನು ಮಾಡಲು ಸಾಧ್ಯ ಎಂದು ಹೇಳಿದರು.

ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ಮೋದಿ:

ಕಾಂಗ್ರೆಸ್ ಪಕ್ಷದ ಧರ್ಮದ ಆಧಾರದ ರಾಜಕಾರಣದ ವಿರುದ್ಧ ಹಾಗೂ ನಿಮ್ಮ ರಕ್ಷಣೆಗಾಗಿ ಯಾವ ಹಂತಕ್ಕೂ ಬೇಕಾದರೂ ಹೋಗುತ್ತೇನೆ . ಕಾಂಗ್ರೆಸ್ ಪಕ್ಷ ತುಷ್ಟೀಕರಣದ ರಾಜಕೀಯಕ್ಕಾಗಿ ಇದ್ದರೆ ನಾನು ಜನರ ಅಗತ್ಯೆಗಳಿಗಾಗಿ ಇದ್ದೇನೆ. ಒಂದು ಕಾಲಕ್ಕೆ ಕರ್ನಾಟಕ ಟ್ಯಾಕ್ಸ್ ಹಬ್ ಆಗಿತ್ತು. ಈಗ ಟ್ಯಾಂಕರ ಹಬ್ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆದರೆ ರಾಜ್ಯದ ಕಾಂಗ್ರೆಸ್ ನಾಯಕರು ವಸೂಲಿ ಗ್ಯಾಂಗ್ ದಂಧೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ನೌಕರರಿಗೂ ವೇತನ ನೀಡಲು ಈ ಸರ್ಕಾರದಲ್ಲಿ ಹಣ ಇಲ್ಲವಾಗಿದೆ. ಖಜಾನೆ ಖಾಲಿ ಮಾಡಿರುವ ಕಾಂಗ್ರೆಸ್ ಪಕ್ಷ ಲೂಟಿ ಮಾಡಲು ಮುಂದಾಗಿದೆ. ಪಾಪ ಮತ್ತು ಲೂಟಿ ಮಾಡುವುದೇ ಕಾಂಗ್ರೆಸ್ ಪಕ್ಷದ ಹೆಗ್ಗುರುತಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರೈತರ ಆದಾಯ ದ್ವಿಗುಣ ಮಾಡಿದ್ದೇವೆ. ಜಲಜೀವನ್‌ ಯೋಜನೆ ಮೂಲಕ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರನ್ನು ಕೊಟ್ಟಿದ್ದೇವೆ. ಉಜ್ವಲಾ ಯೋಜನೆಯಡಿ ಸಿಲಿಂಡರ್, ಕಿಸಾನ್‌ ಸಮ್ಮಾನ್ ನಿಧಿ ಮೂಲಕ ರೈತರ ಖಾತೆಗೆ ನೇರ ಹಣ ಜಮೆ ಸೇರಿದಂತೆ ನಮ್ಮ ಎಲ್ಲಾ ಯೋಜನೆಗಳು ಜನರಿಗೆ ತಲುಪಿವೆ ಎಂದು ಸಮರ್ಥಿಸಿಕೊಂಡರು.

ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಾಗಲಕೋಟೆ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ, ವಿಜಯಪುರ ಅಭ್ಯರ್ಥಿ ರಮೇಶ ಜಿಗಜಿಣಗಿ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಮುರುಗೇಶ ನಿರಾಣಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸಿದ್ದು ಸವದಿ, ಜಗದೀಶ ಗುಡಗುಂಟಿ, ಪಿ.ಎಚ್. ಪೂಜಾರ, ಹಣಮಂತ ನಿರಾಣಿ, ಮಾಜಿ ಶಾಸಕರಾದ ಡಾ.ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಅಪ್ಪು ಪಟ್ಟಣಶೆಟ್ಟಿ, ಎಂ.ಕೆ. ಪಟ್ಟಣಶೆಟ್ಟಿ, ಶ್ರೀಕಾಂತ ಕುಲಕರ್ಣಿ, ಎಸ್.ಕೆ. ಬೆಳ್ಳುಬ್ಬಿ, ರೈತ ಮೋರ್ಚಾ ಅಧ್ಯಕ್ಷ, ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ವಿಜುಗೌಡ ಪಾಟೀಲ, ಬಾಗಲಕೋಟೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಟಿ. ಪಾಟೀಲ, ವಿಜಯಪುರ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೊಚಬಾಳ, ಜಿಡಿಎಸ್ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರದ, ಮುಖಂಡರಾದ ಜಗದೀಶ ಹಿರೇಮನಿ, ಬಸವರಾಜ ಯಂಕಂಚಿ ಮತ್ತಿತರರು ಇದ್ದರು.

ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ

ಬಾದಾಮಿಯ ಬನಶಂಕರಿದೇವಿ, ವಿಶ್ವಗುರು ಬಸವಣ್ಣ, ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳಿಗೆ ಪ್ರಣಾಮ ಸಲ್ಲಿಸಿ ನಮೋ ಕನ್ನಡದಲ್ಲಿ ಮಾತು ಆರಂಭಿಸಿದಾಗ ಜನರಿಂದ ಜಯಘೋಷಗಳು ಮೊಳಗಿದವು.ಭಾರತವನ್ನು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ದೇಶವನ್ನಾಗಿಸಲು ಪಣ ತೊಟ್ಟಿದ್ದು, ಅದಕ್ಕಾಗಿ 24/7 ಕೆಲಸ ಮಾಡಬೇಕು. 2047ಕ್ಕೆ ಅದನ್ನು ಸಾಕಾರಗೊಳಿಸಬೇಕು. ಮೋಜು, ಮಸ್ತಿ ಮಾಡುವವರಿಂದ ಅದು ಸಾಧ್ಯವಿಲ್ಲ. ಅದಕ್ಕೆ ವ್ಹಿಜನ್ ಬೇಕು. ಜೀವನ ಮೀಸಲಿಡಬೇಕು. ನೀವು ಮತ ಕೊಟ್ಟು ಗೆಲ್ಲಿಸಿದರೆ ನಿಮ್ಮ ಮೋದಿ ಆ ಕನಸು ನನಸು ಮಾಡಲು ಸಾಧ್ಯ.

-ನರೇಂದ್ರ ಮೋದಿ ಪ್ರಧಾನಿ