ರಾಜ್ಯ ಸರ್ಕಾರ ಜನರಿಗೆ ದ್ರೋಹ ಎಸಗಿದೆ: ಯಡಿಯೂರಪ್ಪ

| Published : May 04 2024, 12:34 AM IST

ಸಾರಾಂಶ

ಬಿಜೆಪಿ ಅಧಿಕಾರವಧಿಯಲ್ಲಿ ಜಾರಿಗೆ ತಂದ ಯೋಜನೆಗಳಿಗೆ ಬ್ರೇಕ್‌ ಹಾಕಿ ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಅನ್ಯಾಯವೆಸಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ದ್ರೋಹ ಮಾಡಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.

ಸಮೀಪದ ಮಾರಶೆಟ್ಟಿಹಳ್ಳಿಯಲ್ಲಿ ನಡೆದ ಅರಬಿಳಚಿ ಮಹಾಶಕ್ತಿ ಕೇಂದ್ರದ ವತಿಯಿಂದ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಜಾರಿಗೆ ತಂದಂತಹ ಭಾಗ್ಯ ಲಕ್ಷ್ಮೀ ಯೋಜನೆ, ಸುವರ್ಣ ಗ್ರಾಮ, ಸುವರ್ಣ ಭೂಮಿ ಯೋಜನೆಗಳನ್ನು ನಿಲ್ಲಿಸಲಾಗಿಸೆ. ಕೃಷಿ ಸಮ್ಮಾನ್ ಯೋಜನೆಯಡಿಯಲ್ಲಿ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ನಿಲ್ಲಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಜಿಲ್ಲೆಯಿಂದ ಬೆಂಗಳೂರಿಗೆ ದಿನಕ್ಕೆ ಕೇವಲ ನಾಲ್ಕು ರೈಲುಗಳು ಓಡಾಟ ಮಾಡುತ್ತಿ ದ್ದವು. ಆದರೆ ರಾಘವೇಂದ್ರ ಸಂಸದರಾದ ಮೇಲೆ ದಿನ ಒಂದಕ್ಕೆ ಇಪ್ಪತ್ತಕ್ಕೂ ಹೆಚ್ಚು ರೈಲುಗಳು ಓಡಾಟ ನಡೆಸುತ್ತಿವೆ.

ಜೊತೆಗೆ ಲಯನ್ ಸಪಾರಿಯಲ್ಲಿ ಕಾಡುಕೋಣ ಸಪಾರಿಯನ್ನು ಮಾಡುವ ಯೋಜನೆಯಿದೆ. ತ್ಯಾವರೆಕೊಪ್ಪದ ಅಭಿವೃದ್ಧಿಗೆ ಇಪ್ಪತ್ತು ಲಕ್ಷ ಅನುದಾನ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆಧ್ಯತೆ, ರೈತರು ಮತ್ತು ಕೃಷಿ ಕಾರ್ಮಿಕರಿಗೆ ವಿಶೇಷ ಯೋಜನೆಗಳ ಮೂಲಕ ಏಳಿಗೆಗಾಗಿ ಶ್ರಮಿಸಲಾಗುವುದು ಎಂದು ಹೇಳಿದರು.

ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಮಾತನಾಡಿ, ಇಡೀ ಜಿಲ್ಲೆಯ ಸಂಪೂರ್ಣ ಮಾಹಿತಿ ಹೊಂದಿರುವ ನಾಯಕ ಬಿ.ವೈ.ರಾಘವೇಂದ್ರ ಅವರಿಗೆ ಮತ್ತು ದೇಶದ ಪ್ರಧಾನಿ ಮೋದಿಯವರ ಕೈ ಬಲಪಡಿಸುವ ಸಲುವಾಗಿ ಬಿಜೆಪಿಗೆ ಮತ ನೀಡಬೇಕು ಎಂದರು.

ಶಾಸಕಿ ಶಾರದಾ ಪೂರ್ಯಾ ನಾಯ್ಕ್ ಮಾತನಾಡಿ, ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯಲ್ಲಿ ಎರಡು ಬಾರಿ ಗೆದ್ದು ಉತ್ತಮ ಆಡಳಿತ ನೀಡಿದ್ದಾರೆ. ಆದರೆ ಈ ಬಾರಿ ವಿಶೇಷ ವಾಗಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿಯಾಗಿ ರಾಘವೇಂದ್ರ ಅವರ ಗೆಲುವು ನಮ್ಮೆಲ್ಲರಿಗೂ ಒಂದು ಛಾಲೆಂಜ್ ಆಗಿದೆ. ಕೇಂದ್ರ ಮಂತ್ರಿಯಾಗುವ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶ ಶಿವಮೊಗ್ಗ ಜೆಲ್ಲೆಯ ಮತದಾರರಿಗಿದೆ. ಆ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕಿ ಶಾರದಾ ಪೂರ್ಯಾ ನಾಯ್ಕ್, ಮಾಜಿ ಶಾಸಕರಾದ ಕೆ.ಬಿ.ಅಶೋಕ್ ನಾಯ್ಕ್, ಕೆ.ಜಿ.ಕುಮಾರಸ್ವಾಮಿ, ಜೀವರಾಜ್ ಆಳ್ವ, ರಘಪತಿ ಭಟ್, ಎಂ.ಪಾಲಾಕ್ಷಪ್ಪ, ವೈದ್ಯ ಧನಂಜಯ ಸರ್ಜಿ, ಹೊಳೆಹೊನ್ನೂರು ಮಂಡಲಾಧ್ಯಕ್ಷ ಮಲ್ಲೇಶಪ್ಪ, ಎ.ಕೆ.ಮಹದೇವಪ್ಪ, ಗೀತಾ ಸತೀಶ್, ರಾಜೇಶ್ ಪಟೇಲ್, ಎಂ.ಎಸ್. ಚಂದ್ರಶೇಖರ್, ಎಪಿಎಂಸಿ ಸತೀಶ್, ಉಜ್ಜಿನಪ್ಪ, ಕಾಂತರಾಜ್, ಪುಣ್ಯಪಾಲ್, ಡಿ.ಮಂಜುನಾಥ್, ಶ್ರೀನಿವಾಸ್, ಸುಬ್ರಮಣಿ, ಜಗದೀಶ್‌ಗೌಡ, ಸಾಗರ್ ಅರಕೆರೆ, ಬಿಂದು ಸೇರಿದಂತೆ ಇತರರು ಇದ್ದರು.