ರಾಜ್ಯ ಸರ್ಕಾರ ಬಿತ್ತನೆ ಬೀಜ ದರ ಏರಿಸಿ ಜೇಬಿಗೆ ಕತ್ತರಿ : ಅಶೋಕ್ ಕುಮಾರ್

| Published : May 31 2024, 02:21 AM IST / Updated: May 31 2024, 12:43 PM IST

ರಾಜ್ಯ ಸರ್ಕಾರ ಬಿತ್ತನೆ ಬೀಜ ದರ ಏರಿಸಿ ಜೇಬಿಗೆ ಕತ್ತರಿ : ಅಶೋಕ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಒಂದು ವರ್ಷದಿಂದ ರಾಜ್ಯಾದ್ಯಂತ 175 ರಿಂದ 190 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿತ್ತು. ಅದರಲ್ಲಿ ಮಂಡ್ಯ ಜಿಲ್ಲೆಯ ಏಳು ತಾಲೂಕುಗಳು ಸೇರಿವೆ. ಘೋಷಣೆ ಮಾಡಿ 7ರಿಂದ 8 ತಿಂಗಳು ಕಳೆದರೂ ರೈತರಿಗೆ ಒಂದು ರುಪಾಯಿ ಬರ ಪರಿಹಾರ ಹಣ ಸಂದಾಯವಾಗಿಲ್ಲ.

 ಹಲಗೂರು :  ರಾಜ್ಯ ಕಾಂಗ್ರೆಸ್ ಸರ್ಕಾರ ಬಿತ್ತನೆ ಬೀಜಗಳ ದರ ಏರಿಕೆ ಮಾಡಿ ರೈತರ ಜೇಬಿಗೆ ಕತ್ತರಿ ಹಾಕುತ್ತಿರುವುದನ್ನು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಆರ್.ಅಶೋಕ್ ಕುಮಾರ್ ಖಂಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಬರಗಾಲ ಎದುರಿಸುತ್ತಿದ್ದಾರೆ. ಆದರೆ, ಸರ್ಕಾರ ಬಿತ್ತನೆ ಬೀಜಗಳ ದರ ಪರಿಸ್ಕರಣೆ ಮಾಡುವ ಆದೇಶ ಹೊರಡಿಸಿದೆ. ಬಿತ್ತನೆ ಬೀಜಗಳ ದರ ಏರಿಕೆ ಮಾಡಿ ರೈತರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಕಿಡಿಕಾರಿದರು. ರೈತರಿಗೆ ಬರಗಾಲದ ಪರಿಸ್ಥಿತಿಯಲ್ಲಿ ಪರಿಹಾರವೂ ಸರಿಯಾಗಿ ಸಿಗುತ್ತಿಲ್ಲ. ಆಯಾ ಪ್ರದೇಶಗಳಿಗೆ ಅನುಗುಣವಾಗಿ ರೈತರಿಗೆ ಬಿತ್ತನೆ ಬೀಜಗಳನ್ನು ಸರ್ಕಾರ ಉಚಿತವಾಗಿ ನೀಡಬೇಕು. ಆದರೆ, ಬಿತ್ತನೆ ಬೀಜಗಳ ದರ ಏರಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತೆಂಗು, ಅಡಿಕೆ, ತೇಗ ಮುಂತಾದ ದೀರ್ಘಾವಧಿ ಬೆಳೆಗಳು ಮಳೆಯಿಲ್ಲದೆ ಒಣಗಿವೆ. ನಮ್ಮ ಜಿಲ್ಲೆಯವರೇ ಆದ ಕೃಷಿ ಸಚಿವರು ರೈತರ ಬಗ್ಗೆ ಯಾವುದೇ ಕಾಳಜಿ ಹೊಂದಿಲ್ಲ. ರೈತರ ಬಗ್ಗೆ ನಿರ್ಲಕ್ಷದಿಂದ ಮಾತನಾಡುತ್ತಾರೆ ಎಂದು ದೂರಿದರು.

ಕಳೆದ ಒಂದು ವರ್ಷದಿಂದ ರಾಜ್ಯಾದ್ಯಂತ 175 ರಿಂದ 190 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿತ್ತು. ಅದರಲ್ಲಿ ಮಂಡ್ಯ ಜಿಲ್ಲೆಯ ಏಳು ತಾಲೂಕುಗಳು ಸೇರಿವೆ. ಘೋಷಣೆ ಮಾಡಿ 7ರಿಂದ 8 ತಿಂಗಳು ಕಳೆದರೂ ರೈತರಿಗೆ ಒಂದು ರುಪಾಯಿ ಬರ ಪರಿಹಾರ ಹಣ ಸಂದಾಯವಾಗಿಲ್ಲ ಎಂದು ಆರೋಪಿಸಿದರು.

ವಿಶ್ವೇಶ್ವರ ನಾಲೆಯ ಆಧುನಿಕರಣಕ್ಕೆ ಸರ್ಕಾರ 370 ಕೋಟಿ ರು. ಬಿಡುಗಡೆ ಮಾಡಿದೆ. ಕಾಂಗ್ರೆಸ್‌ನ ಸ್ಟಾರ್ ಚಂದ್ರು ಈ ಕಾಮಗಾರಿಗೆ ಪಾಲುದಾರರು. ಕಾಮಗಾರಿ ಶುರುವಾಗಿ ನಾಲ್ಕು ತಿಂಗಳು ಕಳೆದಿದೆ. ಶೇ.40ರಷ್ಟು ಕಾಮಗಾರಿ ನಡೆದಿದೆ. ಜೂನ್ 15ರಿಂದ ರೈತರಿಗೆ ನೀರು ಬಿಡುಗಡೆ ಮಾಡಬೇಕು. ಕಾಮಗಾರಿ ಅಪೂರ್ಣಗೊಂಡದ್ದರಿಂದ ಸಾಧ್ಯವಾಗುತ್ತಿಲ್ಲ ಎಂದರು.

ಕಳಪೆ ಕಾಮಗಾರಿ ಮಾಡಿರುವುದರಿಂದ ಅದನ್ನು ಸರ್ಕಾರ ತನಿಖೆ ಮಾಡಬೇಕು. ಗುತ್ತಿಗೆ ಹಣ ಬಿಡುಗಡೆ ಮಾಡಬಾರದು. ನಾಲೆ ಕಾಮಗಾರಿ ಪೂರ್ಣಗೊಂಡಿದ್ದರೆ ನಮ್ಮ ಹಲಗೂರು ಭಾಗಕ್ಕೆ ದಡಮನಹಳ್ಳಿ ಅಕ್ಕಪಕ್ಕ ಗ್ರಾಮಗಳಿಗೆ ನೀರು ಕೊನೆಯ ಭಾಗಕ್ಕೆ ಬರುತ್ತದೆ. ನಮಗೆ ಆ ವೇಳೆಗೆ ನಾಟಿ ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ ಎಂದರು.

ನಾಲೆ ಕಾಮಗಾರಿ ಗುಣಮಟ್ಟದಿಂದ ಮಾಡಿ ಆದಷ್ಟು ಬೇಗ ನೀರು ಹರಿಸುವ ವ್ಯವಸ್ಥೆಯಾಗಬೇಕು. ನಮ್ಮ ಭಾಗದ ರೈತರಿಗೆ ಶೀಘ್ರದಲ್ಲಿ ನೀರು ಹರಿಸಿ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎನ್.ಕೆ.ಕುಮಾರ್, ರವಿ ಮೋದಿ, ಕೃಷ್ಣೆಗೌಡ, ಬಸವರಾಜು (ಅಭಿ) ಸೇರಿದಂತೆ ಇತರರು ಇದ್ದರು.