ಕೆಆರ್‌ಎಸ್ ಅಣೆಕಟ್ಟೆಯಿಂದ ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ೮ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಪ್ರಥಮ ಆದ್ಯತೆ ಮೇರೆಗೆ ಕುಡಿಯುವ ನೀರಿಗೆ ಪ್ರಾಮುಖ್ಯತೆ ನೀಡಿ ನಾಲೆಗಳ ಕಡೇ ಭಾಗಕ್ಕೆ ನೀರು ಹರಿಸಲು ಕ್ರಮ ವಹಿಸಲಾಗುವುದು.
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಕೆಆರ್‌ಎಸ್ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಬೆಳೆಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಸಕಾಲಿಕ ನೀರು ಹರಿಸಲು ಕ್ರಮ ವಹಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ-ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಬೆಳೆ ರಕ್ಷಣೆಗೆ ಅಗತ್ಯವಿರುವ ಕೆರೆ-ಕಟ್ಟೆಗಳಿಗೆ ನೀರು ಹರಿಸಲು ಕ್ರಮ ವಹಿಸುತ್ತೇವೆ. ಈ ಬಗ್ಗೆ ರೈತರು ಆತಂಕಪಡುವ ಅಗತ್ಯವಿಲ್ಲ ಎಂದರು.
ಕೆಆರ್‌ಎಸ್ ಅಣೆಕಟ್ಟೆಯಿಂದ ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ೮ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಪ್ರಥಮ ಆದ್ಯತೆ ಮೇರೆಗೆ ಕುಡಿಯುವ ನೀರಿಗೆ ಪ್ರಾಮುಖ್ಯತೆ ನೀಡಿ ನಾಲೆಗಳ ಕಡೇ ಭಾಗಕ್ಕೆ ನೀರು ಹರಿಸಲು ಕ್ರಮ ವಹಿಸಲಾಗುವುದು ಎಂದರು.ಅತಿವೃಷ್ಟಿ-ಅನಾವೃಷ್ಟಿ ಸಾಮಾನ್ಯ:
ಪ್ರತಿ ೩ ರಿಂದ ೫ ವರ್ಷಕ್ಕೊಮ್ಮೆ ಅತಿವೃಷ್ಟಿ ಮತ್ತು ಅನಾವೃಷ್ಟಿ ಗೋಚರಿಸುವುದು ಸರ್ವೇ ಸಾಮಾನ್ಯ ಪ್ರಕ್ರಿಯೆಯಾಗಿದೆ. ಕೇಂದ್ರ ಹವಾಮಾನ ಇಲಾಖೆ ವರದಿ ಆಧರಿಸಿ ಅಗತ್ಯಬಿದ್ದರೆ ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ರೈತರಿಗೆ ಪರಿಹಾರ ಒದಗಿಸಲು ಸರ್ಕಾರ ಮುಂದಾಗಲಿದೆ ಎಂದರು.ಶಾಸಕ ಹ್ಯಾರಿಸ್ ಮನೆ ಮೇಲೆ ಇಡಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಿಟ್ ಕಾಯಿನ್ ವಿಚಾರವಾಗಿ ದಾಳಿ ನಡೆದಿರಬಹುದು ಎನ್ನಲಾಗುತ್ತಿದೆ. ಹಲವೆಡೆ ರಾಜಕೀಯ ಕಾರಣಗಳಿಗೂ ಇಡಿ ದಾಳಿ ಪ್ರಕರಣಗಳು ನಡೆಯುತ್ತವೆ. ಆದರೆ, ಅದರಿಂದ ಯಾವುದೇ ತೊಂದರೆ ಇಲ್ಲ ಎಂದರು.
ವಸತಿ ಸಚಿವ ಜಮೀರ್ ಅಹಮದ್ ಖಾನ್ ಮರಳಿ ಜಾ.ದಳ ಸೇರ್ಪಡೆಯಾಗುತ್ತಾರೆಂಬ ವರದಿಗಳು ಊಹಾಪೋಹವಾಗಿದ್ದು, ದಾವಣಗೆರೆ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಕುರಿತು ಮುಸ್ಲಿಂ ಮುಖಂಡರ ಬಗ್ಗೆ ಪಕ್ಷದ ಹೈಕಮಾಂಡ್ ಗಮನಹರಿಸಲಿದೆ ಎಂದು ಹೇಳಿದರು.ಜನಗಣತಿ ಪ್ರಗತಿ ಪರಿಶೀಲನೆ
ಮಂಡ್ಯ: ಜಿಲ್ಲೆಯಲ್ಲಿ ಡಿಜಿಟಲ್ ಮಾದರಿಯಲ್ಲಿ ನಡೆಯುತ್ತಿರುವ ಜನಗಣತಿ ಕಾರ್ಯವನ್ನು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹಲವು ಮನೆಗಳಿಗೆ ಭೇಟಿ ನೀಡಿ ಜನ ಗಣತಿ ಪ್ರಗತಿಯನ್ನು ಪರಿಶೀಲಿಸಿದರು. ಜನಗಣತಿ ಪ್ರಕ್ರಿಯೆಯು ನಿಖರ ಮತ್ತು ಸುಗಮವಾಗಿ ನಡೆಯಲು ಜನಗಣತಿದಾರರು ಮನೆ ಮನೆಗೆ ಭೇಟಿ ನೀಡಿದಾಗ ಸಾರ್ವಜನಿಕರು ನಿಖರವಾದ ಮಾಹಿತಿ ನೀಡಿ ಸಹಕರಿಸಬೇಕು ಎಂದು ಸಲಹೆ ನೀಡಿದರು. ಮಂಡ್ಯ ಉಪ ವಿಭಾಗಾಧಿಕಾರಿ ಎಂ. ಶಿವಮೂರ್ತಿ, ನಗರಸಭೆ ಆಯುಕ್ತೆ ಯು.ಪಿ. ಪಂಪಾಶ್ರೀ ಹಾಗೂ ಅಧಿಕಾರಿಗಳು ಹಾಜರಿದ್ದರು.