ರಾಜ್ಯ ಸರ್ಕಾರ ಅರ್ಥಿಕವಾಗಿ ದಿವಾಳಿಯಾಗಿದೆ: ಗೋವಿಂದ ಎಂ.ಕಾರಜೋಳ

| Published : Feb 19 2025, 12:50 AM IST

ಸಾರಾಂಶ

ಅಭಿವೃದ್ಧಿ ಹೆಸರಿನಲ್ಲಿ ರಾಜ್ಯ ಸರ್ಕಾರ ಕೋಟ್ಯಂತರ ರು.ಗಳ ಸಾಲ ಮಾಡಿದ್ದು ಸಾಲ ತೀರಿಸಲು ಮತ್ತೆ ಸಾಲದ ಮೊರೆ ಹೋಗಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ರಾಜ್ಯದಲ್ಲಿ ಗ್ಯಾರಂಟಿಗಳಿಗೆ ಮಾಡಿದ ಹಣ ತೀರಿಸಲು ರಾಜ್ಯ ಸರ್ಕಾರ ಮತ್ತೆ ಸಾಲದ ಮೊರೆಹೋಗಿದ್ದು, ಸರ್ಕಾರದಲ್ಲಿ ಹಣವಿಲ್ಲದೇ ದಿವಾಳಿ ಎದ್ದಿದೆ. ಇನ್ನೂ ಎಲ್ಲಿ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿದೆ ಎಂದು ಮಾಜಿ ಡಿಸಿಎಂ ಹಾಗೂ ಚಿತ್ರದುರ್ಗ ಲೋಕಸಭೆ ಸಂಸದ ಗೋವಿಂದ ಎಂ.ಕಾರಜೋಳ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಅವರು ಭಾನುವಾರ ತಾಲೂಕಿನ ಚಿಕ್ಕಹಳ್ಳಿಯ ಶ್ರೀ ಗಣೇಶ ದೇವಸ್ಥಾನದ ಪ್ರಾರಂಭೋತ್ಸವ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ರಾಜ್ಯ ಸರ್ಕಾರ ಕೋಟ್ಯಂತರ ರು.ಗಳ ಸಾಲ ಮಾಡಿದ್ದು ಸಾಲ ತೀರಿಸಲು ಮತ್ತೆ ಸಾಲದ ಮೊರೆ ಹೋಗಿದೆ. ಇಂತಹ ಕೆಟ್ಟ ಸರ್ಕಾರ ನಾನು ಎಂದೂ ನೋಡಿರಲಿಲ್ಲ. ಪಂಚ ಗ್ಯಾರಂಟಿಗಳಿಗೆ ಹಣ ಒದಗಿಸಲು ಹರಸಾಹಸ ಪಡುತ್ತಿದ್ದು, ಸರ್ಕಾರದ ಖಚಾನೆಯಲ್ಲಿ ಹಣವಿಲ್ಲ. ಸರ್ಕಾರ ಅರ್ಥಿಕವಾಗಿ ದಿವಾಳಿಯ ಹಂಚಿನಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಪ್ರಗತಿ ನಿರೀಕ್ಷಿಸಲು ಹೇಗೆ ಸಾಧ್ಯ ಎಂದು ಆರೋಪಿಸಿದರು.

ರಾಜ್ಯದ ಪ್ರಗತಿ ಹೆಸರಿನಲ್ಲಿ ಟೆಂಡರ್‌ ಪ್ರಕ್ರಿಯೆ ಅನ್ವಯ ಕಾಮಗಾರಿ ನಿರ್ವಹಿಸಿದ್ದು ಪೂರ್ಣಗೊಂಡ ಕಾಮಗಾರಿಗಳಿಗೆ ಸುಮಾರು 50 ಸಾವಿರ ಕೋಟಿ ಬಿಲ್ಲು ಹಣ ಗುತ್ತಿಗೆದಾರರಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಕೆಲಸ ನಿರ್ವಹಿಸಿದ ಗುತ್ತಿಗೆದಾರರು ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಈ ಸಂಬಂಧ ಕೆಲಸ ನಿರ್ವಹಿಸಿದ ಗುತ್ತಿಗೆದಾರರಿಗೆ ಉತ್ತರಿಸಲು ಸಾಧ್ಯವಾಗದೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ. ಇಂತಹ ಪರಿಸ್ಥಿತಿ ನಿಜಕ್ಕೂ ರಾಜ್ಯದ ದುರಂತ ಹಾಗೂ ಜನಪರ ಸಮಸ್ಯೆಗೆ ಸ್ಪಂದಿಸದಂತಹ ಅತ್ಯಂತ ಕೆಟ್ಟ ಸರ್ಕಾರ ಇದಾಗಿದೆ ಎಂದರು.ತಾಲೂಕು ಜೆಡಿಎಸ್‌ ಕಾರ್ಯಾಧ್ಯಕ್ಷ ಹಾಗೂ ಸಮಾಜ ಸೇವಕ ಸೊಗಡು ವೆಂಕಟೇಶ್ ಮಾತನಾಡಿ ತುಮಕೂರು ರಾಯದುರ್ಗ ರೈಲ್ಪೆ ಕಾಮಗಾರಿಯ ಪ್ರಗತಿಯ ವೇಗ ಹೆಚ್ಚಳ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಪ್ರಗತಿ ಹಾಗೂ ಇಲ್ಲಿನ ಐತಿಹಾಸಿಕ ಹಿನ್ನಲೆಯ ರಾಮತೀರ್ಥದ ಶ್ರೀರಾಮ ದೇವಸ್ಥಾನದ ಪ್ರಗತಿಗೆ ಅನುದಾನ ಮತ್ತು ರಾಜಮಹಾರಾಜರ ಆಳ್ವಿಕೆಗೆ ಒಳಪಟ್ಟು ಅಪಾರ ಸಂಖ್ಯೆಯ ದೇವಸ್ಥಾನ ಹೊಂದಿದ ಭಕ್ತರ ಅಕರ್ಷಣೀಯ ತಾಣವಾದ ತಾ,ನಿಡಗಲ್‌ ದುರ್ಗವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸಲು ಸಹಕರಿಸುವಂತೆ ಸಂಸದ ಗೋವಿಂದ ಕಾರಜೋಳರಲ್ಲಿ ಮನವಿ ಮಾಡಿದರು. ಇದೇ ವೇಳೆ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ,ಹಿರಿಯ ಮುಖಂಡರಾದ ಎನ್‌.ತಿಮ್ಮಾರೆಡ್ಡಿ,ತಾಲೂಕು ಜೆಡಿಎಸ್‌ ಅಧ್ಯಕ್ಷ ಎನ್‌.ಎ.ಈರಣ್ಣ,ಹಾಗೂ ಬಿಜೆಪಿ ಮುಖಂಡರಾದ ಡಾ.ಜಿ.ವೆಂಕಟರಾಮಯ್ಯ,ರವಿಶಂಕರನಾಯಕ್‌ ಹಾಗೂ ಜೆಡಿಎಸ್‌ ವಕ್ತಾರ ಅಕ್ಕಲಪ್ಪನಾಯ್ಡ್‌ ಸೇರಿದಂತೆ ಇತರೆ ಅನೇಕ ಮಂದಿ ಇಲ್ಲಿನ ಜೆಡಿಎಸ್‌ ಹಾಗೂ ಬಿಜೆಪಿ ಮುಖಂಡರು ಹಾಗೂ ಸ್ಥಳೀಯ ಶ್ರೀ ಗಣೇಶ ದೇವಸ್ಥಾನ ಸಮಿತಿಯ ಅಧ್ಯಕ್ಷರು,ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ಫೋಟೋ 16ಪಿವಿಜಿ3ಪಾವಗಡ,ತಾಲೂಕಿನ ಚಿಕ್ಕಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಗಣೇಶ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಈ ಭಾಗದ ಸಂಸದ ಗೋವಿಂದ ಎಂ.ಕಾರಜೋಳ ಹಾಗೂ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ,ಮುಖಂಡ ಸೊಗಡು ವೆಂಕಟೇಶ್‌ ಭಾಗವಹಿಸಿ ಮಾತನಾಡಿದರು.