ಹೂವಿನಹಡಗಲಿ: ರಾಜ್ಯದಲ್ಲಿ ಮಳೆ ಇಲ್ಲದೇ ಬೆಳೆಗಳು ಒಣಗಿ ರೈತರು ಭೀಕರ ಬರಕ್ಕೆ ತುತ್ತಾಗಿದ್ದಾರೆ. ರೈತರ ಹಿತ ಕಾಯಬೇಕಿದ್ದ ರಾಜ್ಯ ಸರ್ಕಾರ ದೆಹಲಿಯಲ್ಲಿ ಹನಿಮೂನ್ ಮೂಡ್‌ನಲ್ಲಿದೆ ಎಂದು ಶಾಸಕ ಕೃಷ್ಣನಾಯ್ಕ ಲೇವಡಿ ಮಾಡಿದ್ದಾರೆ.
ಪಟ್ಟಣದ ಮದಲಗಟ್ಟ ವೃತ್ತದಿಂದ ಮುಖ್ಯಯಿಂದ ಲಾಲ್ ಬಹದ್ಧೂರ್ ಶಾಸ್ತ್ರಿ ವೃತ್ತದ ವರೆಗೂ ಬಿಜೆಪಿ ಪಾದಯಾತ್ರೆ ಮೂಲಕ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.ರಾಜ್ಯದಲ್ಲಿ ರೈತರು ಎಕರೆಗೆ ₹40 ರಿಂದ ₹45 ಸಾವಿರ ಖರ್ಚು ಮಾಡಿ ಬಿತ್ತಿದ ಬೆಳೆಯ ಒಂದು ಕಾಳೂ ಫಸಲು ಬರದಂತಹ ಸ್ಥಿತಿ ಇದೆ. ಕೃಷಿ ಅವಲಂಬಿತ ಈ ಕ್ಷೇತ್ರದಲ್ಲಿ ರೈತರಿಗೆ ಕೆಲಸವೂ ಇಲ್ಲದೇ, ಗುಳೆ ಹೊರಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ರಾಜ್ಯ ಸರ್ಕಾರದ ಸಚಿವರು ಖಾತೆಗಾಗಿ ದೆಹಲಿಯಲ್ಲಿ ಬೀಡು ಬಿಟ್ಟು ಹನಿಮೂನ್ ಮಾಡುತ್ತಿದ್ದಾರೆ. ಕೃಷಿ ಸಮಸ್ಯೆ ಕೇಳಲು ಈವರೆಗೂ ಸಚಿವರು ಯಾರು ಎಂಬುದು ಗೊತ್ತಿಲ್ಲ, ಆದರಿಂದ ಬಿಜೆಪಿ ಇಂದು ರೈತರ ಪರವಾಗಿ ನಿಂತಿದೆ. ಈ ಕೂಡಲೇ ರಾಜ್ಯ ಸರ್ಕಾರ ಹೂವಿನಹಡಗಲಿ ಕ್ಷೇತ್ರವನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಬೆಳೆನಷ್ಟವಾಗಿರುವ ರೈತರ ಎಕರೆಯೊಂದಕ್ಕೆ 50 ಸಾವಿರ ಬೆಳೆ ಪರಿಹಾರ ನೀಡಬೇಕು. ಬೆಳೆ ಸಾಲ ಮನ್ನಾ ಮಾಡಬೇಕು. ಕುಡಿಯುವ ನೀರು ಮತ್ತು ಮೇವು ಖರೀದಿ ಸೇರಿದಂತೆ ಬರ ನಿರ್ವಹಣೆಗಾಗಿ ಕೂಡಲೇ ಪ್ರತಿ ಕ್ಷೇತ್ರಕ್ಕೂ ₹50 ಕೋಟಿ ಅನುದಾನ ಬಿಡುಗಡೆ ಮಾಡಲಿ. ರೈತರ ಬೆಳೆ ವಿಮೆ ಹಣ ಕೂಡಲೇ ಬಿಡುಗಡೆಗೆ ಒತ್ತಾಯಿಸಿದರು.ರೈತರು ಮಳೆ ಕೈ ಕೊಟ್ಟ ಪರಿಣಾಮ ಕಂಗಾಲಾಗಿದ್ದಾರೆ. ಬದುಕಿನ ನಿರ್ವಹಣೆಗಾಗಿ ಮಕ್ಕಳು ಮರಿಗಳನ್ನು ಕಟ್ಟಿಕೊಂಡು ಬಸ್ಸು, ಲಾರಿಗಳಲ್ಲಿ ಕಾಫಿ ಸೀಮೆ, ಮಲೆನಾಡು ಹಾಗೂ ಗೋವಾದಂತಹ ಪ್ರದೇಶಕ್ಕೆ ಗುಳೆ ಹೊರಟಿದ್ದಾರೆ. ಗುಳೆ ಹೋದ ಪಾಲಕರ ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡುವ ಜತೆಗೆ ಆ ಮಕ್ಕಳು ಉಳಿದುಕೊಳ್ಳಲು ತಾಲೂಕು ಕೇಂದ್ರದಲ್ಲಿ ವಿಶೇಷ ಹಾಸ್ಟೆಲ್ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಸಂಜೀವ ರಡ್ಡಿ, ಉಪಾಧ್ಯಕ್ಷ ಶಶಿಧರ ಹಣ್ಣಿ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್, ಈಟಿ ಲಿಂಗರಾಜ, ಎಂ. ಬಸವರಾಜ, ಡಿ. ಪುನೀತ, ಶಿರಾಜ ಬಾವಿಹಳ್ಳಿ, ಹುಲುಗೇಶ ಮೇಟಿ, ಎನ್. ಕೋಟೆಪ್ಪ, ಕೋಡಿಹಳ್ಳಿ ಕೊಟ್ರೇಶ, ಟಿ. ಮಹಾಂತೇಶ, ಎಸ್. ಬಸವರಾಜ, ಮಂಜುನಾಥ ಜೈನ್, ಕೋಡಬಾಳ ಚಂದ್ರಪ್ಪ, ಕೊಟ್ರೇಶ ನಾಯ್ಕ, ಆರ್.ಟಿ. ನಾಗರಾಜ, ಉಚ್ಚೆಂಗಪ್ಪ, ಕೆ. ಪುತೇಶ, ಬಿ. ಶಂಕರ, ವೀರಯ್ಯ, ಪತ್ರೇಶ, ಎಂ. ವಿಶ್ವನಾಥ, ಮೀರಬಾಯಿ, ಶಕುಂತಲ, ಟಿ. ಸೌಮ್ಯಾ ಸೇರಿದಂತೆ ಇತರರು, ತಹಸೀಲ್ದಾರ್ ಕೆ.ಎಂ. ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಿದರು.
ಹೂವಿನಹಡಗಲಿ ತಾಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಲು ಆಗ್ರಹಿಸಿ ಹೂವಿನಹಡಗಲಿಯ ಲಾಲ್ ಬಹದ್ಧೂರ್ ಶಾಸ್ತ್ರಿ ವೃತ್ತದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.