ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಬಿಜೆಪಿ ಸರ್ಕಾರವು ವಾಲ್ಮೀಕಿ ಜಯಂತಿ ಮತ್ತು ಅಭಿವೃದ್ದಿ ನಿಗಮ ಸ್ಥಾಪಿಸಿದರೆ, ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ಹೆಸರಿನಲ್ಲಿ ಹಗರಣ, ಅನುದಾನ ಲೂಟಿ ಮಾಡಿ ಪರಿಶಿಷ್ಟ ಜನಾಂಗದ ಅಭಿವೃದ್ಧಿಗೆ ಕೊಡಲಿಪೆಟ್ಟು ಹಾಕಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಹೇಳಿದರು.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಸಮಾಜ ಒಡೆಯುವ ಜತೆಗೆ ರಾಜಕೀಯ ದಾಳವಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿಷಾಧಿಸಿದರು.
ನೈಜವಾಗಿ ತುಳಿತಕ್ಕೆ ಒಳಗಾದ ಹಾಗೂ ಸಂತ್ರಸ್ಥರಿಗೆ ದೊರೆಯಬೇಕಾದ ಸೌಲಭ್ಯಗಳು, ಉಳ್ಳವರ ಪಾಲಾಗುತ್ತಿವೆ. ಸಮಾಜದಲ್ಲಿ ಅಸಹಾಯಕ ಪರಿಶಿಷ್ಟರನ್ನು ಸಬಲರಾಗಿಸುವ ಬದಲು, ರಾಜ್ಯ ಸರ್ಕಾರ ದುರ್ಬಲಗೊಳಿಸಿ ಬಡ ವರ್ಗದ ಜನತೆಯನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ವಾಲ್ಮೀಕಿಯವರ ಹಿರಿಮೆಯನ್ನು ಗುರುತಿಸಿ ಅಂದಿನ ಪ್ರಧಾನಿ ವಾಜಪೇಯಿ ಎಸ್ಟಿ ಮಂತ್ರಾಲಯ ಸ್ಥಾಪಿಸಿದ್ದರು. ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆಗೆ ತಂದು ಜನಾಂಗವನ್ನು ಒಗ್ಗೂಡಿಸಲು ಹೆಜ್ಜೆಯಿಟ್ಟಿತು ಎಂದು ತಿಳಿಸಿದರು.
ಕ್ಷೇತ್ರದಲ್ಲಿ ವಾಲ್ಮೀಕಿ ಜನಾಂಗದ ಅಭಿವೃದ್ದಿಗೆ 3.99 ಕೋಟಿ ರು. ವೆಚ್ಚದಲ್ಲಿ ಸಮುದಾಯ ಭವನಕ್ಕೆ ಅನುದಾನ ಒದಗಿಸಿ ಶೇ.99 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಹುಲಿಕೆರೆ, ನಾಗರಾಳು ಹಾಗೂ ಕುನ್ನಾಳು ಗ್ರಾಮದಲ್ಲಿ ಭವನದ ಕಾಮಗಾರಿ ಅರ್ಧವಾಗಿದೆ. ರಾಜ್ಯ ಸರ್ಕಾರ ಶೀಘ್ರವೇ ಕಾಮಗಾರಿ ಮುಗಿಸಿ ಲೋಕಾರ್ಪಣೆಗೊಳಿಸಬೇಕು ಎಂದರು.ಇಂದಿನ ದಿನದಲ್ಲಿ ಸರ್ಕಾರಿ ಬಸ್‌ಗಳ ಆಸನವನ್ನೇ ಬಿಟ್ಟುಕೊಡುವುದಿಲ್ಲ. ಆದರೆ, ಶ್ರೀರಾಮನು ಕ್ಷಣ ಮಾತ್ರ ಆಲೋಚಿಸದೇ ಅಯೋಧ್ಯೆಯ ಸಿಂಹಾಸನವನ್ನು ತ್ಯಾಗ ಮಾಡಿ ವನವಾಸಕ್ಕೆ ತೆರಳಿದ ಕಾರಣವೇ ಇಂದಿಗೂ ಜನಮಾನಸದಲ್ಲಿ ಶ್ರೀರಾಮನು ಮರ್ಯಾದಾ ಹಾಗೂ ಆದರ್ಶ ಪುರುಷನಾದ ಕಾರಣ ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂದರು.
ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ನಂದೀಶ್ ಮದಕರಿ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಜೋಡಿಸಿದ ಸಂತ ಮಹರ್ಷಿ ವಾಲ್ಮೀಕಿ. ರಾಮಾಯಣ ಕೃತಿ ರಚಿಸಿ ವಿಶ್ವದಾದ್ಯಂತ ಶ್ರೀರಾಮನ ಆದರ್ಶ ಹಾಗೂ ಜೀವಿತಾವಧಿ ಮೌಲ್ಯಗಳನ್ನು ಪರಿಚಯಿಸಿದವರು ಎಂದು ಹೇಳಿದರು.ರಾಜ್ಯದ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ಜನಾಂಗಕ್ಕೆ ಮೀಸಲಿಟ್ಟ 187 ಕೋಟಿ ರು. ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡು ದ್ರೋಹ ಮಾಡಿದೆ. ಹಾಗಾಗಿ ಮುಂಬರುವ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಜನಾಂಗವು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ, ಇಂದಿನ ಆಧುನಿಕ ಜಗತ್ತಿನಲ್ಲಿ ಸೀರಿಯಲ್‌ಗಳ ನಡುವೆ ಭಾರತೀಯ ಸಂಸ್ಕೃತಿಯ ರಾಮಾಯಣ, ಮಹಾಭಾರತದಂತಹ ಕಥೆಗಳನ್ನು ಮರೆಯಾಗುತ್ತಿವೆ ಎಂದರು.ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬೆಳವಾಡಿ ರವೀಂದ್ರ, ಜಿಲ್ಲಾ ಉಪಾಧ್ಯಕ್ಷ ಕನಕರಾಜ್ ಅರಸ್, ಈಶ್ವರಹಳ್ಳಿ ಮಹೇಶ್, ನಗರಾಧ್ಯಕ್ಷ ಪುಷ್ಪರಾಜ್ , ಜಿಲ್ಲಾ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಮಧುಕುಮಾರ್, ಎಂ.ಟಿ. ಶಂಕರ್, ಗ್ರಾಮಾಂತರ ಮಂಡಲ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತಾ ಅನಿಲ್ ಕುಮಾರ್, ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಹಾಜರಿದ್ದರು.