ಸಾರಾಂಶ
ಯಲಬುರ್ಗಾ: ಹೂಗಾರ ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ಹಲವಾರು ಬಾರಿ ಮನವಿ ಮಾಡಿದರೂ ಕನಿಷ್ಠ ಪಕ್ಷ ಸ್ಪಂದನೆ ಮಾಡುತ್ತಿಲ್ಲ ಎಂದು ಹೂಗಾರ ಸಮಾಜದ ತಾಲೂಕಾಧ್ಯಕ್ಷ ಬಸವರಾಜ ಹೂಗಾರ ಹೇಳಿದರು.
ಪಟ್ಟಣದ ಬುದ್ಧ, ಬಸವ, ಅಂಬೇಡ್ಕರ್ ಭವನದಲ್ಲಿ ಅಖಿಲ ಕರ್ನಾಟಕ ಹೂಗಾರ ಮಹಾಸಭಾದ ಯಲಬುರ್ಗಾ-ಕುಕನೂರು ತಾಲೂಕು ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ಶರಣ ಹೂಗಾರ ಮಾದಯ್ಯನವರ ಜಯಂತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೂಗಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದರೂ ಹಾಲಿ ಕಾಂಗ್ರೆಸ್ ಸರ್ಕಾರ ನಯಾ ಪೈಸೆ ಅನುದಾನ ಬಿಡುಗಡೆ ಮಾಡದೆ ಹೂಗಾರ ಸಮಾಜವನ್ನು ನಿರ್ಲಕ್ಷ ಮಾಡಿದೆ. ಇದು ಸಮಾಜಕ್ಕೆ ಮಾಡಿದ ಅನ್ಯಾಯ. ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ನಡೆಸುತ್ತಿರುವ ಸಿಎಂಗೆ ಕಾಯಕ ಸಮಾಜಗಳ ಬಗ್ಗೆ ಗೌರವ ಇಲ್ಲದಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ. ನಮ್ಮ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು, ಸಂಸದರು ಬಾರದಿರುವುದು ನೋವಿನ ಸಂಗತಿ. ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಚುನಾವಣೆಯಲ್ಲಿ ಶಕ್ತಿ ಪ್ರದರ್ಶನ ಮಾಡಬೇಕಾಗಿದೆ ಎಂದರು.
ಹೂಗಾರ ಸಮಾಜ ಹೂ ಕಟ್ಟುವ ಮೂಲಕ ಬದುಕು ನಡೆಸುತ್ತಿದೆ. ಹೀಗಾಗಿ ಸಮಾಜದ ಮಕ್ಕಳಿಗೆ ಉನ್ನತ ಶಿಕ್ಷಣ ದೊರಕಿಸಿ ಕೊಡಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ನಾನಾ ಸೌಲಭ್ಯಗಳಿಂದ ಸಮಾಜವು ವಂಚಿತವಾಗುತ್ತಿದೆ. ದೇವಸ್ಥಾನಗಳನ್ನು ಪೂಜೆ ಮಾಡಿಕೊಂಡು ಬಂದರೂ ಸರ್ಕಾರ ತಸ್ತಿಕ್ ಭತ್ಯೆ ಮಂಜೂರು ಮಾಡುವಲ್ಲೂ ಮೀನಮೇಷ ಎಣಿಸುತ್ತಿದೆ ಎಂದರು.ಸಂಸ್ಥಾನ ಹಿರೇಮಠದ ಶ್ರೀಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀಧರ ಮುರಡಿ ಹಿರೇಮಠದ ಶ್ರೀಬಸವಲಿಂಗೇಶ್ವರ ಸ್ವಾಮೀಜಿ, ಶಿರಗುಂಪಿಯ ಕರಿಬಸವೇಶ್ವರ ದೇವಸ್ಥಾನದ ಮಾತೋಶ್ರೀ ನೀಲಮ್ಮ ಹೂಗಾರ ಸಾನ್ನಿಧ್ಯ ವಹಿಸಿದ್ದರು.
ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ, ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ ಮಾತನಾಡಿದರು. ಹೂಗಾರ ಸಮಾಜದ ತಾಲೂಕಾಧ್ಯಕ್ಷ ಚಂದ್ರಶೇಖರ ಹೂಗಾರ ಅಧ್ಯಕ್ಷತೆ ವಹಿಸಿದ್ದರು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಹಿಳೆಯರಿಂದ ಕುಂಭ, ಕಳಸ ಹಾಗೂ ವಾದ್ಯ ವೈಭವದೊಂದಿಗೆ ಹೂಗಾರ ಮಾದಯ್ಯನವರ ಭಾವಚಿತ್ರ ಮೆರವಣಿಗೆ ನಡೆಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಸಕ ಬಸವರಾಜ ರಾಯರಡ್ಡಿ ಮಾದಯ್ಯ ಭಾವಚಿತ್ರಕ್ಕೆ ಮಾಲಾರ್ಪಣೆ ಸಲ್ಲಿಸಿದರು.
ಈ ಸಂದರ್ಭ ಪಪಂ ಮುಖ್ಯಾಧಿಕಾರಿ ನಾಗೇಶ, ಮುಖಂಡರಾದ ಶಂಕರ ಹೂಗಾರ, ಅಮರೇಶ ಹೂಗಾರ, ಶಶಿಧರ ಹೂಗಾರ, ಮಾಂತೇಶ ಹೂಗಾರ, ಶರಣಪ್ಪ ಹೂಗಾರ, ಶಿವಕುಮಾರ ಹೂಗಾರ, ನಂದೀಶ ಹೂಗಾರ, ಜಗದೀಶ ಹೂಗಾರ, ಮಹಾದೇವಪ್ಪ ಹೂಗಾರ ಸೇರಿದಂತೆ ಇತರರಿದ್ದರು.