ಸಾರಾಂಶ
ಯಲ್ಲಾಪುರ: ಅಡಕೆಯಲ್ಲಿ ಯಾವುದೇ ಮಾರಕ ಅಂಶ ಇರುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ನೇಮಿಸಿದ ತಜ್ಞರು ವೈಜ್ಞಾನಿಕವಾಗಿ ವರದಿ ಸಲ್ಲಿಸಿದ್ದಾರೆ. ಇದಕ್ಕಾಗಿ ₹೬೭ ಕೋಟಿ ವ್ಯಯ ಮಾಡಿದೆ. ಅಲ್ಲದೇ, ೨೦ ರೀತಿಯ ಮೌಲ್ಯವರ್ಧಕ ವಸ್ತುಗಳನ್ನು ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಬಿಜೆಪಿಯ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ನವೀನಕುಮಾರ ತಿಳಿಸಿದರು.ಜ. ೨೨ರಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಸಂಘಟನೆ ಹಮ್ಮಿಕೊಂಡ ಪ್ರತಿಭಟನಾ ರ‍್ಯಾಲಿ ನಂತರ ದೇವಿ ಮೈದಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು.ಅಡಕೆ, ಗೋವಿನಜೋಳ, ಭತ್ತ, ಕಬ್ಬು ಸೇರಿದಂತೆ ರೈತರ ಬೆಳೆಗಳ ಹಾನಿಯಿಂದ ಸಂಕಷ್ಟಕ್ಕೀಡಾದ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಸ್ಪಂದಿಸದಿರುವ ಹಿನ್ನೆಲೆ ಪ್ರತಿಭಟನೆ ನಡೆಸಲಾಗುತ್ತಿದೆ. ಅಲ್ಲದೇ ಯಲ್ಲಾಪುರ ಶಾಸಕರು ತಮ್ಮ ವ್ಯಾಪಾರ, ಉದ್ದಿಮೆ ಬೆಳೆಸಲು ಬಿಜೆಪಿಯಿಂದ ಆಯ್ಕೆಯಾಗಿ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನಾಮ್ ಕೆ ವಾಸ್ತೆ ಮಂತ್ರಿಯಾಗಿದ್ದು, ಕರಾವಳಿ ಭಾಗಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಜನರಿಗೆ ಸ್ಪಂದಿಸದ ಸಚಿವ ಕಾಣೆಯಾಗಿದ್ದು, ಅವರನ್ನು ಹುಡುಕಿಕೊಡಿ ಎಂದು ಮನವಿ ಮಾಡಿದರು. ಬಿಜೆಪಿಯಿಂದ ಆಯ್ಕೆಯಾಗಿ ಕಾಂಗ್ರೆಸ್ ಬಾಗಿಲು ತಟ್ಟುತ್ತಿರುವ ಯಲ್ಲಾಪುರ ಶಾಸಕರು ತಾಕತ್ತಿದ್ದರೆ ಬಿಜೆಪಿಗೆ ರಾಜೀನಾಮೆ ನೀಡಿ, ಚುನಾವಣೆ ಎದುರಿಸಿ ಎಂದು ಸವಾಲು ಹಾಕಿದರು.ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರದ ಮೇಲೆ ಆರಂಭದಲ್ಲಿ ಜನರು ಇಟ್ಟಿದ್ದ ಎಲ್ಲ ನಿರೀಕ್ಷೆಗಳು ಹುಸಿಯಾಗಿವೆ. ದೇಶ ವಿರೋಧಿ ಕಾಂಗ್ರೆಸ್ ಇತಿಹಾಸವನ್ನು ಪ್ರತಿಯೊಬ್ಬರೂ ಅರಿತುಕೊಂಡಿದ್ದು, ಇಂದಿನ ಸರ್ಕಾರ ಜನರನ್ನು ದಿಕ್ಕುಗೆಡಿಸಿ, ಮೋಸ ಮಾಡಿ, ಶೋಷಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದರು.ಬಿಜೆಪಿ ಮುಖಂಡ ಎಲ್.ಟಿ. ಪಾಟೀಲ್ ಮಾತನಾಡಿ, ಯಲ್ಲಾಪುರ ಕ್ಷೇತ್ರದ ಶಾಸಕರು ಬಿಜೆಪಿಯಿಂದ ಆಯ್ಕೆಯಾಗಿ ಕಾಂಗ್ರೆಸ್ ಬಾಗಿಲು ಬಳಿ ಇದ್ದು, ನೈತಿಕತೆ ಇದ್ದರೆ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ಕೇವಲ ವೋಟ್ ಬ್ಯಾಂಕ್ ಸಲುವಾಗಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದು, ಅಭಿವೃದ್ಧಿ ಯೋಜನೆಗಳು ಮಾತ್ರ ಸ್ಥಗಿತವಾಗಿದೆ. ಬೆಳೆವಿಮೆ ಕೊಡಿಸಲು ಸರ್ಕಾರ ವಿಫಲವಾಗಿದೆ. ತಕ್ಷಣ ಫಸಲ್ ಬಿಮಾ ಯೋಜನೆಯ ಹಣ ನೀಡಬೇಕೆಂದು ಆಗ್ರಹಿಸಿದರು.ಪ್ರಮುಖರಾದ ಪ್ರಮೋದ ಹೆಗಡೆ, ಉಮೇಶ ಭಾಗ್ವತ್, ರಾಮಚಂದ್ರ ಚಿಕ್ಯಾನಮನೆ, ನಾರಾಯಣ ಹೆಗಡೆ ಕರಿಕಲ್, ಶಿವರಾಮ ಗಾಂವ್ಕಾರ, ಶಿವಾಜಿ ನರಸಾನಿ, ಚಂದ್ರಕಲಾ ಭಟ್ಟ, ಶ್ರುತಿ ಹೆಗಡೆ, ಗೋಪಾಲಕೃಷ್ಣ ಗಾಂವ್ಕಾರ, ವಿಷ್ಣುಮೂರ್ತಿ ಹೆಗಡೆ, ಖಾಜಗಾರ ಹಳಿಯಾಳ, ಶಿವಲಿಂಗಯ್ಯ ಅಲ್ಲಯ್ಯನಮಠ, ನಟರಾಜ ಗೌಡರ್, ರಾಘವೇಂದ್ರ ಭಟ್ಟ, ವೆಂಕಟರಮಣ ಕಾರೇಮನೆ ಮತ್ತಿತರರು ಇದ್ದರು. ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಸ್ವಾಗತಿಸಿದರು. ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ನಿರೂಪಿಸಿದರು. ಗುರುಪ್ರಸಾದ ಹೆಗಡೆ ಹರ್ತೆಬೈಲ್ ವಂದಿಸಿದರು.ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಗಾಂಧಿ ಸರ್ಕಲ್ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ನಡುವೆ ದೇವಿ ಮೈದಾನದಲ್ಲಿ ಪ್ರತಿಭಟನಾ ಸಭೆ ನಡೆಸಿ ಬಿಜೆಪಿ ಮುಖಂಡರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಹೋರಾಟದಲ್ಲಿ ಕೇವಲ ನೂರೈವತ್ತು ಜನ ಭಾಗಿ...
ಅಡಕೆ, ಗೋವಿನಜೋಳ ಕುರಿತು ಸರ್ಕಾರದ ಗಮನ ಸೆಳೆಯಲು ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರತಿಭಟನೆಯಲ್ಲಿ ಸಾವಿರಾರು ಜನ ಸೇರುತ್ತಾರೆಂದು ನಿರೀಕ್ಷಿಸಲಾಗಿತ್ತಾದರೂ ಕೇವಲ ನೂರೈವತ್ತರಷ್ಟು ಜನ ಭಾಗವಹಿಸಿದ್ದರು. ರೈತರ ಸಮಸ್ಯೆಯನ್ನು ಬಿಂಬಿಸುವ ಪ್ರತಿಭಟನೆಯಲ್ಲಿ ಭಾಗವಹಿಸಿದ ಗಣ್ಯರೆಲ್ಲ ಕ್ಷೇತ್ರದ ಶಾಸಕರನ್ನು ಟೀಕಿಸುವುದಕ್ಕಾಗಿ ಹೆಚ್ಚಿನ ಸಮಯ ಬಳಸಿಕೊಂಡದ್ದು ವಿಶೇಷವಾಗಿತ್ತು.