ರಾಜ್ಯದಲ್ಲಿ 2.38 ಲಕ್ಷಕ್ಕೂ ಅಧಿಕ ಮಕ್ಕಳು ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಅನೇಕ ವಸತಿ ಶಾಲೆಗಳು ಆರಂಭವಾಗಿದ್ದು, ಇದೀಗ 100 ವಸತಿ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ.
ಗದಗ: ರಾಜ್ಯ ಸರ್ಕಾರವು ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ₹4500 ಕೋಟಿ ಹಣವನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಮಂಗಳವಾರ ನಗರದ ಗಂಗಮಡಿ ಭಾಗದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಮೌಲಾನಾ ಅಜಾದ ಪಬ್ಲಿಕ್ ಶಾಲೆ(ಆಂಗ್ಲ ಮಾಧ್ಯಮ)ಯ ನೂತನ ಕಟ್ಟಡದ ಲೋಕಾರ್ಪಣೆ ಹಾಗೂ ಹೆಚ್ಚುವರಿ ತರಗತಿಗಳ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ರಾಜ್ಯದಲ್ಲಿ 2.38 ಲಕ್ಷಕ್ಕೂ ಅಧಿಕ ಮಕ್ಕಳು ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಅನೇಕ ವಸತಿ ಶಾಲೆಗಳು ಆರಂಭವಾಗಿದ್ದು, ಇದೀಗ 100 ವಸತಿ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ. 100 ಮದರಸಾಗಳಲ್ಲಿ 9ರಿಂದ 10ನೇ ತರಗತಿ ಓದುತ್ತಿರುವ ಸುಮಾರು 5 ಸಾವಿರ ಮಕ್ಕಳು ಉತ್ತೀರ್ಣರಾಗುತ್ತಿದ್ದಾರೆ. ಮದರಸಾಗಳಲ್ಲಿಯೂ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಬೇಕು ಎಂಬ ಕಳಕಳಿಯಿಂದ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ಕಡಿಮೆ ಅನುದಾನದಲ್ಲೇ ಗುಣಮಟ್ಟದ ಹಾಗೂ ವಿಶಾಲ ಕಟ್ಟಡ ನಿರ್ಮಾಣವಾಗಿರುವುದು ಸಂತೋಷದ ವಿಷಯ. ಈ ಕಾರ್ಯಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ವಿಶೇಷವಾಗಿ ಸಚಿವ ಎಚ್.ಕೆ. ಪಾಟೀಲ ಅವರ ಸಹಕಾರವನ್ನು ಸ್ಮರಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು, ಶಾಲಾ ನೂತನ ಕಟ್ಟಡ ನಿರ್ಮಾಣಕ್ಕೆ ₹235 ಲಕ್ಷ ಹಾಗೂ ಹೆಚ್ಚುವರಿ ತರಗತಿಗಳ ಕಟ್ಟಡ ನಿರ್ಮಾಣಕ್ಕೆ ₹143 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಕೃಷ್ಣಗೌಡ ಪಾಟೀಲ, ಫಾರೂಕ್ ಹುಬ್ಬಳ್ಳಿ, ಡಿಸಿ ಸಿ.ಎನ್. ಶ್ರೀಧರ್, ಎಸ್ಪಿ ರೋಹನ್ ಜಗದೀಶ್, ಕೆಆರ್‌ಐಡಿಎಲ್ ಕಾರ್ಯನಿರ್ವಾಹಕ ಅಭಿಯಂತರ ಅನಿಲ ಪಾಟೀಲ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಮಿತ್ ಬಿದರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.