ಆರ್‌.ಎಸ್‌.ಎಸ್‌ ನಿಯಂತ್ರಣ ಸಂಪೂರ್ಣ ರಾಜಕೀಯ ಉದ್ದೇಶದ್ದು

| Published : Oct 26 2025, 02:00 AM IST

ಆರ್‌.ಎಸ್‌.ಎಸ್‌ ನಿಯಂತ್ರಣ ಸಂಪೂರ್ಣ ರಾಜಕೀಯ ಉದ್ದೇಶದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಸಂಘವು ರಬ್ಬರ್‌ ಬಾಲ್‌ ನಂತೆ. ಎಷ್ಟು ಜೋರಾಗಿ ನೆಲಕ್ಕೆ ಬಾರಿಸಿದರೂ, ಅಷ್ಟೇ ಪ್ರಮಾಣದಲ್ಲಿ ಹಿಂದೆ ಚಿಮ್ಮುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರು

ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಯಂತ್ರಿಸುವ ರಾಜ್ಯ ಸರ್ಕಾರದ ಯೋಜನೆಯು ಸಂಪೂರ್ಣ ರಾಜಕೀಯ ಉದ್ದೇಶ ಹೊಂದಿದೆ ಎಂದು ಇಂಡಿಯಾ ಫೌಂಡೇಷನ್‌ ಅಧ್ಯಕ್ಷ ಡಾ. ರಾಮ್‌ ಮಾಧವ್‌

ವಿಜಯನಗರ 1ನೇ ಹಂತದಲ್ಲಿನ ಜಗನ್ನಾಥ ಸೆಂಟರ್‌ ಫಾರ್‌ ಆರ್ಟ್‌ ಅಂಡ್‌ ಕಲ್ಚರ್‌ ವೇದಿಕಾ ಸಭಾಂಗಣದಲ್ಲಿ ಜನಜಾಗರಣ ಟ್ರಸ್ಟ್, ಮಂಥನ ಮೈಸೂರು ವತಿಯಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಂಘದ ನೂರು ವರ್ಷದ ಪರಿಕ್ರಮ ಮತ್ತು ಕಾರ್ಯ ವಿಸ್ತಾರ ಕುರಿತು ಅವರು ಮಾತನಾಡಿದರು.

ಸಂಘವು ರಬ್ಬರ್‌ ಬಾಲ್‌ ನಂತೆ. ಎಷ್ಟು ಜೋರಾಗಿ ನೆಲಕ್ಕೆ ಬಾರಿಸಿದರೂ, ಅಷ್ಟೇ ಪ್ರಮಾಣದಲ್ಲಿ ಹಿಂದೆ ಚಿಮ್ಮುತ್ತದೆ. ಹತ್ತಿಕ್ಕಿದಷ್ಟು ಸಂಘ ದೊಡ್ಡದಾಗಿ ಬೆಳೆಯುತ್ತದೆ. ಆರ್‌ಎಸ್‌ಎಸ್‌ ಸಂಘಟನೆಯನ್ನು ಕೆಲವರು ನೇರವಾಗಿ ವಿರೋಧಿಸಿದರೂ ಖಾಸಗಿಯಾಗಿ ಸಂಘದ ಚಟುವಟಿಕೆ ಗೌರವಿಸುತ್ತಾರೆ ಎಂದರು.

ಕೆಲವು ನಾಯಕರು ರಾಜಕೀಯವಾಗಿ ಶಕ್ತಿವಂತರೆಂದು ಗುರುತಿಸಿಕೊಳ್ಳಲು ಆರ್‌ಎಸ್‌ಎಸ್‌ ವಿರುದ್ಧ ಮಾತನಾಡಿ ನಿಯಂತ್ರಿಸಲು ಮುಂದಾಗುತ್ತಾರೆ. ಆದರೆ ನಾವು ಸಂಘದ ಚಟುವಟಿಕೆಗಳನ್ನು ಒಂದು ಸ್ಥಳದಲ್ಲಿ ಹತ್ತಿಕ್ಕಿದರೆ ಮತ್ತೊಂದೆಡೆ ನಡೆಸುತ್ತೇವೆ.

ಆರ್‌ಎಸ್‌ಎಸ್‌ ಶಾಖೆ ನಡೆಸದಂತೆ, ಸರ್ಕಾರಿ ಅಧಿಕಾರಿಗಳನ್ನು ಭಾಗವಹಿಸದಂತೆ ಮಾಡಲು ಸರ್ಕಾರಕ್ಕೆ ಸಾಧ್ಯವಿಲ್ಲ. ಈ ಬಗ್ಗೆ ನ್ಯಾಯಾಲಯಗಳು 30ಕ್ಕೂ ಹೆಚ್ಚು ತೀರ್ಪುಗಳನ್ನು ನೀಡಿವೆ. ಇಷ್ಟಾದರೂ ತಡೆದರೆ ಮತ್ತೊಂದು ಸ್ಥಳಕ್ಕೆ ಹೋಗುತ್ತೇವೆ, ದೇಶ ವಿಶಾಲವಾಗಿದೆ, ಸಹಕರಿಸುವವರೂ ಇದ್ದಾರೆ ಎಂದರು.

ಆರ್‌ಎಸ್‌ಎಸ್‌ ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟ. ಆದರೆ ಅಪಾರ್ಥ ಮಾಡಿಕೊಳ್ಳುವುದು ಸುಲಭ. ಸಂಘವು ಅತಿ ಹೆಚ್ಚು ಯುವಕರನ್ನು ಹೊಂದಿದ ಸಂಘಟನೆ. ಇದು ಈವರೆಗೆ ಸಾಕಷ್ಟು ಸವಾಲನ್ನು ಎದುರಿಸಿದೆ. ಇಷ್ಟು ಸವಾಲು ಎದುರಿಸಿದ ಸಂಘಟನೆ ಇತಿಹಾಸದಲ್ಲಿಯೇ ಇಲ್ಲ. ಆದರೆ ಕೆಲವರು ಆರ್‌ಎಸ್‌ಎಸ್‌ ಬಗ್ಗೆ ಇಲ್ಲ ಸಲ್ಲದ ತಪ್ಪು ಹೇಳಿಕೆ ನೀಡಿ ಸಂಘದ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿದ್ದಾರೆ ಎಂದು ಅವರು ರೋಪಿಸಿದರು.

ಸಂಘವು ಒಂದು ಮುಕ್ತ ಸಂಘಟನೆ. ಒಳಗಿನಿಂದ ಯಾವುದೇ ಐಡಿಯಾಲಜಿ ಅನುಸರಿಸುವುದಿಲ್ಲ. ಜನರಲ್ಲಿ ದೇಶಭಕ್ತಿ ಮೂಡಿಸಲು ದಿನದ 24 ಗಂಟೆ ಕೆಲಸ ಮಾಡುತ್ತದೆ. ಇದು ಆರ್‌.ಎಸ್‌.ಎಸ್‌.ನ ಹಿಂದುತ್ವ. ಆರ್‌ಎಸ್‌ಎಸ್‌ ಸಂವಿಧಾನದ ವಿರುದ್ಧವಲ್ಲ. ಅಂತೆಯೇ ಸಂವಿಧಾನದಲ್ಲಿ ಅಡಕವಾಗಿರುವ ತತ್ತ್ವಗಳ ಪಾಲನೆಯ ಧ್ಯೇಯ ಹೊಂದಿದೆ. ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸುತ್ತದೆ ಎಂದರು.

ವಿ.ಡಿ.ಸಾವರ್ಕರ್‌ ದೃಷ್ಟಿಕೋನದ ಹಿಂದುತ್ವ ಸಿದ್ಧಾಂತವನ್ನು ಆರ್‌ಎಸ್‌ಎಸ್‌ ಗೌರವಿಸುತ್ತದೆ. ಅದನ್ನು ಅಳವಡಿಸಿಕೊಂಡಿಲ್ಲ ಎಂದು ಅವರು ಇದೇ ವೇಳೆ ತಿಳಿಸಿದರು.

ಆರ್‌ಎಸ್‌ಎಸ್‌ 1925ರಲ್ಲಿ ಆರಂಭವಾಗಿದ್ದು, ಇದು ಒಂದು ಸಂಸ್ಥೆ, ಸಂಘಟನೆ ಅಲ್ಲ. ಹಾಗಾಗಿ ಇದು ನೋಂದಣಿಯಾಗಿಲ್ಲ. ಜನರು ಒಗ್ಗಟಾಗಿರುವುದನ್ನು ಪ್ರೇರೇಪಿಸುವುದು, ಹಿಂದು ಸಂಸ್ಕೃತಿ, ಮೌಲ್ಯ ಸಂರಕ್ಷಿಸಿ, ಸಹನೆ, ಸಹಬಾಳ್ವೆಯಿಂದ ಒಳ್ಳೆಯ ಹಿಂದೂವಾಗಿ ಬದುಕುವ ವಾತಾವರಣ ಸೃಷ್ಟಿಸುವುದು ಸಂಘದ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು.

ಆರ್‌ಎಸ್‌ಎಸ್ ಮುಖಂಡ ಜಿ. ವಾಸುದೇವ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಪತ್ರಿಕೋದ್ಯಮಿ ವಿಕ್ರಮ್‌ ಮುತ್ತಣ್ಣ ಅಧ್ಯಕ್ಷತೆ ವಹಿಸಿದ್ದರು.

---

ಕೋಟ್

ಆರ್‌.ಎಸ್‌.ಎಸ್‌ ನಿಯಂತ್ರಣ ಕಾಂಗ್ರೆಸ್‌ ಸರ್ಕಾರದಲ್ಲಿನ ಎಲ್ಲರ ಉದ್ದೇಶವಲ್ಲ. ಹಿಡನ್‌ ಅಜೆಂಡಾ ಹೊಂದಿರುವ ಕೆಲ ನಾಯಕರು ತಮ್ಮ ಬೆಳವಣಿಗೆಗೆ ಈ ಕೆಲಸ ಮಾಡುತ್ತಿದ್ದಾರೆ.

- ಡಾ. ರಾಮ್‌ ಮಾಧವ್‌, ಅಧ್ಯಕ್ಷರು, ಇಂಡಿಯಾ ಫೌಂಡೇಷನ್.