ಬೇಸಿಗೇಲೂ ಸಮರ್ಪಕ ವಿದ್ಯುತ್‌ ವಿತರಿಸಿ ಸಾಧನೆ

| Published : Jun 13 2024, 12:45 AM IST

ಸಾರಾಂಶ

ಪಂಚಾಯತ್ ರಾಜ್‌ ಮತ್ತು ಮೆಸ್ಕಾಂ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಗೋಪಾಲಕೃಷ್ಣ ಬೇಳೂರು ರಾಜ್ಯ ಸರ್ಕಾರದ ಕಾರ್ಯದ ಶ್ಲಾಘನೆ ವ್ಯಕ್ತಪಡಿಸಿದರು.

ಕನ್ನಡಪ್ರಭವಾರ್ತೆ ಸಾಗರ

ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿ ಮಾಡಿಯೂ ರಾಜ್ಯ ಸರ್ಕಾರ ಸಮರ್ಪಕ ವಿದ್ಯುತ್ ಕೊಡಲು ಯಶಸ್ವಿಯಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಪಂಚಾಯತ್ ರಾಜ್‌ ಮತ್ತು ಮೆಸ್ಕಾಂ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಿರುಬೇಸಿಗೆ ನಡುವೆಯೂ ೨೪ಗಂಟೆ ವಿದ್ಯುತ್ ನೀಡಿದ ಹೆಗ್ಗಳಿಕೆ ನಮ್ಮ ಸರ್ಕಾರದ್ದು. ಹಿಂದಿನ ಬಿಜೆಪಿ ಸರ್ಕಾರ ಡ್ಯಾಂಗಳೆಲ್ಲಾ ಭರ್ತಿಯಾಗಿದ್ದರೂ ಲೋಡ್‌ಶೆಡ್ಡಿಂಗ್ ಮಾಡಿತ್ತು ಎಂದರು.

ಮಳೆ ಜಾಸ್ತಿಯಾಗುತ್ತಿರುವುದರಿಂದ ಅಲ್ಲಲ್ಲಿ ಮರ ಬೀಳುವುದು, ರಸ್ತೆ ಮೋರಿ ಕುಸಿತ, ಮನೆ ಕುಸಿಯುವ ಸಾಧ್ಯತೆ ಇರುತ್ತದೆ. ಮನೆ ಕುಸಿದು ಬಿದ್ದರೆ ತಕ್ಷಣ ಗ್ರಾಮ ಪಂಚಾಯ್ತಿಯಿಂದ ೧೦ ಸಾವಿರ ರು. ಪರಿಹಾರ ಕೊಡಿ. ಸಂತ್ರಸ್ತರಿಗೆ ಬಾಡಿಗೆ ಮನೆ ಮಾಡಿಕೊಡುವ ಜೊತೆಗೆ ಅವರಿಗೆ ಸೂಕ್ತ ಸೌಲಭ್ಯ ಒದಗಿಸಿ. ರಸ್ತೆಯಲ್ಲಿ ಮರ ಬಿದ್ದರೆ ಅರಣ್ಯ ಇಲಾಖೆಯವರು ಬರುವ ತನಕ ಕಾಯದೆ ಸ್ಥಳೀಯರನ್ನು ಬಳಸಿಕೊಂಡು ಗ್ರಾಮ ಪಂಚಾಯ್ತಿಯಿಂದ ತೆರವುಗೊಳಿಸಿ. ಮಳೆಗಾಲ ಮುಗಿಯುವ ತನಕ ಯಾರೂ ರಜೆ ಹಾಕದೆ ಸಾರ್ವಜನಿಕರ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಮೆಸ್ಕಾಂ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದೆ. ಒಂದೊಮ್ಮೆ ನಿಮಗೆ ಕೆಲಸ ಮಾಡಲು ಆಗದೆ ಇದ್ದರೆ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಳ್ಳಿ. ಜನರ ಫೋನ್ ಎತ್ತದೆ, ಅವರಿಗೆ ಸೇವೆ ನೀಡದೆ ಇರುವವರು ನಮ್ಮ ತಾಲ್ಲೂಕಿನಲ್ಲಿ ಇರುವುದು ಬೇಡ. ಕೆಲವು ಕಡೆಗಳಲ್ಲಿ ಮೆಸ್ಕಾಂ ಕಾಮಗಾರಿ ವಿಳಂಬವಾಗಿದ್ದು, ಅಂತಹ ಗುತ್ತಿಗೆದಾರನನ್ನು ಬದಲಾಯಿಸಿ ಹೊಸಬರಿಗೆ ನೀಡಿ. ಆನಂದಪುರ, ತ್ಯಾಗರ್ತಿ ಭಾಗದ ಮೆಸ್ಕಾಂ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ ಎನ್ನುವ ದೂರು ಇದ್ದು ತಕ್ಷಣ ನಿಮ್ಮ ವರ್ತನೆ ಸರಿಪಡಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕಿನಲ್ಲಿಯೂ ಹೊಸದಾಗಿ ಲೇಔಟ್ ಮಾಡಲು ಯಾರಿಗೂ ಅವಕಾಶ ಕೊಡಬೇಡಿ. ಲೇಔಟ್ ಮಾಡುವಾಗ ಕಾನೂನುಪಾಲನೆ ಮಾಡುತ್ತಿಲ್ಲ. ಸೂಕ್ತ ಸೌಲಭ್ಯ ವನ್ನು ಒದಗಿಸುತ್ತಿಲ್ಲ. ಖಾಸಗಿ ಲೇಔಟ್‌ನವರು ಹಣ ಮಾಡಿಕೊಳ್ಳಲು ಇದನ್ನು ದಂಧೆ ಮಾಡಿಕೊಂಡಿದ್ದು ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ತಾಲ್ಲೂಕಿನಲ್ಲಿ ಡೇಂಘೀ ನಿಯಂತ್ರಣಕ್ಕೆ ಅಗತ್ಯಕ್ರಮ ಕೈಗೊಳ್ಳಲಾಗಿದೆ. ಡೇಂಘೀ ಸೊಳ್ಳೆಯನ್ನು ತಿನ್ನುವ ಮೀನುಮರಿ ಇರುವುದಾಗಿ ತಾಲ್ಲೂಕು ಆರೋಗ್ಯಾಧಿ ಕಾರಿಗಳು ತಿಳಿಸಿದ್ದಾರೆ. ಈಗಾಗಲೆ ದಕ್ಷಿಣ ಕನ್ನಡದಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದು, ಸಾಗರ ತಾಲ್ಲೂಕಿನಲ್ಲೂ ನದಿ, ಕೆರೆಕಟ್ಟೆಗಳಲ್ಲಿ ಮೀನುಮರಿ ಬಿಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಜೊತೆಗೆ ಎಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲೂ ಸೊಳ್ಳೆಯನ್ನು ನಿಯಂತ್ರಿಸಲು ಕಡ್ಡಾಯವಾಗಿ ಔಷಧಿ ಸಿಂಪಡಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಗುರುಕೃಷ್ಣ ಶೆಣೈ, ಮೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್, ಉದ್ಯೋಗಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಮಹ್ಮದ್ ಹನೀಫ್ ಇನ್ನಿತರರು ಹಾಜರಿದ್ದರು.