ರಾಜ್ಯ ಸರ್ಕಾರದಿಂದಲೇ ನಿಜಲಿಂಗಪ್ಪ ಶ್ವೇತಭವನ ಖರೀದಿ

| Published : Nov 15 2024, 12:31 AM IST

ಸಾರಾಂಶ

State government to buy Nijalingappa's White House

-ಕಿರಣ್ ಶಂಕರ್ ಬೆದರಿಕೆಗೆ ಬಗ್ಗಿತಾ ಸರ್ಕಾರ । ಖರೀದಿಯ ಔಪಚಾರಿಕ ಸಭೆ ನಡೆಸಿದ ಸಚಿವ ಶಿವರಾಜ ತಂಗಡಗಿ

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ದಶಕಗಳ ಹಗ್ಗ ಜಗ್ಟಾಟ, ಸತಾಯಿಸುವಿಕೆ, ಕಾನೂನು ತೊಡಕು ಎಂಬಿತ್ಯಾದಿ ರಗಳೆಗಳ ನಂತರ ಅಂತೂ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಚಿತ್ರದುರ್ಗದ ನಿವಾಸ, ಶ್ವೇತಭವನವ ಖರೀದಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ನವೆಂಬರ್ 13 ರ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಪರ ಕಾರ್ಯದರ್ಶಿ ಎನ್.ಶಾರದಾಂಬ ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ ಅವರಿಗೆ ಪತ್ರ ಬರೆದು ಖರೀದಿಗೆ ಅಗತ್ಯಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು.

ಪರಿಣಾಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಗುರುವಾರ ಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ್ ಅವರ ಬೆಂಗಳೂರಿಗೆ ಕರೆಯಿಸಿಕೊಂಡು ಸಭೆ ನಡೆಸಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿ ನಿವಾಸವ ಸರ್ಕಾರದಿಂದಲೇ ಅಭಿವೃದ್ಧಿಪಡಿಸುವಂತೆ ಸೂಚಿಸಿದ್ದಾರೆ. ಮನೆ ಖರೀದಿ ಸಂಬಂಧ ಕಾನೂನು ಇಲಾಖೆ ಈಗಾಗಲೇ ಅನುಮತಿ ನೀಡಿದ್ದು ಅದರ ಆಧಾರದ ಮೇಲೆ ಖರೀದಿ ಪ್ರಕ್ರಿಯೆ ನಡೆಯಲಿದೆ. ಈ ಮೊದಲು ಲೋಕೋಪಯೋಗಿ ಇಲಾಖೆಯಿಂದ ಮನೆ ಸಮೀಕ್ಷೆ ಮಾಡಿ 4.18 ಕೋಟಿ ರು. ಮೌಲ್ಯ ಕಟ್ಟಲಾಗಿತ್ತು. ಇದೇ ಮೊತ್ತಕ್ಕೆ ನಿವಾಸ ಖರೀದಿ ಮಾಡಲಾಗುತ್ತಿದೆ.

ಅನಗತ್ಯ ವಿಳಂಬ:

ಎಸ್. ನಿಜಲಿಂಗಪ್ಪ ಅವರ ನಿವಾಸ ಖರೀದಿ ಸಂಬಂಧ ಅನಗತ್ಯ ವಿಳಂಬವಾಗಿರುವುದು ಸರ್ಕಾರ ಅಪರ ಕಾರ್ಯದರ್ಶಿ ಎನ್.ಶಾರದಾಂಬಾ ಅವರು ಜಿಲ್ಲಾಧಿಕಾರಿ ವೆಂಕಟೇಶ್ ಅವರಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ನಿಜಲಿಂಗಪ್ಪ ಅವರ ಬದುಕಿದ್ದಾಗಲೇ 28-3-1989 ರಂದು ವಿಲ್ ಬರೆದು ಹನ್ನೊಂದು ವರ್ಷದ ನಂತರ (8-8-2000) ರಂದು ನಿಧನರಾಗಿದ್ದರು. ವಿಲ್ ಪ್ರಕಾರ ತನ್ನ ಮೂವರು ಮಕ್ಕಳು ಅನುಭವಿಸಿದ ನಂತರ ಮೊಮ್ಮಗ ವಿನಯ್ ( ಕಿರಣ್ ಶಂಕರ್ ಪುತ್ರ) ಗೆ ಮನೆ ಹೋಗಬೇಕೆಂಬುದ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ನಿಜಲಿಂಗಪ್ಪ ಅವರ ಎರಡನೇ ಮಗ ರಾಜಶೇಖರ್ 10-10-2008 ರಂದು ನಿಧನರಾಗಿದ್ದು ಮೂರನೇ ಮಗ ಉಮಾಕಾಂತ 16-06-2017 ರಂದೇ ಆಸ್ತಿ ಮೇಲಿನ ಹಕ್ಕನ್ನು ಬಿಟ್ಟುಕೊಟ್ಟಿದ್ದಾರೆ.

ಇದಾದ ತರುವಾಯ ರಾಜ್ಯ ಸರ್ಕಾರ ಮನೆ ಖರೀದಿ ಮಾಡಲು ಮುಂದಾದಾಗ ಹಿರಿಯ ಮಗ ಕಿರಣ್ ಶಂಕರ್ 12-12-2022 ರಂದು

ಮನೆಯ ಮೇಲಿನ ತಮ್ಮ ಹಕ್ಕನ್ನು ಬಿಟ್ಟು ಕೊಟ್ಟು ನೇರವಾಗಿ ಮಗ ವಿನಯ್ ಗೆ ಸೇರಿದ ಆಸ್ತಿಯೆಂಬುದನ್ನು ಸ್ಪಷ್ಟ ಪಡಿಸಿದ್ದರು. 16.06.2017 ಮತ್ತು 12.12.2022 ರಂದು ನಿಜಲಿಂಗಪ್ಪ ಅವರ ಇಬ್ಬರು ಪುತ್ರರು ನೀಡಿದ ಬಿಡುಗಡೆ ಪತ್ರದ ಪ್ರಕಾರ, ವಿನಯ್ ಅವರು ನಿಜಲಿಂಗಪ್ಪ ಅವರ ಮನೆಯ ಮೇಲೆ ಸಂಪೂರ್ಣ ಹಕ್ಕನ್ನು ಪಡೆದುಕೊಂಡಿದ್ದರು. ಇದಲ್ಲದೇ ನಗರಸಭೆ ಖಾತೆಯಲ್ಲಿ ವಿನಯ್ ಹೆಸರು ನಮೂದಿತವಾಗಿದ್ದು ಅವರು ಮನೆಯ ಮಾಲೀಕರಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಈ ಎಲ್ಲ ದಾಖಲೆಗಳ ಪ್ರಕಾರ ಮನೆಯನ್ನು ಖರೀದಿಸಬಹುದು ಎಂದು ಕಾನೂನು ಇಲಾಖೆ ಅಭಿಪ್ರಾಯ ಪಟ್ಟಿತ್ತು.

ನಿಜಲಿಂಗಪ್ಪ ಅವರ ನಿವಾಸವ ರಾಜ್ಯ ಸರ್ಕಾರ ಖರೀದಿಸಲು ಎರಡು ವರ್ಷಗಳ ಹಿಂದೆಯೇ ಎಲ್ಲ ಕಾನೂನು ತೊಡಕುಗಳು ನಿವಾರಣೆಯಾಗಿದ್ದವು ಎಂಬುದು ಕಾನೂನು ಇಲಾಖೆಯ ವರದಿ ಸ್ಪಷ್ಟ ಪಡಿಸುತ್ತದೆ. ವಾಸ್ತವಾಂಶ ಹೀಗಿರುವಾಗ ಜಿಲ್ಲಾಡಳಿತ ಯಾಕೆ ಖರೀದಿ ಪ್ರಕ್ರಿಯೆ ಮುಗಿಸಲಿಲ್ಲವೆಂಬುದು ಯಕ್ಷ ಪ್ರಶ್ನೆಯಾಗಿದೆ. ಹಿಂದೊಮ್ಮೆ ಜಿಲ್ಲಾಡಳಿತದ ಸೂಚನೆ ಮೇರೆಗೆ ನಿಜಲಿಂಗಪ್ಪ ಅವರ ಮೊಮ್ಮಗ ವಿನಯ್ ಅಮೇರಿಕದಿಂದ ಸಬ್ ರಿಜಿಸ್ಟ್ರಾರ್ ಕಚೇರಿಗೆ ಸಹಿ ಮಾಡಲು ಆಗಮಿಸಿದ್ದರು. ಕಡೇ ಗಳಿಗೆಯಲ್ಲಿ ಖರೀದಿ ಪ್ರಕ್ರಿಯೆ ನಿಂತಿತ್ತು.ಈಗ ವಿನಯ್ ಬರುತ್ತಾರಾ

ರಾಜ್ಯ ಸರ್ಕಾರ ನಿಜಲಿಂಗಪ್ಪ ನಿವಾಸ ಖರೀದಿಗೆ ಮುಂದಾಗಿದ್ದು ಮಾರಲು ನಿಜಲಿಂಗಪ್ಪ ಅವರ ಮೊಮ್ಮಗ ಸಬ್ ರಿಜಿಸ್ಟಾರ್ ಕಚೇರಿಗೆ ಅಮೆರಿಕದಿಂದ ಆಗಮಿಸಿ ಸಹಿ ಮಾಡಬೇಕು. ಹಾಗೊಂದು ವೇಳೆ ಅವರು ಆಗಮಿಸಲು ಸಾಧ್ಯವಾಗದಿದ್ದರೆ ಅಮೆರಿಕದ ರಾಯಭಾರಿ ಕಚೇರಿ ಮೂಲಕ ಪವರ್ ಆಫ್ ಆಟಾರ್ನಿ ಕಳಿಸಿದರೆ ಆಸ್ತಿ ನೋಂದಣಿಯಾಗುತ್ತದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್. ಮನೆ ಖರೀದಿ ಬಗ್ಗೆ ಈಗಾಗಲೇ ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಗಮನಕ್ಕೆ ತರಲಾಗಿದ್ದು ಪುತ್ರ ವಿನಯ್ ಬರಲು ಸಾಧ್ಯವಾಗದಿದ್ದರೆ ಪವರ್ ಆಫ್ ಅಟಾರ್ನಿ ತರಿಸಿಕೊಡುವುದಾಗಿ ಹೇಳಿದ್ದಾರೆಂದು ಡಿಸಿ ವೆಂಕಟೇಶ್ ಕನ್ನಡಪ್ರಭಕ್ಕೆ ತಿಳಿಸಿದರು.------------------

ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಚಿತ್ರದುರ್ಗ ನಿವಾಸ ಖರೀದಿಗೆ ಸಂಬಂದಿಸಿದಂತೆ ಸಚಿವ ಶಿವರಾಜ ತಂಗಡಗಿ ಗುರುವಾರ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

-----------

ಫೋಟೋ: 14 ಸಿಟಿಡಿ5