ನೀರಾವರಿ, ಲೋಕೋಪಯೋಗಿ, ಕಾರ್ಮಿಕ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ನಮ್ಮ ಸರ್ಕಾರ ಅಭಿವೃದ್ಧಿಯೆಡೆಗೆ ನಡೆಯುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಹುಬ್ಬಳ್ಳಿ: ನೀರಾವರಿ, ಲೋಕೋಪಯೋಗಿ, ಕಾರ್ಮಿಕ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ನಮ್ಮ ಸರ್ಕಾರ ಅಭಿವೃದ್ಧಿಯೆಡೆಗೆ ನಡೆಯುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಶಿರಗುಪ್ಪಿ ಗ್ರಾಮದಲ್ಲಿ ಜಲ ಸಂಪನ್ಮೂಲ ಇಲಾಖೆ ಹಾಗೂ ಕರ್ನಾಟಕ ನೀರಾವರಿ ನಿಗಮ ನಿಯಮಿತ ಸಹಯೋಗದಲ್ಲಿ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿ ಶಂಕುಸ್ಥಾಪನೆ ಮತ್ತು ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನಾ, ಭೂಮಿಪೂಜೆ ಸಮಾರಂಭದಲ್ಲಿ ಅವರು ಮಾತನಾಡಿದರು.ನವಲಗುಂದ ಕ್ಷೇತ್ರ ಪ್ರಗತಿ ಪಥದಲ್ಲಿ ದಾಪುಗಾಲು ಹಾಕುತ್ತಿರುವುದು ಹೆಮ್ಮೆಯ ಸಂಗತಿ. ಶಾಸಕ ಕೋನರಡ್ಡಿ ರೈತರ ಪರವಾಗಿ ಸದನದ ಒಳಗೆ ಮತ್ತು ಹೊರಗೆ ಗಮನ ಸೆಳೆಯುತ್ತಾರೆ. ಅವರು ಪ್ರಾಮಾಣಿಕ ಶಾಸಕರಾಗಿದ್ದಾರೆ. ₹80 ಕೋಟಿಯನ್ನು ಸೇತುವೆ ನಿರ್ಮಾಣಕ್ಕೆ ನೀಡಲಾಗಿದೆ. ಈ ಭಾಗದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಜನಪರ ಕಾರ್ಯಗಳು ಈ ಭಾಗದಲ್ಲಿ ನಡೆಯಲಿ ಎಂದು ಆಶಿಸಿದರು.
ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ಕೇಂದ್ರ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರವಿದ್ದಾಗಲೂ ಬೆಣ್ಣೆಹಳ್ಳ ಪ್ರವಾಹ ತಡೆ ಯೋಜನೆ ಬಗ್ಗೆ ಯೋಚಿಸಲಿಲ್ಲ. ಸದ್ಯ ಸಿಎಂ ಸಿದ್ದರಾಮಯ್ಯ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಬಿಜೆಪಿಯವರು ಕೇವಲ ಮಾತನಾಡುತ್ತಾರೆ, ಅವರು ಈ ಕಾಮಗಾರಿಗೆ ಮಾಡಲಿಲ್ಲ. ಕಳಸಾ ಬಂಡೂರಿ ಯೋಜನೆಗೆ ಈಗಾಗಲೇ ₹1,300 ಕೋಟಿ ಟೆಂಡರ್ ಮೂಲಕ ಕರೆದು ಅವರಿಗೆ ಒಪ್ಪಿಸಲಾಗಿದೆ. ಕೇಂದ್ರ ವನ್ಯಜೀವಿ ಮಂಡಳಿಯಿಂದ ಅನುಮತಿ ನೀಡಿದ ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು ಎಂದರು.ಅಮೆರಿಕಾ-ಭಾರತ ವ್ಯಾಪಾರ ಒಪ್ಪಂದದಲ್ಲಿ ಅಮೆರಿಕದ ವಸ್ತುಗಳಿಗೆ ನಮ್ಮಲ್ಲಿ ಶೂನ್ಯ ಟ್ಯಾಕ್ಸ್ ವಿಧಿಸಲಾಗುತ್ತದೆ. ಇದು ಭಾರತದ ರೈತರಿಗೆ ಮುಳುವಾಗಲಿದೆ. ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರ ರೈತರ ₹78 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿ ರೈತರ ಒಂದು ರುಪಾಯಿ ಕೂಡ ಸಾಲಮನ್ನಾ ಮಾಡಿಲ್ಲ ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಣ್ಣೆಹಳ್ಳ ಮಳೆಗಾಲದಲ್ಲಿ ಭಾರೀ ಪ್ರಮಾಣದಲ್ಲಿ ಹಾನಿ ಮಾಡುತ್ತಿತ್ತು. ಬೆಣ್ಣೆಹಳ್ಳ ₹200 ಕೋಟಿ ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ನಾವು ಬರಿ ಮಾತನಾಡುವುದಿಲ್ಲ, ಕೆಲಸ ಮಾಡಿ ತೋರಿಸುತ್ತೇವೆ. ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಯೋಜನೆಯ ಶೇ. 70ರಷ್ಟು ಕಾಮಗಾರಿಯನ್ನು ಮೊದಲ ಹಂತದಲ್ಲಿ ಮುಗಿಸಲಾಗುವುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯಸಚೇತಕರಾದ ಸಲೀಂ ಅಹ್ಮದ್, ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯರಾದ
ಎಫ್.ಎಚ್. ಜಕ್ಕಪ್ಪನವರ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಆರ್. ಪಾಟೀಲ, ಮಾಜಿ ಸಂಸದರಾದ ಪ್ರೊ. ಐ.ಜಿ. ಸನದಿ, ಮಾಜಿ ಸಚಿವರಾದ ಎ.ಎಂ. ಹಿಂಡಸಗೇರಿ, ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರು ಉಪಸ್ಥಿತರಿದ್ದರು.ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಸ್ವಾಗತಿಸಿದರು.