ಸಾರಾಂಶ
ರಾಮಮನೋಹರ ಲೋಹಿಯಾ ಭವನದಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಹಮ್ಮಿಕೊಂಡಿದ್ದ ನೋಂದಾಯಿತ ಅರ್ಹ ಫಲಾನುಭವಿಗಳ ಮಕ್ಕಳಿಗೆ ಲ್ಯಾಪ್‌ಟಾಪ್ ಹಾಗೂ ಟೂಲ್‌ಕಿಟ್ ಶಾಸಕ ಬಸವರಾಜು ವಿ.ಶಿವಗಂಗಾ ವಿತರಿಸಿದರು.
ಕನ್ನಡಪ್ರಭ ವಾರ್ತೆ ಚನ್ನಗಿರಿ
ರಾಜ್ಯದ ಸರ್ಕಾರ ಕಾರ್ಮಿಕರ ಕಲ್ಯಾಣಕ್ಕೆ ಬದ್ಧವಾಗಿದ್ದು ಕಾರ್ಮಿಕರ ಜೀವನ ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಯೋಜನೆ ಜಾರಿಗೆ ತರಲಾಗಿದೆ ಎಂದು ಶಾಸಕ ಬಸವರಾಜು ವಿ.ಶಿವಗಂಗಾ ಹೇಳಿದರು.ಪಟ್ಟಣದ ರಾಮಮನೋಹರ ಲೋಹಿಯಾ ಭವನದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಹಮ್ಮಿಕೊಂಡಿದ್ದ ನೋಂದಾಯಿತ ಅರ್ಹ ಫಲಾನುಭವಿಗಳ ಮಕ್ಕಳಿಗೆ ಲ್ಯಾಪ್‌ಟಾಪ್ ಹಾಗೂ ಕಾರ್ಮಿಕರಿಗೆ ಟೂಲ್‌ಕಿಟ್ ವಿತರಣೆ ಮಾಡಿ ಮಾತನಾಡಿ, ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಲು ಲ್ಯಾಪ್‌ಟಾಪ್ ವಿತರಣೆ ಮಾಡಲಾಗುತ್ತಿದೆ ಎಂದರು.
ನಮ್ಮ ಸರ್ಕಾರ ಕಾರ್ಮಿಕರ ಮಕ್ಕಳ ವಿವಾಹಕ್ಕೆ ₹60, ಹೆರಿಗೆಗೆ ₹50 ಸಾವಿರ, ತಾಯಿ-ಮಗು ಆರೈಕೆಗೆ ಪ್ರತಿ ವರ್ಷ ₹6 ಸಾವಿರದಂತೆ ಮೂರು ವರ್ಷ ನೀಡಲಾಗುತ್ತಿದೆ ಎಂದರು. ಕಾರ್ಮಿಕ ವರ್ಗ ಈ ದೇಶದ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡುತ್ತಿದ್ದು ಕಾರ್ಮಿಕರು ಒಂದು ದಿನ ಮುಷ್ಕರ ನಡೆಸಿದರೆ ಈ ದೇಶದ ಆರ್ಥಿಕ ಸ್ಥಿತಿಗೆ ಧಕ್ಕೆ ಬರುತ್ತದೆ. ಕಾರ್ಮಿಕ ವರ್ಗ ನೆಮ್ಮದಿಯಿಂದ ಇದ್ದಾಗ ಮಾತ್ರ ಈ ದೇಶದ ಪ್ರಗತಿ ಸಾಧ್ಯ ಎಂದರು.ಈ ದಿನ ತಾಲೂಕಿನ 25ಜನ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಣೆ, 700 ಜನ ಕಟ್ಟಡ ಕಾರ್ಮಿಕರಿಗೆ ಅವರವರ ಕೆಲಸಗಳಿಗೆ ಅನುಗುಣವಾಗಿ ಕಿಟ್ ಹಾಗೂ 373 ಜನ ರಸ್ತೆ ನಿರ್ಮಾಣ ಕಾಮಗಾರಿ ಮಾಡುವ ಫಲಾನುಭವಿಗಳಿಗೆ ಕಿಟ್ ವಿತರಿಸಲಾಗಿದೆ ಎಂದರು.
ಈ ವೇಳೆ ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂಸಾಬ್, ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಸಮಿತಿ ಸದಸ್ಯ ಸೈಯದ್ ಗೌಸ್ ಪೀರ್, ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ಜೈನುಲ್ಲಾಖಾನ್. ಚನ್ನಮ್ಮಾಜಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಬಿ.ಗಣೇಶ್ ಆಚಾರ್, ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಕಾರ್ಮಿಕ ಅಧಿಕಾರಿ ರಾಜಪ್ಪ ಮೊದಲಾದವರು ಇದ್ದರು.ನನ್ನ ಅಧಿಕಾರದಲ್ಲಿ ಕುಟುಂಬ ಸದಸ್ಯರ ಹಸ್ತಕ್ಷೇಪವಿಲ್ಲ: ಶಾಸಕ
ಈ ಹಿಂದೆ ಕ್ಷೇತ್ರದಲ್ಲಿ ಅಧಿಕಾರ ಮಾಡಿದ್ದ ನಾಯಕರು ಕುಟುಂಬ ರಾಜಕಾರಣ ಮಾಡುತ್ತಿದ್ದರು. ಶಾಸಕರ ಅಧಿಕಾರದಲ್ಲಿ ಮಕ್ಕಳ ಹಸ್ತಕ್ಷೇಪ ಇತ್ತು, ಜನರು ಸಹ ಶಾಸಕ ಮತ್ತು ಅವರ ಮಕ್ಕಳ ಬಳಿ ಕೆಲಸ ಕೇಳಿಕೊಂಡು ಹೋದರೆ ಯಾವುದೇ ಕೆಲಸಗಳಾಗುತ್ತಿರಲಿಲ್ಲ. ನಾನು ಸಾಮಾನ್ಯ ಕುಟುಂಬದಿಂದ ಬಂದವನಾಗಿದ್ದು ಕ್ಷೇತ್ರದ ಜನರು ನನಗೊಬ್ಬನಿಗೆ ಮತ ನೀಡಿದ್ದಾರೆ. ನನ್ನ ಅಧಿಕಾರದಲ್ಲಿ ನನ್ನ ಕುಟುಂಬದ ಯಾವೊಬ್ಬ ಸದಸ್ಯರ ಹಸ್ತಕ್ಷೇಪವಿಲ್ಲ, ಹಾಗಾಗೀ ಕ್ಷೇತ್ರದ ಪ್ರತಿಯೊಬ್ಬರ ಸಮಸ್ಯೆ ನಾನೇ ಖುದ್ದಾಗಿ ಆಲಿಸಿ ಪರಿಹಾರ ಕೊಡಬೇಕಾಗಿದ್ದು, ಕೆಲ ಸಮಯಗಳಲ್ಲಿ ಸಮಯಕ್ಕೆ ಸರಿಯಾಗಿ ಸಭೆ-ಸಮಾರಂಭಗಳಿಗೆ ಹಾಜರಾಗಲು ಆಗುತ್ತಿಲ್ಲ ಎಂದು ಪ್ರಶ್ನಿಸಿದ ಮಾಧ್ಯಮದವರಿಗೆ ಶಾಸಕ ಬಸವರಾಜು ವಿ.ಶಿವಗಂಗಾ ಉತ್ತರ ನೀಡಿದರು.