ಲೋಕಸಭೆ ಫಲಿತಾಂಶ ನಂತರ ಜಿಪಂ, ತಾಪಂ ಚುನಾವಣೆ ಮುಹೂರ್ತ?

| Published : May 22 2024, 12:50 AM IST

ಸಾರಾಂಶ

ಕಾನೂನು ಅಡ್ಡಿ ನಿವಾರಣೆಗೆ ಸರ್ಕಾರ ಸಿದ್ಧತೆ ನಡೆಸಿದ್ದು, ಮಳೆಗಾಲದ ಬಳಿಕ ಪಂಚಾಯ್ತಿ ಚುನಾವಣೆ ನಡೆಯುವ ಸಾಧ್ಯತೆಯಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನೆನೆಗುದಿಗೆ ಬಿದ್ದಿರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್‌ ಚುನಾವಣೆ ಮಳೆಗಾಲದ ನಂತರವೇ ನಡೆಯುವ ಸಂಭವವಿದೆ.

ಸದ್ಯ ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರಕ್ಕೆ ಪಂಚಾಯತ್‌ ಚುನಾವಣೆ ಸೇರಿದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನಡೆಸುವ ಉದ್ದೇಶವಿದೆ. ಇದಕ್ಕಾಗಿ ಚುನಾವಣೆ ನಡೆಸಲು ಅಡ್ಡಿಯಾಗಿರುವ ಕಾನೂನು ಅಡೆ-ತಡೆಗಳನ್ನು ನಿವಾರಿಸಲು ಮುಂದಾಗಲಿದೆ.

ಚುನಾವಣೆ ನಡೆಸುವ ಸಂಬಂಧ ಈಗಾಗಲೇ ತಾ.ಪಂ. ಹಾಗೂ ಜಿಲ್ಲಾ ಪಂಚಾಯತ್‌ ಕ್ಷೇತ್ರಗಳ ಗಡಿ ಹಾಗೂ ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ನಿರ್ಧರಿಸಿದ್ದರೂ ವಾರ್ಡ್‌ವಾರು ಮೀಸಲಾತಿ ನಿಗದಿಗೊಳಿಸುವುದು ಬಾಕಿ ಇದೆ. ಈ ಬಗ್ಗೆ ಅಧಿಸೂಚನೆ ಹೊರಡಿಸಿ ಆಕ್ಷೇಪ ಆಹ್ವಾನಿಸಬೇಕಾಗಿದೆ. ಈ ಸಂಬಂಧ ಬಂದ ಆಕ್ಷೇಪಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿ ಪ್ರಕಟಿಸುವುದು ಬಾಕಿ ಇದೆ. ಇದಾದ ನಂತರ ರಾಜ್ಯ ಚುನಾವಣಾ ಆಯೋಗ ಚುನಾವಣೆ ನಡೆಸಬೇಕಾಗುತ್ತದೆ.

ಪಂಚಾಯಿತಿಗಳ ಚುನಾವಣೆ ನಡೆಸುವ ಸಂಬಂಧ ಕಳೆದ ಡಿಸೆಂಬರ್‌ನಲ್ಲಿ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್‌ 10 ದಿನದಲ್ಲಿ ಮೀಸಲಾತಿ ಪ್ರಕಟಿಸಿ, ಆಕ್ಷೇಪ ಆಹ್ವಾನಿಸಿ, ಅಂತಿಮ ಮೀಸಲಾತಿ ಪಟ್ಟಿ ಪ್ರಕಟಿಸಬೇಕು. ಇದಾದ ನಂತರ ಎರಡು ತಿಂಗಳಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸರ್ಕಾರಕ್ಕೆ ತಿಳಿಸಿತ್ತು. ಅದರಂತೆ ರಾಜ್ಯ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳ ಒಟ್ಟಾರೆ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿತ್ತು. ಆದರೆ ವಾರ್ಡ್‌ಗಳ ಮೀಸಲಾತಿ ಮಾತ್ರ ಈವರೆಗೆ ಅಂತಿಮಗೊಂಡಿಲ್ಲ.

ಸದ್ಯ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇದೆ. ಜತೆಗೆ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ನಡೆಯುತ್ತಿದೆ. ಇದಾದ ನಂತರ ವಿಧಾನ ಪರಿಷತ್ತಿನ 11 ಸ್ಥಾನಗಳ ಚುನಾವಣೆ ಎದುರಾಗಲಿದೆ. ಈ ಎಲ್ಲ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಪಂಚಾಯಿತಿ ಚುನಾವಣೆ ನಡೆಸುವ ಬಗ್ಗೆ ಸರ್ಕಾರ ಚರ್ಚಿಸಿ ನಿರ್ಧರಿಸುವ ಸಾಧ್ಯತೆ ಇದೆ.

ಜೂನ್‌ ತಿಂಗಳಿಂದ ಮಳೆಗಾಲ ಶುರುವಾಗಲಿರುವುದರಿಂದ ಮಳೆಗಾಲ ಮುಗಿದ ಮೇಲೆ ಅಂದರೆ ಅಕ್ಟೋಬರ್‌ ನಂತರವೇ ಚುನಾವಣೆ ನಡೆಸಬಹುದಾಗಿದೆ. ಅಷ್ಟರೊಳಗೆ ಕಾನೂನಿನ ಎಲ್ಲ ಅಡೆ-ತಡೆಗಳನ್ನು ನಿವಾರಿಸಲು ಸರ್ಕಾರಕ್ಕೆ ಅವಕಾಶವಿದೆ.

ಪಂಚಾಯ್ತಿ ಎಲೆಕ್ಷನ್‌ಗೆ ಸಜ್ಜಾಗಿ: ಡಿಕೆಶಿ ಸೂಚನೆ

ಕೆಪಿಸಿಸಿ ಅಧ್ಯಕ್ಷನಾಗಿ ಎಷ್ಟು ದಿವಸ ಇರುತ್ತೇನೆಯೋ ಗೊತ್ತಿಲ್ಲ. ಈಗಲೇ 4 ವರ್ಷ ಆಗಿದೆ. ಅಧಿಕಾರ ಬಿಟ್ಟುಕೊಡುವ ಮುನ್ನ ಪಕ್ಷ ಸಂಘಟನೆಗೆ ಭದ್ರ ಬುನಾದಿ ಹಾಕಿಕೊಡುತ್ತೇನೆ. ಮುಂಬರುವ ಬಿಬಿಎಂಪಿ, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಯತ್ತ ಕಾರ್ಯಕರ್ತರು, ಮುಖಂಡರು ಗಮನ ಹರಿಸಬೇಕು. ಪಕ್ಷ ಸಂಘಟಿಸಿ ಸಿದ್ಧರಾಗಬೇಕು ಎಂದು ಡಿ.ಕೆ. ಶಿವಕುಮಾರ್‌ ಸೂಚಿಸಿದ್ದಾರೆ. ಬೇಗ ಮೀಸಲು ಪ್ರಕಟಪಂಚಾಯಿತಿಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಬದ್ಧವಿದೆ. ಹಿಂದಿನ ಬಿಜೆಪಿ ಸರ್ಕಾರಕ್ಕೆ ಚುನಾವಣೆ ನಡೆಸಲು ಮನಸಿಲ್ಲದ ಕಾರಣ ಹಲವಾರು ನೆಪ ಒಡ್ಡಿ ಚುನಾವಣೆ ಮುಂದೂಡಿಕೊಂಡು ಬಂದಿತು. ಆದರೆ ನಮ್ಮ ಸರ್ಕಾರ ಬಂದ ಮೇಲೆ ಪಂಚಾಯಿತಿಗಳ ಗಡಿ ಮರುವಿಂಗಡಣೆ, ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಆದಷ್ಟು ಬೇಗ ಮೀಸಲಾತಿ ಪ್ರಕಟಿಸಲಾಗುವುದು. ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.