ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ತಾಲೂಕಿನ ವಿವಿಧ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ರೈತರು ಒಕ್ಕಲುತನ ಮಾಡಿದ ಬಳಿಕ ಭತ್ತದ ಹುಲ್ಲು, ತೊಗರಿ ಕಟ್ಟಿಗೆ ಸೇರಿದಂತೆ ಇನ್ನಿತರ ತ್ಯಾಜ್ಯ ವಸ್ತುಗಳನ್ನು ರಸ್ತೆ ಮೇಲೆ ಬೇಕಾಬಿಟ್ಟಿಯಾಗಿ ಬಿಸಾಡುತ್ತಿದ್ದಾರೆ. ಇದರಿಂದ ಸಂಚಾರಕ್ಕೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ.

ತುಂಗಭದ್ರಾ ನದಿ ತೀರದ ಪ್ರದೇಶದ ವ್ಯಾಪ್ತಿಯ ಗ್ರಾಮಗಳಲ್ಲಿ ಭತ್ತದ ಕಟಾವು ಭರದಿಂದ ಸಾಗಿದೆ. ಭತ್ತದ ಕಾಳು ಒಣಗಿಸಲು ರಸ್ತೆಯನ್ನೇ ಬಳಕೆ ಮಾಡುತ್ತಿದ್ದಾರೆ. ಜತೆಗೆ ಭತ್ತದ ಸೀಡ್ಸ್‌ ಉತ್ಪಾದನೆ ಕೂಡ ಇದೆ. ಇದರಲ್ಲಿ ಭತ್ತವನ್ನು ಹುಲ್ಲಿನಿಂದ ಬೇರ್ಪಡಿಸಲು ರಸ್ತೆ ಮೇಲೆ ಹಾಕಿದ್ದಾರೆ. ಆದರೆ ಆ ಹುಲ್ಲನ್ನು ಜಾನುವಾರುಗಳು ತಿನ್ನುವುದಿಲ್ಲವೆಂಬ ಕಾರಣಕ್ಕಾಗಿ ರಸ್ತೆ ಮೇಲೆ ಬಿಟ್ಟಿದ್ದಾರೆ. ಜತೆಗೆ ರಸ್ತೆ ತುಂಬೆಲ್ಲ ಭತ್ತದ ರಾಶಿ ಆವರಿಸಿದೆ. ಇದರಿಂದ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ.

ರಸ್ತೆಯಲ್ಲಿನ ರಾಶಿಗಳ ಪಕ್ಕದಲ್ಲಿ ದೊಡ್ಡ ಪ್ರಮಾಣದ ಕಲ್ಲುಗಳನ್ನು ಹಾಕುತ್ತಿದ್ದಾರೆ. ಇದರಿಂದ ಸಾಕಷ್ಟು ಬೈಕ್‌ ಸವಾರರು ರಾತ್ರಿ ವೇಳೆ ಆಯ ತಪ್ಪಿ ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ಇಷ್ಟಾದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್‌ ಇಲಾಖೆ ಕಣ್ಮುಚ್ಚಿ ಕುಳಿತಿವೆ. ವಾಹನ ಸವಾರರು ಸಂಚರಿಸಲು ಹೈರಾಣಾಗಿ ರೋಸಿ ಹೋಗಿದ್ದಾರೆ.

ರಾಜ್ಯ ಹೆದ್ದಾರಿಯನ್ನು ಒಕ್ಕಲುತನಕ್ಕೆ ಬಳಕೆ ಮಾಡಿಕೊಂಡಿರುವ ರೈತರು, ಭತ್ತದ ಹುಲ್ಲು ರಸ್ತೆ ಮೇಲೆ ಬಿಟ್ಟಿದ್ದಾರೆ. ಕೆಲವರು ಒಣಗಿದ ಬಳಿಕ ಹುಲ್ಲಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ರಸ್ತೆಗೆ ಹಾನಿಯಾಗುವ ಜತೆಗೆ ರಸ್ತೆ ಪಕ್ಕದ ಗಿಡ- ಮರಗಳು ಸುಟ್ಟು ಹೋಗಿವೆ.


ರಸ್ತೆ ಪಕ್ಕದಲ್ಲಿ ಆಳ ಗುಂಡಿಗಳು ಇರುವ ಜಾಗಗಳಲ್ಲಿ ಕಬ್ಬಿಣದ ಕಂಬಿಗಳನ್ನು ಅಳವಡಿಸಲಾಗಿದೆ. ಈ ಕಬ್ಬಿಣದ ಕಂಬಿಗಳನ್ನು ರೈತರು ಟ್ರ್ಯಾಕ್ಟರ್‌ಗಳನ್ನು ನುಗ್ಗಿಸಿ ಮುರಿದು ಹಾಕಿದ್ದಾರೆ. ಇಂತಹ ಕಂಬಿಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಗುಜರಿಗೆ ಹಾಕುತ್ತಿದ್ದಾರೆ.

ಇನ್ನು ಕೆಲವರು ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಟ್ರ್ಯಾಕ್ಟರ್‌ ಸಾಮಗ್ರಿಗಳನ್ನು ಮಾಡಿಸುತ್ತಿದ್ದಾರೆ. ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಇತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್‌ ಇಲಾಖೆ ಈ ಕುರಿತು ನಮಗೆ ದೂರು ಬಂದಿಲ್ಲವೆಂದು ಕೈಚೆಲ್ಲುತ್ತಿದ್ದಾರೆ.

ಅಲ್ಲಿಪುರ ಬಳಿ ರಸ್ತೆಯಲ್ಲಿ ಭತ್ತದ ಹುಲ್ಲು ಹಾಕಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ. ರಸ್ತೆ ಬದಿಯ ಕಬ್ಬಿಣದ ಕಂಬಿ ಕಳ್ಳತನ ಕುರಿತು ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ದೂರು ನೀಡುತ್ತೇವೆ. ರಸ್ತೆ ತೆರವು ಮಾಡಲು ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಎಇ ಜಾಹೀರ್‌.

ರಸ್ತೆ ಬದಿಯಲ್ಲಿನ ಕಬ್ಬಿಣ ಕಂಬಿ ಕಳ್ಳತನವಾಗಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ಮಾಹಿತಿ ಪಡೆಯುತ್ತೇವೆ. ಪೊಲೀಸರು ನಿರಂತರವಾಗಿ ಬೀಟ್‌ ಮಾಡುತ್ತಿದ್ದಾರೆ ಎನ್ನುತ್ತಾರೆ ಹಿರೇಹಡಗಲಿ ಪೊಲೀಸ್‌ ಠಾಣೆ ಪಿಎಸ್‌ಐ ಅಶೋಕ ಬೇವೂರು.