ರಾಜ್ಯ ನಾಯಕತ್ವ ಗೊಂದಲ: ಕಾಂಗ್ರೆಸ್‌ವರಿಷ್ಠರ ಭೇಟಿಗೆ ದಲಿತ ಸಚಿವರ ನಿರ್ಧಾರ

| Published : Feb 02 2025, 01:00 AM IST

ರಾಜ್ಯ ನಾಯಕತ್ವ ಗೊಂದಲ: ಕಾಂಗ್ರೆಸ್‌ವರಿಷ್ಠರ ಭೇಟಿಗೆ ದಲಿತ ಸಚಿವರ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದಲ್ಲಿನ ನಾಲ್ವರು ಎಸ್ಸಿ, ಎಸ್ಟಿ ಸಚಿವರು ಪ್ರತ್ಯೇಕವಾಗಿ ದೆಹಲಿಗೆ ತೆರಳಿ ಕಾಂಗ್ರೆಸ್‌ ವರಿಷ್ಠರನ್ನು ಭೇಟಿ ಮಾಡಲು ನಿರ್ಧರಿಸಿದ್ದು, ರಾಜ್ಯ ಸರ್ಕಾರದ ನಾಯಕತ್ವ ಕುರಿತು ಸ್ಪಷ್ಟತೆ ನೀಡುವಂತೆ ಹಾಗೂ ದಲಿತ ಸಚಿವರಿಗೆ ಪ್ರತ್ಯೇಕ ಸಭೆಗೆ ಅವಕಾಶ ಸೇರಿ ಹಲವು ಬೇಡಿಕೆಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದಲಿತರ ಸಚಿವರ ಪ್ರತ್ಯೇಕ ಸಭೆಗೆ ಬ್ರೇಕ್‌ ಹಾಕಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ನಡೆಗೆ ಬಗ್ಗೆ ಅಸಮಾಧಾನಗೊಂಡಿರುವ ಸಚಿವರು ವರಿಷ್ಠರನ್ನು ಭೇಟಿ ಮಾಡಿಯೇ ಈ ಬಗ್ಗೆ ಚರ್ಚಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್‌.ರಾಜಣ್ಣ, ಡಾ.ಜಿ.ಪರಮೇಶ್ವರ್‌ ಹಾಗೂ ಡಾ.ಎಚ್.ಸಿ.ಮಹದೇವಪ್ಪ ಅವರು ಪ್ರತ್ಯೇಕವಾಗಿ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ.

ಈ ವೇಳೆ ರಾಜ್ಯದಲ್ಲಿ ಸದೃಢ ಆಡಳಿತ ನೀಡಲು ನಾಯಕತ್ವ ಬದಲಾವಣೆ ಚರ್ಚೆ ಬಾರದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಕಾರ್ಯಕರ್ತರು ಹಾಗೂ ಮುಖಂಡರಿಗೆ ಸ್ಪಷ್ಟತೆ ನೀಡಬೇಕು. ಜತೆಗೆ ಸಚಿವರು, ಸಮಾಜದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಲಿದ್ದಾರೆ. ಜತೆಗೆ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಸಚಿವ ಸತೀಶ್ ಜಾರಕಿಹೊಳಿ ಅವರು ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣ ಮಾಡಿರುವ ಕರ್ನಾಟಕ ಭವನ ಉದ್ಘಾಟನೆ ವೇಳೆಯೇ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ. ಇನ್ನು ಪರಮೇಶ್ವರ್‌, ಡಾ.ಎಚ್.ಸಿ. ಮಹದೇವಪ್ಪ ಹಾಗೂ ಕೆ.ಎನ್‌. ರಾಜಣ್ಣ ಅವರು ಬೇರೆ ಬೇರೆ ಸಮಯದಲ್ಲಿ ಭೇಟಿ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಕೆ.ಎನ್‌. ರಾಜಣ್ಣ ಅವರು ದೆಹಲಿ ನಾಯಕರನ್ನು ಭೇಟಿ ಮಾಡುವುದನ್ನು ಖಚಿತಪಡಿಸಿದ್ದಾರೆ. ಸೂಕ್ತ ಸಮಯದಲ್ಲಿ ಭೇಟಿ ಮಾಡುವುದಾಗಿ ಹೇಳಿದ್ದಾರೆ.

ಇದಕ್ಕೂ ಮೊದಲು ಶುಕ್ರವಾರ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರೊಂದಿಗೆ ವಿಧಾನಸೌಧದಲ್ಲಿ ನಾಲ್ವರೂ ಸಚಿವರು ವಾಲ್ಮೀಕಿ ಜಾತ್ರಾ ಮಹೋತ್ಸವ ಸೇರಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಚಿವರ ದೆಹಲಿ ಭೇಟಿ ವಿಷಯ ಕುತೂಹಲ ಕೆರಳಿಸಿದೆ.