- ಮೇಳದಲ್ಲಿ ರೈತರ ಸನ್ಮಾನಿಸಿದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ಹಿರೇಕಲ್ಮಠದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಕೃಷಿ ಮೇಳದ ನಾಲ್ಕನೇ ಮತ್ತು ಕೊನೆ ದಿನವಾದ ಸೋಮವಾರ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾ ಸ್ವಾಮೀಜಿ ಅವರಿಂದ ರಾಜ್ಯ ಕೃಷಿ ಇಲಾಖೆಯಿಂದ ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಸರ್ಕಾರದಿಂದ ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುವ ನ್ಯಾಮತಿ ತಾಲೂಕಿನ ಸಾಧಕ ರೈತರಿಗೆ ಗೌರವಿಸಲಾಯಿತು.

ಸನ್ಮಾನಿತರ ವಿವರ:


ಶೇಂಗಾ ಬೆಳೆಯಲ್ಲಿ ಉತ್ತಮ ಕೃಷಿ ಮಾಡಿ ಅತಿ ಹೆಚ್ಚು ಇಳುವರಿ ಪಡೆದು ಸರ್ಕಾರದ ಕೃಷಿ ಇಲಾಖೆ ವತಿಯಿಂದ ರಾಜ್ಯ ಪ್ರಶಸ್ತಿ ಪಡೆದ ನ್ಯಾಮತಿ ತಾಲೂಕಿನ ರಾಮೇಶ್ವರದ ನವೀನ್, ಬೆಳಗುತ್ತಿಯ ಲಕ್ಷ್ಮಮ್ಮ, ರಾಮೇಶ್ವರದ ಸರ್ವಮಂಗಳಮ್ಮ, ಮಲ್ಲಿಗೇನಹಳ್ಳಿಯ ಮಂಜಪ್ಪ, ಬೆಳಗುತ್ತಿಯ ಕಲಾವತಿ, ಬೆಳಗುತ್ತಿಯ ಚಂದ್ರಪ್ಪ, ಬೆಳಗುತ್ತಿಯ ಸುರೇಶಪ್ಪ, ಹಾಗೂ ಮೆಕ್ಕೆಜೋಳ ಬೆಳೆಯನ್ನು ಅತಿ ಹೆಚ್ಚು ಬೆಳೆದು ಸಾಧನೆ ಮಾಡಿರುವ ಬೆಳಗುತ್ತಿಯ ರೇವಣಸಿದ್ದ ಶಿಮೋಳೆ. ಶೇಂಗಾ ಬೆಳೆದ 7 ಜನ ಮತ್ತು ಮೆಕ್ಕೆಜೋಳ ಬೆಳದ ಒಬ್ಬರು ಒಟ್ಟು 8 ಸಾಧಕ ರೈತರನ್ನು ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ಸನ್ಮಾನಿಸಿದರು.

ಹಿರೇಕಲ್ಮಠ ಶ್ರೀ ಮಾತನಾಡಿ, ರಾಜ್ಯದಲ್ಲಿ ಕೃಷಿ ಸಾಧನೆಗಾಗಿ ನ್ಯಾಮತಿ ತಾಲೂಕಿನಿಂದ 8 ರೈತರು ರಾಜ್ಯ ಪ್ರಶಸ್ತಿ ಪಡೆದಿರುವುದು ವಿಶೇಷವಾಗಿದೆ. ಇದು ತಾಲೂಕಿನ ಇತರೆ ರೈತರಿಗೂ ಮಾದರಿ ಹಾಗೂ ಅನುಕರಣೀಯವಾಗಿದೆ. ಮುಂದಿನ ದಿನಗಳಲ್ಲಿ ಹೊನ್ನಾಳಿ ಸೇರಿದಂತೆ ಇತರೆ ತಾಲೂಕುಗಳ ರೈತರು ಕೂಡ ಶ್ರಮವಹಿಸಿ ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಬೇಕು, ರಾಜ್ಯ ಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆಯುವಂತೆ ಆಗಬೇಕು ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ಜಿ. ಶಾಂತನಗೌಡ ರಾಜ್ಯಮಟ್ಟದ ಪ್ರಶಸ್ತಿ ಪಡೆದು ತಾಲೂಕಿಗೆ ಕೀರ್ತಿ ತಂದ ಅನ್ನದಾತ ರೈತರನ್ನು ಅಭಿನಂದಿಸಿದರು. ಕಾಂಗ್ರೆಸ್ ಒಬಿಸಿ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಶಿವಮೊಗ್ಗದ ಶಿಮುಲ್ ನಿರ್ದೇಶಕ ಹನುಮನಹಳ್ಳಿ ಬಸವರಾಜಪ್ಪ, ಕಂಚುಗಾರನಹಳ್ಳಿ ಬಸಪ್ಪ ತಾಲೂಕಿನ ಕೃಷಿ ಇಲಾಖೆಯ ಅಧಿಕಾರಿ ವಿಶ್ವನಾಥ, ಮುಖಂಡರಾದ ಧರ್ಮಪ್ಪ, ಅರಕೆರೆ ಮಧು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಕೆ.ಮಲ್ಲೇಶ್, ರೈತ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರ ಮುಖಂಡರು ಇದ್ದರು.

- - -

-2ಎಚ್.ಎಲ್.ಐ3:

ಹೊನ್ನಾಳಿ ಹಿರೇಕಲ್ಮಠದಲ್ಲಿ ಜರುಗುತ್ತಿರುವ ಚಂದ್ರ ಸ್ಮರಣೆ-2026 ರಾಜ್ಯ ಮಟ್ಟದ ಕೃಷಿ ಮೇಳದ ನಾಲ್ಕನೇ ದಿನವಾದ ಸೋಮವಾರ ಧರ್ಮ ಸಭೆಯಲ್ಲಿ ರಾಜ್ಯ ಪ್ರಶಸ್ತಿ ಪಡೆದ ಕೃಷಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.