ಮಹದೇಶ್ವರ ಬೆಟ್ಟದಲ್ಲಿ ಪತ್ರಕರ್ತರ ಮಕ್ಕಳಿಗೆ ರಾಜ್ಯಮಟ್ಟದ ಪುರಸ್ಕಾರ

| Published : May 27 2025, 12:28 AM IST / Updated: May 27 2025, 12:29 AM IST

ಮಹದೇಶ್ವರ ಬೆಟ್ಟದಲ್ಲಿ ಪತ್ರಕರ್ತರ ಮಕ್ಕಳಿಗೆ ರಾಜ್ಯಮಟ್ಟದ ಪುರಸ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಮಹದೇಶ್ವರ ಬೆಟ್ಟದಲ್ಲಿ ಪತ್ರಕರ್ತರ ಮಕ್ಕಳಿಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಆಯೋಜಿಸುವ ಸಂಬಂಧ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಜೊತೆ ಚರ್ಚಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳಿಗೆ ಹಮ್ಮಿಕೊಂಡಿರುವ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಸಲಾಗುವುದು ಎಂದು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರತಿಭಾ ಪುರಸ್ಕಾರ ನಡೆಸುವ ಸಂಬಂಧ ಆಗಮಿಸಿದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಮೊದಲು ಮಹದೇಶ್ವರ ಸ್ವಾಮಿಯ ದರ್ಶನ ಪಡೆದರು. ಶ್ರೀ ಕ್ಷೇತ್ರ ಮಲೆಮಾದೇಶ್ವರ ಅಭಿವೃದ್ಧಿ ಪ್ರಾಧಿಕಾರದಿಂದ ರಾಜ್ಯಾಧ್ಯಕ್ಷರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ನಂತರ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಅವರನ್ನು ಭೇಟಿ ಮಾಡಿ ಮಲೆಮಹದೇಶ್ವರ ಬೆಟ್ಟದಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜನೆ ಮಾಡಲು ಈಗಾಗಲೇ ಸಂಘದ ಪದಾಧಿಕಾರಿಗಳೆಲ್ಲ ತೀರ್ಮಾನಿಸಿದ್ದೇವೆ. ಈ ಕಾರ್ಯಕ್ರಮದ ಯಶಸ್ವಿಗೆ ಪ್ರಾಧಿಕಾರ ಸಂಪೂರ್ಣವಾಗಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಪತ್ರಕರ್ತರು ಹಾಗೂ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳು ಆಗಮಿಸುವುದರಿಂದ ವಾಸ್ತವಕ್ಕೆ ಕೊಠಡಿ ವ್ಯವಸ್ಥೆ , ಊಟದ ವ್ಯವಸ್ಥೆ ಮಾಡಿಕೊಡುವಂತೆ ತಿಳಿಸಲಾಯಿತು.

ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ಮಾತನಾಡಿ, ಮಲೆಮಹದೇಶ್ವರ ಬೆಟ್ಟದಲ್ಲಿ ಕಳೆದ ತಿಂಗಳು ಸಚಿವ ಸಂಪುಟ ಸಭೆ ಯಶಸ್ವಿಯಾಗಿ ಜರುಗಿದೆ. ಶ್ರೀ ಕ್ಷೇತ್ರದಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸಂತಸದ ವಿಚಾರ. ನಿಮ್ಮ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಹೆಚ್ಚಿನ ಪತ್ರಕರ್ತರು ಆಗಮಿಸುವುದರಿಂದ ಹೆಚ್ಚಿನ ಕೊಠಡಿ ಅವಶ್ಯಕತೆ ಇರುವುದರಿಂದ ಪ್ರಾಧಿಕಾರದ ಅಧ್ಯಕ್ಷರು ಮುಖ್ಯಮಂತ್ರಿಗಳಿಂದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ತಮ್ಮ ಸಂಘದಿಂದ ಮನವಿ ನೀಡಿ ಒಪ್ಪಿಗೆ ಪಡೆದುಕೊಂಡರೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಸಾಲೂರು ಬೃಹನ್ ಮಠದ ಆವರಣ, ವೇದ ಆಗಮ ಪಾಠಶಾಲೆಯ ಮೇಲ್ಭಾಗದಲ್ಲಿರುವ ಸಭಾಂಗಣ, ಮಲೆಮಹದೇಶ್ವರ ಕಲ್ಯಾಣ ಮಂಟಪ, ಹುಂಡಿ ಎಣಿಕೆ ನಡೆಯುವ ವಾಣಿಜ್ಯ ಸಂಕೀರ್ಣ ಕಟ್ಟಡದ ಆವರಣವನ್ನು ಕಾರ್ಯಕ್ರಮ ಆಯೋಜನೆ ಮಾಡಲು ಸ್ಥಳ ಪರಿಶೀಲನೆ ಮಾಡಲಾಯಿತು. ಸಾಲೂರು ಬೃಹನ್ ಮಠದ ಪೀಠಾಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಜೊತೆ ಕಾರ್ಯಕ್ರಮ ಚರ್ಚೆ ನಡೆಸಲಾಯಿತು. ಈ ವೇಳೆ ಸಾಲೂರು ಬೃಹನ್‌ ಮಠದ ಅಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಮಲೆಮಹದೇಶ್ವರ ಬೆಟ್ಟದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸಂತಸದ ವಿಚಾರ. ನಿಮ್ಮ ಕಾರ್ಯಕ್ರಮಕ್ಕೆ ಮಠದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಎಂದು ಸಲಹೆ ಸೂಚನೆ ನೀಡಿದರು.

ಈ ವೇಳೆ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದೇವರಾಜು ಕಪ್ಪಸೋಗೆ, ರಾಜ್ಯ ಸಮಿತಿ ಸದಸ್ಯ ಗೂಳಿಪುರ ನಂದೀಶ್, ತಾಲೂಕು ಅಧ್ಯಕ್ಷ ಮಹಾದೇಶ್, ಸಹ ಕಾರ್ಯದರ್ಶಿ ಗೋವಿಂದ್ ಕೆ, ನಿರ್ದೇಶಕರಾದ ಸೋಮಶೇಖರ್, ಸದಸ್ಯರಾದ ಮಹದೇವಸ್ವಾಮಿ ಹಾಜರಿದ್ದರು.