ಸಾರಾಂಶ
-ಕುರುಬ ಸಮಾಜದ ಪೂರ್ವಭಾವಿ ಸಭೆಯಲ್ಲಿ ಜೆ.ಎನ್.ಶ್ರೀನಿವಾಸ್ ಮಾಹಿತಿ । ನಾಯಕರು, ಜನಪ್ರತಿನಿಧಿ, ಮಠಾಧೀಶರಿಗೆ ಆಹ್ವಾನ
----ಕನ್ನಡಪ್ರಭ ವಾರ್ತೆ, ದಾವಣಗೆರೆ
ಭಕ್ತ ಕನಕ ದಾಸರು ಹಾಗೂ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ ಆಶಯದಂತೆ ಸಮಾಜದ ಜಾಗೃತಿ ಮೂಡಿಸುವ ಉದ್ದೇಶದಿಂದ ನವೆಂಬರ್ 30ರಂದು ನಗರದಲ್ಲಿ ರಾಜ್ಯಮಟ್ಟದ ಕನಕ ಜಯಂತಿ ಆಚರಿಸಲು ತೀರ್ಮಾನಿಸಲಾಯಿತು.ನಗರದ ದೇವರಾಜ ಅರಸು ಬಡಾವಣೆಯ ಶ್ರೀಬೀರೇಶ್ವರ ಭವನದಲ್ಲಿ ಸಮಾಜದ ಯುವ ಮುಖಂಡ, ಪಾಲಿಕೆ ಸದಸ್ಯ ಜೆ.ಎನ್.ಶ್ರೀನಿವಾಸ ಅಧ್ಯಕ್ಷತೆಯಲ್ಲಿ ನಡೆದ ಕನಕ ಜಯಂತಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಕುರುಬ ಸಮಾಜದಿಂದ ರಾಜ್ಯಮಟ್ಟದ ಕನಕ ಜಯಂತಿ ಆಚರಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಸಮಾಜದ ಹಿರಿಯ ಮುಖಂಡರಾದ ನಿವೃತ್ತ ಡಿವೈಎಸ್ಪಿ ಬಿ.ಬಿ.ಸಕ್ರಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ದಾರ್ಶನಿಕರನ್ನು ಒಂದು ಜಾತಿ, ಒಂದು ಪಕ್ಷಕ್ಕೆ ಸೀಮಿತಗೊಳಿಸುತ್ತಿರುವುದು ವಿಷಾದದ ಸಂಗತಿ. ತುಳಿತಕ್ಕೊಳಗಾದ ಸಮಾಜಗಳಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಜಾಗೃತಿ ಮೂಡಿಸಬೇಕಾಗಿದೆ. ಇಂತಹ ಜಾಗೃತಿಗಾಗಿ ನಾವು ದಾರ್ಶನಿಕರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ ಎಂದರು.ಮಾಜಿ ಮೇಯರ್ ಎಚ್.ಬಿ.ಗೋಣೆಪ್ಪ ಮಾತನಾಡಿ, ನ.18ರಂದು ಜಿಲ್ಲಾಡಳಿತದಿಂದ ಆಚರಿಸುವ ಕನಡ ಜಯಂತಿಯಲ್ಲೂ ನಾವು ಪಾಲ್ಗೊಂಡು, ಯಶಸ್ವಿಗೊಳಿಸಬೇಕಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ನಾವು ಸಂಘಟಿತರಾಗಲು ಜಯಂತಿ ಆಚರಿಸುವ ಅನಿವಾರ್ಯತೆ ಇದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ರಾಜಕೀಯ ಸ್ಥಾನಮಾನಗಳ ಬಗ್ಗೆ ಸಹ ನಾವು ಕೂಲಂಕುಷವಾಗಿ ಚರ್ಚಿಸಿ, ಜಾಗೃತರಾಗಬೇಕು. ನ.30ರಂದು ಕನಕ ಜಯಂತ್ಯುತ್ಸವವನ್ನು ನಾವೆಲ್ಲರೂ ಸಂಪೂರ್ಣ ಬೆಂಬಲ, ಸಹಕಾರ ನೀಡೋಣ ಎಂದು ಕರೆ ನೀಡಿದರು. ಪಾಲಿಕೆ ಸದಸ್ಯರಾದ ಸುಧಾ ಇಟ್ಟಿಗುಡಿ ಮಂಜುನಾಥ, ಆಶಾ ಉಮೇಶ ಮಾತನಾಡಿ, ಮಹಿಳೆಯರನ್ನು ಒಳಗೊಂಡಂತೆ ಜಯಂತಿಗಳನ್ನು ಆಚರಿಸಬೇಕಾಗಿದೆ. ನಾಡು, ನುಡಿಗಾಗಿ ಶ್ರಮಿಸಿದ ದಾರ್ಶನಿಕರುಗಳು, ಆಚಾರ ವಿಚಾರಗಳು ಮಹಿಳೆಯರಿಗೆ ತಲುಪಿದಾಗ ಸಮಾಜಗಳಲ್ಲಿ ಜಾಗೃತಿಯಾಗಲಿದೆ. ಎಲ್ಲರೂ ಸೇರಿಕೊಂಡು, ಕನಕ ಜಯಂತಿಯನ್ನು ಮಾದರಿಯಾಗಿ ಆಚರಿಸೋಣ ಎಂದು ಮನವಿ ಮಾಡಿದರು.
ಅಧ್ಯಕ್ಷತೆವಹಿಸಿದ್ದ ಪಾಲಿಕೆ ಸದಸ್ಯ ಜೆ.ಎನ್.ಶ್ರೀನಿವಾಸ ಮಾತನಾಡಿ, ನವೆಂಬರ್ 28ರಂದು ಬೈಕ್ ರ್‍ಯಾಲಿ ನ.30ರಂದು ಕನಕ ದಾಸರ ಜಯಂತಿ ಆಚರಿಸೋಣ, ಸಮಾರಂಭದಲ್ಲಿ ರಾಜ್ಯದ ಎಲ್ಲಾ ಪಕ್ಷಗಳ ಸಮಾಜದ ನಾಯಕರು, ಜನ ಪ್ರತಿನಿಧಿಗಳು, ಸಮಾಜದ ಮಠಾಧೀಶರನ್ನು ಸಮಾರಂಭಕ್ಕೆ ಆಹ್ವಾನಿಸಲಾಗುವುದು. ಲಕ್ಷಾಂತರ ಜನರನ್ನು ಸೇರಿಸುವ ಮೂಲಕ ಮಾದರಿ ಜಯಂತಿ ಆಚರಿಸೋಣ. ಸಮಾರಂಭಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.ನಿವೃತ್ತ ಇಂಜಿನಿಯರ್ ಎಸ್.ಎಲ್.ಆನಂದಪ್ಪ, ಜಿಪಂ ಮಾಜಿ ಸದಸ್ಯರಾದ ಮಾಯಕೊಂಡ ಎಸ್.ವೆಂಕಟೇಶ, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್.ಜಿ.ಗಣೇಶಪ್ಪ, ಮಾಜಿ ಉಪಾಧ್ಯಕ್ಷ ಹಾಲೇಕಲ್ಲು ಎಸ್.ಟಿ.ಅರವಿಂದ, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ನಿವೃತ್ತ ಡಿವೈಎಸ್ಪಿ ಮುರುಗಣ್ಣನವರ, ನಿವೃತ್ತ ಸಬ್ ರಿಜಿಸ್ಟರ್ ಮಾಯಕೊಂಡ ಮಲ್ಲಿಕಾರ್ಜುನಪ್ಪ ಮಾತನಾಡಿದರು.
ಸಮಾಜದ ಮುಖಂಡ ಕರೆಕಟ್ಟೆ ಲೋಕೇಶ, ವಿವೇಕಾನಂದ, ಇನ್‌ಸೈಟ್ ಸಂಸ್ಥೆಯ ಜಿ.ಬಿ.ವಿನಯಕುಮಾರ, ಬಿ.ಎಂ.ಸತೀಶ ಕೊಳೇನಹಳ್ಳಿ, ಬೆಳ್ಳಗೆರೆ ಶಿವಣ್ಣಕನಕ ಬ್ಯಾಂಕ್ ಅಧ್ಯಕ್ಷ ಪರಶುರಾಮ ಇಟ್ಟಿಗುಡಿ, ಇಟ್ಟಿಗುಡಿ ಮಂಜುನಾಥ, ಪಿ.ಜೆ.ರಮೇಶ, ಬಿ.ಲಿಂಗರಾಜ, ಶಿವಣ್ಣ, ಕುರುಬರ ಕೇರಿ ಜಯಣ್ಣ, ಎಸ್.ಎಸ್.ಗಿರೀಶ, ವಕೀಲ ಕೆ.ಲಕ್ಕಪ್ಪ, ಕೊಗ್ಗನೂರು ಮಂಜುನಾಥ, ಎಂ.ಮನು ಸೇರಿದಂತೆ ಅನೇಕರು ಇದ್ದರು. ಇದೇ ವೇಳೆ ರಾಜ್ಯಮಟ್ಟದ ಕನಕ ಜಯಂತಿಗಾಗಿ ವಿವಿಧ ಸಮಿತಿ ರಚಿಸಲಾಯಿತು.
...............ಫೋಟೊ: ದಾವಣಗೆರೆಯಲ್ಲಿ ನ.30ರಂದು ರಾಜ್ಯಮಟ್ಟದ ಕನಕ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಜೆ.ಎನ್.ಶ್ರೀನಿವಾಸ ಅಧ್ಯಕ್ಷತೆಯ ಕುರುಬ ಸಮಾಜದ ಪೂರ್ವಭಾವಿ ಸಭೆ.
9ಕೆಡಿವಿಜಿ6, 7