ಸಾರಾಂಶ
ಕೊಂಡಂಗೇರಿಯಲ್ಲಿ ಎಸ್ ಎಸ್ ಎಫ್ ವತಿಯಿಂದ ನಡೆದ ರಾಜ್ಯಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ, ಶಾಲಾ, ಕಾಲೇಜುಗಳಿಗೆ ಹೋಗಿ ಪದವಿ ಪಡೆದೇ ವಿದ್ಯಾವಂತರಾಗಬೇಕೆಂದಿಲ್ಲ. ಪುಸ್ತಕಗಳಲ್ಲಿ ಸಾಹಿತ್ಯ ಓದಿನ ಮೂಲಕವೂ ಖಂಡಿತವಾಗಿ ವಿದ್ಯಾವಂತರಾಗಲು ಸಾಧ್ಯ ಎಂದರು.
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಶಾಲಾ, ಕಾಲೇಜುಗಳಿಗೆ ಹೋಗಿ ಪದವಿ ಪಡೆದೇ ವಿದ್ಯಾವಂತರಾಗಬೇಕೆಂದಿಲ್ಲ. ಪುಸ್ತಕಗಳಲ್ಲಿ ಸಾಹಿತ್ಯ ಓದಿನ ಮೂಲಕವೂ ಖಂಡಿತವಾಗಿ ವಿದ್ಯಾವಂತರಾಗಲು ಸಾಧ್ಯ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟಿದ್ದಾರೆ.ಕೊಂಡಂಗೇರಿಯಲ್ಲಿ ರಾಜ್ಯಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಸಮಾಜದಲ್ಲಿ ವಿದ್ಯಾಭ್ಯಾಸಕ್ಕೆ ಒತ್ತು ಕೊಡು ಸಮಯ ಬಂದಿದೆ. ನಮ್ಮ ಮಕ್ಕಳು ವಿದ್ಯಾವಂತರಾಗಬೇಕು ಎಂದರು.ಕೊಂಡಂಗೇರಿಯ ಶಾದಿ ಮಹಲ್ ಸಭಾಂಗಣದಲ್ಲಿ 2 ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ 1000 ಕ್ಕೂ ಅಧಿಕ ವಿದ್ಯಾರ್ಥಿಗಳು 110 ಸ್ವರ್ಧೆಗಳಲ್ಲಿ ಭಾಗವಹಿಸಿದರು. 50 ಮಂದಿ ತೀರ್ಪುಗಾರರಾಗಿ ಭಾಗವಹಿಸಿದರು.
ರಾಜ್ಯಮಟ್ಟದಲ್ಲಿ ಚಾಂಪಿಯನ್ ಆಗಿ ದಕ್ಷಿಣ ಕನ್ನಡ ಈಸ್ಟ್ ಪ್ರಶಸ್ತಿ ಮುಡಿಗೇರಿಸಿತು. ರನ್ನರ್ಸ್ ಸ್ಥಾನಕ್ಕೆ ಬೆಂಗಳೂರು ತಂಡ ತೃಪ್ತಿ ಪಟ್ಟುಕೊಂಡಿತು. ಮೂರನೇ ಸ್ಥಾನಕ್ಕೆ ದಕ್ಷಿಣ ಕನ್ನಡ ವೆಸ್ಟ್ ಆಯ್ಕೆಯಾಯಿತು.ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು 29,30 ರಂದು ಗೋವಾದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಸಾಹಿತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಮಾರೋಪ ಸಮಾರಂಭ:ಸಯ್ಯದ್ ಶಿಯಾಬುದ್ದಿನ್ ಮಶ್ಹೂರ್ ತಲಕ್ಕಿ ತಂಙಳ್ ಪ್ರಾರ್ಥನೆ ನೇತೃತ್ವ ವಹಿಸಿ ಮಾತನಾಡಿದರು.
ಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷ ಹಾಫೀಝ್ ಸೂಫಿಯಾನ್ ಸಖಾಫಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಾಹಿತಿ ಇಸ್ಮತ್ ಫಜೀರ್ ಎಸ್‌ಎಸ್‌ಎಫ್ ಕುರಿತು ಮಾತನಾಡಿದರು.
ಎಸ್‌ಎಸ್‌ಎಫ್ ಮಾಜಿ ರಾಜ್ಯಾಧ್ಯಕ್ಷ, ಸಾಹಿತ್ಯೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೃತಜ್ಞತೆ ಸಲ್ಲಿಸಿದರು.ಎಸ್‌ಎಸ್‌ಎಫ್ ಸದಸ್ಯತ್ವ ಅಭಿಯಾನದ ಪೋಸ್ಟರ್‌ನ್ನು ನಾಯಕರು ಬಿಡುಗಡೆಗೊಳಿಸಿದರು.
ಸಯ್ಯದ್ ಸೈಫುದ್ದಿನ್ ತಂಙಳ್, ಮುಸ್ಲಿಂ ಜಮಾಅತ್ ಕೋಶಾಧಿಕಾರಿ ಖಾಲಿದ್ ಫೈಝಿ, ಕಾರ್ಯದರ್ಶಿ ಮೊಹಮ್ಮದ್ ಹಾಜಿ, ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ ಬಷೀರ್ ಸಅದಿ, ಮಹಲ್ ಖತೀಬ್ ಸ್ವಾದಿಕ್ ಸಖಾಫಿ, ಎಸ್‌ಎಸ್‌ಎಫ್ ಮಾಜಿ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್, ಎನ್ ಸಿ ರಹೀಂ, ಮುಹಿನ್ ಸಖಾಫಿ, ಸಖಾಫಿ, ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ, ಕಾಂಗ್ರೆಸ್ ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ ಹನೀಫ್, ಅಲ್ಪಸಂಖ್ಯಾತ ವಿರಾಜಪೇಟೆ ತಾಲೂಕು ಅಧ್ಯಕ್ಷ ರಫೀಕ್, ಅಲ್ಪಸಂಖ್ಯಾತ ಜೆಡಿಎಸ್ ಜಿಲ್ಲಾಧ್ಯಕ್ಷ ಜಾಸಿರ್, ವಿರಾಜಪೇಟೆ ಯುವ ಜೆಡಿಎಸ್ ಅಧ್ಯಕ್ಷ ಸೈಫುದ್ದಿನ್, ಯಾಕೂಬ್ ಮಾಸ್ಟರ್, ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ಝುಬೈರ್ ಸಅದಿ, ಕಾರ್ಯದರ್ಶಿ ಜುನೈದ್ ಅಮ್ಮತಿ, ಕೆಸಿಎಫ್ ನಾಯಕ ಖಲಂದರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಫ್ವಾನ್ ಸಖಾಫಿ, ಕೋಶಾಧಿಕಾರಿ ಮುಸ್ತಫಾ ನಹಿಮಿ, ಸಾಹಿತ್ಯೋತ್ಸವ ಸಮಿತಿ ಚೇರ್ಮೆನ್ ಮುಜೀಬ್ ಕೊಂಡಂಗೇರಿ, ಕನ್ವೀನರ್ ಶಿಹಾಬ್ ಮಡಿವಾಳ ಮತ್ತಿತರರು ಇದ್ದರು.