ಸಾರಾಂಶ
ಹಾವೇರಿ: ಮಕ್ಕಳಲ್ಲಿ ಬರುವ ಸಾಂಕ್ರಾಮಿಕ ರೋಗಗಳ ಕುರಿತು ಮೇ 25ರಂದು ಮೊದಲನೆ ಬಾರಿಗೆ ರಾಜ್ಯಮಟ್ಟದ ವೈದ್ಯಕೀಯ ಸಮಾವೇಶವನ್ನು ಹಾವೇರಿಯ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ವೈದ್ಯರ ಸಂಘದ ಸಾಂಕ್ರಾಮಿಕ ರೋಗಗಳ ವಿಭಾಗದ ಅಧ್ಯಕ್ಷ ಡಾ. ರಾಜಕುಮಾರ ಮರೋಳ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಕ್ಕಳಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಕಾರಣಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ನುರಿತ ತಜ್ಞರಿಂದ ವಿಶೇಷ ಉಪನ್ಯಾಸ ಹಾಗೂ ಸಮಾವೇಶ ಏರ್ಪಡಿಸಲಾಗಿದೆ. ಉನ್ನತ ವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಹಾಗೂ ಮಕ್ಕಳ ತಜ್ಞರಿಗೆ ಸಮಾವೇಶ ತುಂಬಾ ಮಹತ್ವದ್ದಾಗಿದೆ ಎಂದರು.ಮೇ 25ರಂದು ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ಉಪನ್ಯಾಸಗಳು ನಡೆಯಲಿವೆ. ಮಧ್ಯಾಹ್ನ 12ಕ್ಕೆ ಸಮಾವೇಶದ ಉದ್ಘಾಟನೆ ನಡೆಯಲಿದೆ. ಭಾರತೀಯ ಮಕ್ಕಳ ವೈದ್ಯರ ಸಂಘದ ರಾಷ್ಟ್ರೀಯ ಅಧ್ಯಕ್ಷ ನಾಗಪುರದ ಡಾ. ವಸಂತ ಕಲಾತಕರ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾರತೀಯ ಮಕ್ಕಳ ವೈದ್ಯರ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ಪೂರತನ ಡಾ. ಯೋಗೇಶ ಪಾರೀಬ, ಖಜಾಂಚಿ ಕೊಲ್ಕತ್ತದ ಡಾ. ಅತನು ಭದ್ರಾ, ಹಿಂದಿನ ಅಧ್ಯಕ್ಷ ಡಾ. ಬಸವರಾಜ ಜೆ.ವಿ., ಡಾ. ಸಂತೋಷ ಸೊಅನ್ಸ, ಮತ್ತು ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಅಧ್ಯಕ್ಷ ಡಾ. ಭಾಸ್ಕರ ಶಣಾಯ, ಹಿಂದಿನ ಅಧ್ಯಕ್ಷ ಡಾ. ನಾರಾಯಣಪ್ಪ, ಕರ್ನಾಟಕ ರಾಜ್ಯ ಐಎಪಿ ಅಧ್ಯಕ್ಷ ಡಾ. ಶಂಕರ ಪಾಟೀಲ ಮತ್ತು ಕಾರ್ಯದರ್ಶಿ ಸಿದ್ದು ಚರ್ಕಿ, ಹಾವೇರಿ ವೈದ್ಯಕೀಯ ವಿಜ್ಞಾ ನ ಸಂಸ್ಥೆಯ ನಿರ್ದೇಶಕ ಡಾ. ಪ್ರದೀಪ ಕುಮಾರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಿ.ಆರ್. ಹಾವನೂರ, ಡಾ. ಶ್ರೀನಾಥ ಮುಗಳಿ, ಡಾ. ಎಲ್.ಎಚ್. ಬಿದರಿ, ಡಾ. ಗುರುಪ್ರಸಾದ, ಡಾ. ಕಾಳಪ್ಪನವರ, ಡಾ. ಬಾಣಾಪೂರಮಠ ಭಾಗವಹಿಸಲಿದ್ದಾರೆ ಎಂದರು.ಪುಸ್ತಕ ಬಿಡುಗಡೆ: ಕಾರ್ಯಕ್ರಮದಲ್ಲಿ ಡಾ. ರಾಜಕುಮಾರ ಮರೋಳ ಅವರು ಬರೆದಿರುವ ತಂದೆ- ತಾಯಂದಿರಿಗೆ ಮಕ್ಕಳನ್ನು ಬೆಳೆಸಲು ಅನುಕೂಲವಾಗುವ ಪುಸ್ತಕ ಬಿಡುಗಡೆಗೊಳಿಸಲಾಗುವುದು. ಸಮಾವೇಶದಲ್ಲಿ ಒಟ್ಟು ರಾಜ್ಯ ಹಾಗೂ ರಾಷ್ಟ್ರದ ವಿವಿಧೆಡೆಯಿಂದ 300 ಮಕ್ಕಳ ತಜ್ಞರು ಭಾಗವಹಿಸಲಿದ್ದಾರೆ ಎಂದರು. ಡಾ. ಎಸ್.ಎಲ್. ಬಾಲೆಹೊಸೂರ, ಡಾ. ಅಂಜನಕುಮಾರ, ಡಾ. ನವೀನ ಸಂಗೂರಮಠ, ಡಾ. ಬಸವರಾಜ ಕೊಳ್ಳಿ, ಡಾ. ಲಕ್ಷ್ಮೀಪತಿ ಇದ್ದರು.ಸಂಭ್ರಮದ ಫಕೀರೇಶ್ವರ ಶಾಖಾಮಠದ ರಥೋತ್ಸವ
ಸವಣೂರು: ಪಟ್ಟಣದ ಕೋರಿಪೇಟೆಯಲ್ಲಿರುವ ಶಿರಹಟ್ಟಿಯ ಫಕೀರೇಶ್ವರ ಶಾಖಾಮಠದ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಅದ್ಧೂರಿ ರಥೋತ್ಸವ ಜರುಗಿತು.ಪ್ರಾಥಃಕಾಲ ಫಕೀರೇಶ್ವರ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯ ಕೈಗೊಳ್ಳಲಾಯಿತು.ಮಹಿಳಾ ಡೊಳ್ಳು ಮೇಳ, ಕುದುರೆ ಕುಣಿತ, ಆನೆ ಅಂಬಾರಿ ಪಲ್ಲಕ್ಕಿ, ಗೊಂಬೆ ಕುಣಿತ ಸೇರಿದಂತೆ ವಿವಿಧ ವಾದ್ಯ ವೈಭವಗಳೊಂದಿಗೆ ಶ್ರೀಮಠದಿಂದ ಆರಂಭಗೊಂಡ ಮೆರವಣಿಗೆ ಕೋರಿಪೇಟೆ, ಬುಧವಾರ ಪೇಟೆ, ಶಿಂಪಿಗಲ್ಲಿ, ಉಪ್ಪಾರ ಓಣಿ, ಶುಕ್ರವಾರ ಪೇಟೆ, ಚಿತ್ರಗಾರ ಓಣಿ, ಮುಖ್ಯಮಾರುಕಟ್ಟೆ ಸೇರಿದಂತೆ ರಾಜಬೀದಿಯಲ್ಲಿ ಶ್ರೀಮಠಕ್ಕೆ ಸಂಪನ್ನಗೊಂಡಿತು.ಸಂಜೆ ತಾಲೂಕಿನ ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ರಥೋತ್ಸವ ಬುಧವಾರ ಪೇಟೆಯ ಮಾರ್ಗವಾಗಿ ದೊಡ್ಡಕೆರೆಯ ಎದುರಲ್ಲಿರುವ ಪಾದಗಟ್ಟಿಗೆ ತೆರಳಿ ಪೂಜೆ ಸಲ್ಲಿಸಿ ಮರಳಿ ದೇವಸ್ಥಾನ ತಲುಪಿತು.ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ತೇರಿಗೆ ಬಾಳೆಹಣ್ಣು, ಉತ್ತತ್ತಿ ಎಸೆದು ಹರ ಹರ ಮಹಾದೇವ ಘೋಷಣೆಯೊಂದಿಗೆ ಹರ್ಷ ವ್ಯಕ್ತಪಡಿಸಿ ಪುನೀತರಾದರು. ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತರು ಪಾಲ್ಗೊಂಡಿದ್ದರು. ನಂತರ ಶ್ರೀಮಠದ ಸಭಾಭವನದಲ್ಲಿ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.